ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ದಿಗ್ವಿಜಯ ಸಾಧಿಸಿದ ಬೆನ್ನಲ್ಲೇ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಬದಲಾವಣೆಗಳು ಗಾಳಿ ಬೀಸತೊಡಗಿವೆ. ಇದರ ಭಾಗವಾಗಿ, ಸ್ಥಳೀಯ ಉದ್ವಿಗ್ನತೆ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಅಸನ್ಸೋಲ್ನ ಪ್ರಸಿದ್ಧ ದುರ್ಗಾ ದೇವಸ್ಥಾನವು ಸೋಮವಾರ ಭಕ್ತರಿಗಾಗಿ ಮತ್ತೆ ತೆರೆದಿದೆ. ಶ್ರೀ ಶ್ರೀ ದುರ್ಗಾಮಾತಾ ಚಾರಿಟಬಲ್ ಟ್ರಸ್ಟ್ ನಿರ್ವಹಣೆಯಲ್ಲಿದ್ದ ಈ ದೇಗುಲಕ್ಕೆ ಈ ಹಿಂದೆ ವರ್ಷವಿಡೀ ಪ್ರವೇಶವಿರಲಿಲ್ಲ. ಕೇವಲ ದುರ್ಗಾ ಪೂಜೆ ಮತ್ತು ಲಕ್ಷ್ಮಿ ಪೂಜೆಯಂತಹ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಸೀಮಿತವಾಗಿ ಪೂಜೆ ನಡೆಯುತ್ತಿತ್ತು. ಆದರೆ ಈಗ ಪಶ್ಚಿಮ ವರ್ಧಮಾನ್ ಜಿಲ್ಲೆಯ ಎಲ್ಲಾ ಒಂಬತ್ತು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ದೇವಸ್ಥಾನದ ಬಾಗಿಲು ತೆರೆದಿದ್ದು, ಭಕ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ವರ್ಷವಿಡೀ ಭಕ್ತರಿಗೆ ದೇವಾಲಯಕ್ಕೆ ಪ್ರವೇಶ
ದೇವಸ್ಥಾನದ ಮರುಆರಂಭವು ಸ್ಥಳೀಯರ ಪಾಲಿಗೆ ಕೇವಲ ಧಾರ್ಮಿಕ ವಿಚಾರವಾಗಿ ಉಳಿಯದೆ, ರಾಜ್ಯದಲ್ಲಿ ಉಂಟಾಗಿರುವ ದೊಡ್ಡ ರಾಜಕೀಯ ಬದಲಾವಣೆಯ ಸಂಕೇತವಾಗಿ ಕಂಡುಬರುತ್ತಿದೆ. ಅಸನ್ಸೋಲ್ ಉತ್ತರ ಕ್ಷೇತ್ರದ ನೂತನ ಶಾಸಕ ಕೃಷ್ಣೇಂದು ಮುಖರ್ಜಿ ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ, “ನಾನು ಗೆದ್ದರೆ ವರ್ಷವಿಡೀ ದೇವಾಲಯ ಭಕ್ತರಿಗೆ ಸಿಗುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದರು. ಅದರಂತೆ ಗೆಲುವಿನ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಬಾಗಿಲು ತೆರೆಸುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಈ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಭಕ್ತರು ದೇವಸ್ಥಾನದ ಮುಂದೆ ಜಮಾಯಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ವಿಜಯೋತ್ಸವ ಆಚರಿಸಿದರು.
ಬಂಗಾಳದ ಚುನಾವಣಾ ಫಲಿತಾಂಶವು ಈ ಬಾರಿ ಇಡೀ ದೇಶವನ್ನೇ ಬೆರಗುಗೊಳಿಸಿದೆ. ಕಳೆದ 15 ವರ್ಷಗಳಿಂದ ರಾಜ್ಯವನ್ನು ಆಳುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರದಿಂದ ಕೆಳಗಿಳಿದಿದೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ ಬರೊಬ್ಬರಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಇತಿಹಾಸ ಬರೆದಿದೆ. ಆಡಳಿತರೂಢ ಟಿಎಂಸಿ ಕೇವಲ 80 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದ್ದು, ಪಶ್ಚಿಮ ಬಂಗಾಳದ ರಾಜಕೀಯ ಹಾದಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.
ಬಂಗಾಳದಲ್ಲಿ ಈ ಬಾರಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಶೇ. 92 ರಷ್ಟು ದಾಖಲೆ ಪ್ರಮಾಣದ ಮತದಾನವಾಗಿದ್ದು ವಿಶೇಷವಾಗಿತ್ತು. ಆದರೆ, ಚುನಾವಣಾ ಅಕ್ರಮಗಳು ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ‘ಫಾಲ್ಟಾ’ ಕ್ಷೇತ್ರದಲ್ಲಿ ಮೇ 21 ರಂದು ಮರು ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಒಂದು ಕ್ಷೇತ್ರದ ಫಲಿತಾಂಶವು ಮೇ 24 ರಂದು ಪ್ರಕಟವಾಗಲಿದ್ದರೂ, ಈಗಾಗಲೇ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿ ಅಧಿಪತ್ಯ ಸ್ಥಾಪಿಸಿರುವುದರಿಂದ ರಾಜ್ಯದಲ್ಲಿ ಹೊಸ ಸರ್ಕಾರದ ರಚನೆಗೆ ಕ್ಷಣಗಣನೆ ಆರಂಭವಾಗಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ: ಒಂದು ವರ್ಷದ ಬಳಿಕ ಶಪಥ ಪೂರೈಸಿ ಮುಂಡನ ಮಾಡಿಸಿಕೊಂಡ ಕಾರ್ಯಕರ್ತ!
