TOP NEWS

Plant Care: ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ?ಆರೋಗ್ಯವಾಗಿ ಇಟ್ಟುಕೊಳ್ಳಲು ಇಲ್ಲಿದೆ ಸರಳ ಟಿಪ್ಸ್!

Plant care Is Your Tulsi Plant Drying Up in Winter Simple Tips to Keep It Green and Healthy

ನಮ್ಮ ಮನೆಯ ಅಂಗಳ, ಬಾಲ್ಕನಿ ಇಲ್ಲವೇ ಟೆರೇಸ್‌ಗಳಲ್ಲಿ ತುಳಸಿ ಗಿಡವನ್ನು (Plant Care) ಬೆಳೆಸುವ ಪರಿಪಾಠ ಬಹಳ ಹಿಂದಿನಿಂದಲೂ ಇದೆ. ಧಾರ್ಮಿಕ ನಂಬಿಕೆಗಳ ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ತುಳಸಿಗೆ ವಿಶಿಷ್ಟ ಮಹತ್ವವಿದೆ. ಬೇಸಿಗೆಯಲ್ಲಿ ಸಮೃದ್ಧವಾಗಿ ಬೆಳೆಯುವ ಈ ಗಿಡ, ಚಳಿಗಾಲ ಕಾಲಿಡುತ್ತಿದ್ದಂತೆ ಬಾಡಲು ಮತ್ತು ಒಣಗಲು ಆರಂಭಿಸುತ್ತದೆ. ಚಳಿಗಾಲದಲ್ಲಿ ಎಲೆಗಳು ಹಳದಿಯಾಗುವುದು, ಕಪ್ಪು ಬಣ್ಣಕ್ಕೆ ತಿರುಗುವುದು ಹಾಗೂ ಉದುರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇಂತಹ ಚಳಿಗಾಲದಲ್ಲೂ ತುಳಸಿ ಗಿಡವನ್ನು ಹಸಿರಾಗಿ, ಸದೃಢವಾಗಿ ಪೋಷಿಸುವುದು ಹೇಗೆ ಎಂಬುದಕ್ಕೆ ಸರಳ ಮಾರ್ಗೋಪಾಯಗಳು ಇಲ್ಲಿವೆ.

ಚಳಿಗಾಲದಲ್ಲಿ ತುಳಸಿ ಬಾಡಲು ಪ್ರಮುಖ ಕಾರಣಗಳೇನು? ಚಳಿಗಾಲದ ತಂಪಾದ ಹವಾಗುಣದಲ್ಲಿ ತುಳಸಿ ಗಿಡದ ಬೆಳವಣಿಗೆಯ ವೇಗ ತಗ್ಗುತ್ತದೆ. ಸಾಕಷ್ಟು ಬಿಸಿಲು ಬೀಳದಿರುವುದು ಹಾಗೂ ಶೀತಗಾಳಿಯ ಪ್ರಭಾವ ಗಿಡದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಕೆಲವರು ಗಿಡಕ್ಕೆ ಅತಿಯಾಗಿ ನೀರು ಎರೆಯುವುದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಬೇರುಗಳು ಕೊಳೆಯುವ ಅಪಾಯವಿರುತ್ತದೆ. ಇದರ ಪರಿಣಾಮವಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಉದುರತೊಡಗುತ್ತವೆ.

ಬಿಸಿಲು ಮತ್ತು ನೀರಿನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆ ಇರುವುದರಿಂದ ಗಿಡಕ್ಕೆ ಅಗತ್ಯವಿರುವಷ್ಟು ಬಿಸಿಲು ದೊರೆಯದಿರಬಹುದು. ಆದರೆ ತುಳಸಿ ಸಮೃದ್ಧವಾಗಿ ಬೆಳೆಯಲು ಸೂರ್ಯನ ಕಿರಣಗಳು ಅತ್ಯಗತ್ಯ. ಆದ್ದರಿಂದ ದಿನಕ್ಕೆ ಕನಿಷ್ಠ 4ರಿಂದ 5 ಗಂಟೆಗಳ ಕಾಲ ಬಿಸಿಲು ಬೀಳುವ ಬಾಲ್ಕನಿ ಅಥವಾ ಕಿಟಕಿಯ ಬಳಿ ಗಿಡವನ್ನು ಇಡುವುದು ಸೂಕ್ತ. ಗಿಡದ ಎಲ್ಲಾ ಭಾಗಗಳಿಗೂ ಬೆಳಕು ತಲುಪುವಂತೆ ಆಗಾಗ ಕುಂಡವನ್ನು ಕೊಂಚ ತಿರುಗಿಸುತ್ತಿರಬೇಕು.

ನೀರಿನ ವಿಚಾರದಲ್ಲೂ ಜಾಗರೂಕತೆ ಇರಲಿ. ಬೇಸಿಗೆಯಂತೆ ಚಳಿಗಾಲದಲ್ಲಿ ಪ್ರತಿದಿನ ನೀರು ಹಾಕುವ ಅಗತ್ಯವಿರುವುದಿಲ್ಲ. ನೀರು ಹಾಕುವ ಮುನ್ನ ಬೆರಳಿನಿಂದ ಮಣ್ಣಿನ ಮೇಲ್ಭಾಗವನ್ನು ಮುಟ್ಟಿ ನೋಡಿ; ಸುಮಾರು ಒಂದು ಇಂಚಿನಷ್ಟು ಮಣ್ಣು ಒಣಗಿದ್ದರೆ ಮಾತ್ರ ನೀರು ಹಾಕಿ. ಬೆಳಗಿನ ವೇಳೆ ನೀರು ನೀಡುವುದು ಉತ್ತಮವಾಗಿದ್ದು, ಕುಂಡದಿಂದ ಹೆಚ್ಚುವರಿ ನೀರು ಹೊರಹೋಗಲು ಸೂಕ್ತ ತೂತುಗಳಿರುವಂತೆ ನೋಡಿಕೊಳ್ಳಿ.

ಶೀತಗಾಳಿ ರಕ್ಷಣೆ, ಕತ್ತರಿಸುವಿಕೆ ಮತ್ತು ಗೊಬ್ಬರದ ನಿರ್ವಹಣೆ ಚಳಿಗಾಲದ ಕೊರೆಯುವ ಗಾಳಿ ಮತ್ತು ಇಬ್ಬನಿಯಿಂದ ತುಳಸಿ ಎಲೆಗಳು ಕಪ್ಪಾಗಿ ಸುಟ್ಟುಹೋಗುವ ಸಾಧ್ಯತೆಯಿರುತ್ತದೆ. ರಾತ್ರಿ ವೇಳೆ ತೀವ್ರ ಚಳಿ ಇದ್ದರೆ ಕುಂಡವನ್ನು ಸುರಕ್ಷಿತ ಜಾಗಕ್ಕೆ ಸರಿಸಿ. ಅಗತ್ಯವೆನಿಸಿದರೆ ಗಾಳಿ ಮತ್ತು ಬೆಳಕು ಆಡುವಂತೆ ತೆಳುವಾದ ಹತ್ತಿ ಬಟ್ಟೆಯಿಂದ ಗಿಡವನ್ನು ಸಡಿಲವಾಗಿ ಹೊದಿಸಬಹುದು.

ಗಿಡದಲ್ಲಿ ಕಂಡುಬರುವ ಒಣಗಿದ ಮತ್ತು ಹಳದಿ ಎಲೆಗಳನ್ನು ಆಗಾಗ ಬಿಡಿಸಿ ತೆಗೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಹೂವು ಅಥವಾ ಮಂಜರಿ ಮೂಡಿದಾಗ ಕೆಲವು ಭಾಗಗಳನ್ನು ತುಸು ಕತ್ತರಿಸುವುದರಿಂದ ಹೊಸ ಚಿಗುರು ಹಾಗೂ ಎಲೆಗಳು ಮೂಡಲು ಸಹಕಾರಿಯಾಗುತ್ತದೆ. ಆದರೆ ಚಳಿಗಾಲದಲ್ಲಿ ಗಿಡವನ್ನು ತೀರಾ ಹೆಚ್ಚಾಗಿ ಕತ್ತರಿಸಬೇಡಿ. ಬೆಳವಣಿಗೆ ನಿಧಾನವಾಗಿರುವ ಈ ಸಂದರ್ಭದಲ್ಲಿ ಅತಿಯಾದ ಗೊಬ್ಬರ ನೀಡುವ ಬದಲು, ಸ್ವಲ್ಪ ಪ್ರಮಾಣದಲ್ಲಿ ಚೆನ್ನಾಗಿ ಕೊಳೆತ ಸಾವಯವ ಗೊಬ್ಬರ ಅಥವಾ ಕಾಂಪೋಸ್ಟ್ ಬಳಸಿ. ಗಾಳಿ ಮತ್ತು ನೀರು ಸರಾಗವಾಗಿ ಹರಿಯಲು ಮಣ್ಣನ್ನು ಆಗಾಗ ಸಡಿಲಗೊಳಿಸುತ್ತಿರಿ.

ಇದನ್ನೂ ಓದಿ: ಮೆಹಂದಿಗೆ ಈ 5 ಅಡುಗೆಮನೆ ಪದಾರ್ಥ ಸೇರಿಸಿ: ಕೂದಲಿಗೆ ಸಿಗುತ್ತೆ ಮಸ್ತ್ ಬಣ್ಣ

Leave a Reply

Your email address will not be published. Required fields are marked *