TOP NEWS

Nice Project: ನೈಸ್ ರಸ್ತೆ ಸಂತ್ರಸ್ತರಿಗೆ ಬಿಗ್ ರಿಲೀಫ್: ಭೂಮಿ ಕಳೆದುಕೊಂಡ ರೈತರಿಗೆ ಎಕರೆಗೆ 15 ಸೈಟ್ ನೀಡಲು ನಿರ್ಧಾರ!

NICE Project Controversy Major Relief for Landowners as Cabinet Sub Committee Approves 15 Sites per Acre

ಬೆಂಗಳೂರು: ಕಳೆದ ಕಾಲು ಶತಮಾನದಿಂದ ಪರಿಹಾರ ಸಿಗದೆ ಕಂಗಾಲಾಗಿದ್ದ ನೈಸ್ ರಸ್ತೆ (Nice Project) ಯೋಜನೆಯ ಸಂತ್ರಸ್ತ ರೈತರಿಗೆ ಕೊನೆಗೂ ದೊಡ್ಡ ನೆಮ್ಮದಿ ಸಿಗುವ ಲಕ್ಷಣಗಳು ಕಂಡುಬಂದಿವೆ. ಪರಿಹಾರ ಕಂಡುಕೊಳ್ಳಲಾಗದೆ ಸಂಕಷ್ಟದಲ್ಲಿದ್ದ ರೈತರಿಗೆ ಭೂಮಿಯ ಬದಲಾಗಿ ಪ್ರತಿ ಎಕರೆಗೆ ಗರಿಷ್ಠ 15 ನಿವೇಶನಗಳನ್ನು (ಸೈಟ್‌ಗಳು) ಪರಿಹಾರ ರೂಪದಲ್ಲಿ ನೀಡಲು ರಾಜ್ಯ ಸರ್ಕಾರದ ಸಂಪುಟ ಉಪಸಮಿತಿ ತೀರ್ಮಾನಿಸಿದೆ.

ರೈತರ ಹಿತರಕ್ಷಣೆಗಾಗಿ ಕ್ರಮ

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಂಪುಟ ಉಪಸಮಿತಿಯ ಮಹತ್ವದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಯೋಜನೆಯಿಂದ ಭೂಮಿ ಕಳೆದುಕೊಂಡು ದಶಕಗಳಿಂದ ಕಾಯುತ್ತಿರುವ ರೈತರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡು, ಅಧಿಕೃತವಾಗಿ ಈ ನಿವೇಶನಗಳನ್ನು ಸಂತ್ರಸ್ತ ರೈತರಿಗೆ ಹಂಚಿಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಉಪಸಮಿತಿಯು ಕೈಗೊಂಡಿರುವ ಈ ಪ್ರಮುಖ ಪ್ರಸ್ತಾಪವನ್ನು ಶೀಘ್ರದಲ್ಲೇ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಿ, ಅಂತಿಮ ಅನುಮೋದನೆ ಪಡೆಯಲಾಗುತ್ತದೆ. ಸಂಪುಟದ ಒಪ್ಪಿಗೆ ಸಿಕ್ಕ ತಕ್ಷಣವೇ ನಿವೇಶನ ಹಂಚಿಕೆಯ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

25 ವರ್ಷ ಕಳೆದರೂ ಸಿಗದ ಸೂಕ್ತ ಪರಿಹಾರ

ನೈಸ್ ರಸ್ತೆ ನಿರ್ಮಾಣಕ್ಕಾಗಿ ಭೂಮಿ ನೀಡಿದ ರೈತರಿಗೆ ಸುದೀರ್ಘ 25 ವರ್ಷ ಕಳೆದರೂ ಸೂಕ್ತ ಪರಿಹಾರ ನೀಡದಿರುವ ಸರ್ಕಾರದ ನಡವಳಿಕೆಯ ಬಗ್ಗೆ ಇತ್ತೀಚೆಗಷ್ಟೇ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸಂತ್ರಸ್ತ ರೈತರಿಗೆ ದಶಕಗಳ ಕಾಲ ಪರಿಹಾರ ನೀಡದೆ ಸತಾಯಿಸುತ್ತಿರುವುದು ಅತ್ಯಂತ ಅಮಾನವೀಯ ನಡೆ ಎಂದು ನ್ಯಾಯಾಲಯ ರಾಜ್ಯ ಸರ್ಕಾರವನ್ನು ತಾರಮಾರಿಯಾಗಿ ತೊಳೆಯಿತ್ತು. ಹೈಕೋರ್ಟ್‌ ಚಾಟ ಬೀಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ, ಇದೀಗ ಉಪಸಮಿತಿಯ ಮೂಲಕ ಈ ಸಮಸ್ಯೆಗೆ ಸುದೀರ್ಘ ವರ್ಷಗಳ ಬಳಿಕ ಸೂಕ್ತ ಪರಿಹಾರ ಸೂತ್ರ ಕಂಡುಕೊಂಡಿದೆ.

ನೈಸ್ ಪ್ರಾಜೆಕ್ಟ್ ರಾಜ್ಯದ ಅತಿ ದೊಡ್ಡ ಹಗರಣ: ಹೈಕೋರ್ಟ್ ತೀವ್ರ ತರಾಟೆ, ಸ್ವತಂತ್ರ ತನಿಖೆಗೆ ಸೂಚನೆ

ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ಗೆ ಸಂಬಂಧಿಸಿದ ನೈಸ್ (NICE) ಯೋಜನೆಯು ರಾಜ್ಯದ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಯಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳು ಮತ್ತು ವಂಚನೆಗಳ ಕುರಿತು ತಜ್ಞರ ತಂಡದಿಂದ ಸ್ವತಂತ್ರ ತನಿಖೆ ನಡೆಸುವ ಜೊತೆಗೆ ಕಂಪನಿಯ ಖಾತೆಗಳ ‘ಫೋರೆನ್ಸಿಕ್ ಆಡಿಟ್’ ಮಾಡಿಸುವುದು ತೀರಾ ಅಗತ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಜಮೀನು ಸ್ವಾಧೀನಪಡಿಸಿಕೊಂಡು ಬರೋಬ್ಬರಿ 23 ವರ್ಷಗಳು ಕಳೆದರೂ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಭೂಸ್ವಾಧೀನವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಹಾಗೂ ಕೆಐಎಡಿಬಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುವಾಗ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಒಪ್ಪಂದದ ಮೂಲ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ರೈತರ ಜಮೀನನ್ನು ವಶಪಡಿಸಿಕೊಂಡು ಲಾಭ ಗಳಿಸಲು ನೈಸ್ ಸಂಸ್ಥೆಗೆ ರಾಜ್ಯ ಸರ್ಕಾರವೇ ಸಹಕರಿಸಿದೆ ಎಂದು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ತನ್ನ ತೀರ್ಪಿನಲ್ಲಿ ಖಾರವಾದ ಮಾತುಗಳನ್ನಾಡಿದ ನ್ಯಾಯಪೀಠ, ಸಂವಿಧಾನದ ವಿಧಿ 300A ಅಡಿಯಲ್ಲಿ ಕಡ್ಡಾಯವಾಗಿ ನೀಡಬೇಕಾದ ನ್ಯಾಯಯುತ ಪರಿಹಾರವನ್ನೇ ನೀಡದೆ ಬಡ ರೈತರ ಭೂಮಿ ಮತ್ತು ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ. ರೈತರನ್ನು ಲೂಟಿ ಮಾಡಿದ್ದನ್ನು ಬಿಟ್ಟರೆ ಈ ಯೋಜನೆಯಲ್ಲಿ ‘ನೈಸ್’ ಅನಿಸುವಂತಹದ್ದು ಯಾವುದೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಬಲಿಕೊಟ್ಟು, ಕೇವಲ ಖಾಸಗಿ ಕಂಪನಿಯ ಲಾಭಕ್ಕಾಗಿ ಮಾತ್ರ ಯೋಜನೆ ಕಾರ್ಯಾಚರಿಸುತ್ತಿದೆ ಎಂದು ಕಿಡಿಕಾರಿದೆ.

ಎಕ್ಸ್‌ಪ್ರೆಸ್‌ವೇ ಮತ್ತು ಉಪನಗರಗಳನ್ನು ನಿರ್ಮಿಸಿ ರಾಜಧಾನಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ತನ್ನ ಮೂಲ ಉದ್ದೇಶದಲ್ಲೇ ನೈಸ್ ಸಂಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಕಂಪನಿಯು ಎಸಗಿರುವ ನಿಯಮ ಉಲ್ಲಂಘನೆಗಳ ಬಗ್ಗೆ ಸ್ಪಷ್ಟ ಅರಿವಿದ್ದರೂ ಸಹ, ಈ ಯೋಜನೆಯನ್ನು ಸರ್ಕಾರ ಏಕೆ ರದ್ದುಗೊಳಿಸುತ್ತಿಲ್ಲ ಅಥವಾ ಮರುಪರಿಶೀಲಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಹೈಕೋರ್ಟ್, ಸರ್ಕಾರದ ಅನುಮಾನಾಸ್ಪದ ಮೌನ ಮತ್ತು ಧೋರಣೆಗೆ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬಡ ರೈತನ ಅಡಿಕೆ ತೋಟಕ್ಕೆ ಕನ್ನ ಹಾಕಿದ ಕೆಪಿಸಿ ಅಧಿಕಾರಿಗಳು!: ಪೂರ್ವಭಾವಿ ನೋಟಿಸ್ ನೀಡದೆ ಬೇಲಿ ತೆರವು

Leave a Reply

Your email address will not be published. Required fields are marked *