TOP NEWS

BJP: ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ: ಒಂದು ವರ್ಷದ ಬಳಿಕ ಶಪಥ ಪೂರೈಸಿ ಮುಂಡನ ಮಾಡಿಸಿಕೊಂಡ ಕಾರ್ಯಕರ್ತ!

bjp worker shaved head after west Bengal win

ಧನ್‌ಬಾದ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಗಳಿಸುತ್ತಿದ್ದಂತೆಯೇ, ನೆರೆಯ ಜಾರ್ಖಂಡ್ ರಾಜ್ಯದ ಧನ್‌ಬಾದ್‌ನಲ್ಲಿ ಅಪರೂಪದ ಸಂಭ್ರಮಾಚರಣೆ ನಡೆದಿದೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ಕೂದಲು ಕತ್ತರಿಸುವುದಿಲ್ಲ ಎಂದು ಪಣ ತೊಟ್ಟಿದ್ದ ಕಾರ್ಯಕರ್ತರೊಬ್ಬರು, ಫಲಿತಾಂಶ (BJP) ಹೊರಬೀಳುತ್ತಿದ್ದಂತೆಯೇ ಸಾರ್ವಜನಿಕವಾಗಿ ಮುಂಡನ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಂಕಲ್ಪ ಪೂರೈಸಿದ್ದಾರೆ.

ಏನಿದು ವಿಶೇಷ ಶಪಥ? ಧನ್‌ಬಾದ್‌ನ ಮನೈಟಾಂಡ್ ಮಂಡಲದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸುನಿಲ್ ಕುಮಾರ್ ಪಾಂಡೆ ಈ ವಿಶಿಷ್ಟ ಶಪಥ ಮಾಡಿದವರು. ಕಳೆದ ಒಂದು ವರ್ಷದ ಹಿಂದೆ, ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿಯ ಪೂರ್ಣ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ನಾನು ತಲೆಗೂದಲು ಹಾಗೂ ಗಡ್ಡವನ್ನು ಕತ್ತರಿಸುವುದಿಲ್ಲ ಎಂದು ಅವರು ಶಪಥ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಅವರು ಕ್ಷೌರ ಮಾಡಿಸಿಕೊಳ್ಳದೆ ಸಂಕಲ್ಪಕ್ಕೆ ಬದ್ಧರಾಗಿದ್ದರು.

ಸಾರ್ವಜನಿಕವಾಗಿ ಮಾತು ಉಳಿಸಿಕೊಂಡ ಪಾಂಡೆ: ಮೇ 4ರಂದು ಬಂಗಾಳದ ಚುನಾವಣಾ ಫಲಿತಾಂಶದ ಚಿತ್ರಣ ಸ್ಪಷ್ಟವಾಗಿ, ಬಿಜೆಪಿ ಭರ್ಜರಿ ಜಯ ಸಾಧಿಸುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಸುನಿಲ್ ಪಾಂಡೆ ರಣಧೀರ್ ವರ್ಮಾ ಚೌಕ್‌ಗೆ ಆಗಮಿಸಿದರು. ಸ್ಥಳೀಯ ಶಾಸಕ ರಾಜ್ ಸಿನ್ಹಾ ಹಾಗೂ ನೂರಾರು ಬೆಂಬಲಿಗರ ಸಮ್ಮುಖದಲ್ಲಿ ಕೂದಲು ಮತ್ತು ಗಡ್ಡವನ್ನು ಕತ್ತರಿಸಿ ಮುಂಡನ ಮಾಡಿಸಿಕೊಂಡರು. ಕಾರ್ಯಕರ್ತನ ಈ ನಿಸ್ವಾರ್ಥ ಕಾಳಜಿಯನ್ನು ಶಾಸಕರು ಮುಕ್ತಕಂಠದಿಂದ ಶ್ಲಾಘಿಸಿದರು.

ಜಲ್‌ಮುರಿ ಹಂಚಿ ವಿಜಯೋತ್ಸವ: ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಂಗಾಳದ ವಿಶೇಷ ತಿಂಡಿಯಾದ ‘ಜಲ್‌ಮುರಿ’ (ಮಂಡಕ್ಕಿ ಮಿಶ್ರಣ) ಸ್ಟಾಲ್ ಹಾಕಲಾಗಿತ್ತು. ನೆರೆದಿದ್ದ ಎಲ್ಲರಿಗೂ ಈ ತಿಂಡಿಯನ್ನು ಹಂಚುವ ಮೂಲಕ ಕಾರ್ಯಕರ್ತರು ಬಂಗಾಳದ ಸಾಂಸ್ಕೃತಿಕ ಸೊಗಡಿನೊಂದಿಗೆ ಗೆಲುವನ್ನು ಆಚರಿಸಿದರು. ಟಿಎಂಸಿ ಆಡಳಿತ ಅಂತ್ಯವಾಗಲಿ ಎಂಬ ಗುರಿಯೊಂದಿಗೆ ವರ್ಷವಿಡೀ ಕೂದಲು ಬೆಳೆಸಿಕೊಂಡಿದ್ದ ಪಾಂಡೆ ಅವರ ಶ್ರದ್ಧೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ: ನಿಜವಾಯ್ತು ಅಮಿತ್ ಶಾ ಅವರ ‘ಅಂಗ-ಬಂಗ-ಕಳಿಂಗ’ ಭವಿಷ್ಯವಾಣಿ!

Leave a Reply

Your email address will not be published. Required fields are marked *