TOP NEWS

Lokayukta: ಕಲಬುರಗಿಯಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ: ₹20 ಸಾವಿರ ಲಂಚ ಪಡೆಯುತ್ತಿದ್ದ ಕಾನ್‌ಸ್ಟೇಬಲ್ ರೆಡ್‌ಹ್ಯಾಂಡ್ ಲಾಕ್

Police Extortion Busted Lokayukta Arrests Constable Red Handed Over 20000 Bribe Demand

ಕಲಬುರಗಿ: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರ ಜಿಲ್ಲೆ (Lokayukta) ಕಲಬುರಗಿಯಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್‌ ಒಬ್ಬರು ಬಲೆಗೆ ಬಿದ್ದಿದ್ದಾರೆ.

20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸ್

ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪರಶುರಾಮ್ ಎಂಬುವವರು ₹20,000 ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಠಾಣೆಯ ಹಿಂಭಾಗದಲ್ಲೇ ಹಣ ಸ್ವೀಕರಿಸುತ್ತಿದ್ದಾಗ ಈ ದಾಳಿ ನಡೆದಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಕಾನ್‌ಸ್ಟೇಬಲ್ ವೀರೇಶ್ ಎಂಬಾತ ದಾಳಿಯ ಸುಳಿವು ತಿಳಿಯುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗಡಿಪಾರು ಬೆದರಿಕೆ ಆರೋಪ

ಹಣ ನೀಡದಿದ್ದರೆ ನಗರದಿಂದ ಗಡಿಪಾರು ಮಾಡುವುದಾಗಿ ವ್ಯಕ್ತಿಯೊಬ್ಬರಿಗೆ ಇಬ್ಬರೂ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಬೆದರಿಕೆಗೆ ಹೆದರಿದ ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಕ್ಕಾ ಯೋಜನೆ ರೂಪಿಸಿ ದಾಳಿ ನಡೆಸಿದ್ದಾರೆ. ಜಿಲ್ಲೆಯ ಜವಾಬ್ದಾರಿಯುತ ಸಚಿವರ ತವರಲ್ಲೇ ಪೊಲೀಸ್ ಸಿಬ್ಬಂದಿ ಲಂಚಕ್ಕೆ ಕನ್ನ ಹಾಕಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಶೇಷಚೇತನರ ಪಿಂಚಣಿಗಾಗಿ ಲಂಚ ಕೇಳಿದ್ದ ಮಾಜಿ ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು, ₹40 ಸಾವಿರ ದಂಡ

ಶಿವಮೊಗ್ಗ: ಹುಟ್ಟಿನಿಂದಲೇ ಮಾತು ಮತ್ತು ಶ್ರವಣ ದೋಷ ಹೊಂದಿದ್ದ ವಿಶೇಷಚೇತನ ವ್ಯಕ್ತಿಯೊಬ್ಬರ ಮಾಸಾಶನ ಬಿಡುಗಡೆ ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ಸರ್ಕಾರಿ ಅಧಿಕಾರಿಗೆ ಶಿವಮೊಗ್ಗದ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪುಷ್ಪಲತಾ ಎಂಬುವವರಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಸಶ್ರಮ ಜೈಲು ಶಿಕ್ಷೆ ಹಾಗೂ 40,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ ಹಾಗೂ ಲೋಕಾಯುಕ್ತ ದಾಳಿ

  • ಲಂಚಕ್ಕೆ ಬೇಡಿಕೆ: 2017ರಲ್ಲಿ ಡಿ.ಬಿ. ಹಳ್ಳಿಯ ನಿವಾಸಿ ಗಿರೀಶ್ ಎಂಬುವವರು ಮಾತು ಮತ್ತು ಕಿವಿ ಕೇಳಿಸದ ತಮ್ಮ ತಂದೆಯ ವಿಕಲಚೇತನರ ಪಿಂಚಣಿ (ಮಾಸಾಶನ) ಮಂಜೂರು ಮಾಡಿಸಲು ಕಚೇರಿಗೆ ಅಲೆದಾಡುತ್ತಿದ್ದರು. ಈ ವೇಳೆ ಉಪ ತಹಶೀಲ್ದಾರ್ ಪುಷ್ಪಲತಾ ಅವರು ಕೆಲಸ ಮಾಡಿಕೊಡಲು ₹10,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು.
  • ರೆಡ್‌ಹ್ಯಾಂಡ್ ಕಾರ್ಯಾಚರಣೆ: ಅಧಿಕಾರಿಯ ಲಂಚಬಾಕತನದಿಂದ ರೋಸಿಹೋದ ಗಿರೀಶ್, ಈ ಕುರಿತು ತಕ್ಷಣವೇ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ 2017ರ ಸೆಪ್ಟೆಂಬರ್ 21ರಂದು ಪಕ್ಕಾ ಯೋಜನೆ ರೂಪಿಸಿದ ಲೋಕಾಯುಕ್ತ ಅಧಿಕಾರಿಗಳು, ಭದ್ರಾವತಿ ತಾಲೂಕು ಕಚೇರಿಯಲ್ಲಿ ಗಿರೀಶ್ ಅವರಿಂದ ₹5,000 ಮುಂಗಡ ಲಂಚ ಪಡೆಯುತ್ತಿದ್ದಾಗ ಪುಷ್ಪಲತಾ ಅವರನ್ನು ಹಣ ಸಮೇತ ಕೈಯಾರೆ ಹಿಡಿದಿದ್ದರು.

ನ್ಯಾಯಾಲಯದ ವಿಚಾರಣೆ ಮತ್ತು ತೀರ್ಪು ಅಂದಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಚ್.ಎಸ್. ತಿಪ್ಪೇಸ್ವಾಮಿ ಅವರು ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಲವಾದ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟಿಸಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಸುಂದರ್ ರಾಜ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ವಿಶೇಷಚೇತನರ ಹಕ್ಕಿನ ಹಣಕ್ಕೂ ಕೈಯೊಡ್ಡಿದ ಅಧಿಕಾರಿಗೆ ಜೈಲು ಶಿಕ್ಷೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಇದನ್ನೂ ಓದಿ: ನೈಸ್ ರಸ್ತೆ ಸಂತ್ರಸ್ತರಿಗೆ ಬಿಗ್ ರಿಲೀಫ್: ಭೂಮಿ ಕಳೆದುಕೊಂಡ ರೈತರಿಗೆ ಎಕರೆಗೆ 15 ಸೈಟ್ ನೀಡಲು ನಿರ್ಧಾರ!

Leave a Reply

Your email address will not be published. Required fields are marked *