ನವದೆಹಲಿ: ದೇಶದಲ್ಲಿ ನಗದು ಹಣದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸದ್ಯ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಮೌಲ್ಯವು ಸಾರ್ವಕಾಲಿಕ ದಾಖಲೆಯಾದ 42.86 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಡಿಜಿಟಲ್ ಪಾವತಿಗಳು ಎಷ್ಟೇ ವೇಗವಾಗಿ ಬೆಳೆದಿದ್ದರೂ ಜನರ ಕೈಯಲ್ಲಿನ ನಗದಿನ ಅಬ್ಬರ ಕಡಿಮೆಯಾಗಿಲ್ಲ. ಈ ನಡುವೆ, ಕಾಗದದ ನೋಟುಗಳ ಮುದ್ರಣ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳ ಬಾಳಿಕೆಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ ‘ಪಾಲಿಮರ್’ ಅಂದರೆ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದೆ. ಇತ್ತೀಚೆಗೆ ಪಾಟ್ನಾ ಮತ್ತು ಮುಂಬೈನಲ್ಲಿ ನಡೆದ ಆರ್ಬಿಐನ ಸತತ ಎರಡು ಆಡಳಿತ ಮಂಡಳಿ ಸಭೆಗಳಲ್ಲಿ ಈ ಪ್ರಸ್ತಾಪದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆದಿದೆ.
ಮಹತ್ವದ ನಿರ್ಧಾರ ಮಾಡಿದ ಆರ್ಬಿಐ
ಸದ್ಯ ಚಲಾವಣೆಯಲ್ಲಿರುವ ಕಾಗದದ ನೋಟುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ನೋಟುಗಳ ಮುದ್ರಣ ವೆಚ್ಚ ತೀರಾ ಕಡಿಮೆ ಇರಲಿದ್ದು, ಇವುಗಳು ಸುಲಭವಾಗಿ ಹರಿದು ಹೋಗುವುದಿಲ್ಲ. ಅಷ್ಟೇ ಅಲ್ಲದೆ, ಎಟಿಎಂ ಯಂತ್ರಗಳ ಮೂಲಕವೇ ಈ ಪ್ಲಾಸ್ಟಿಕ್ ನೋಟುಗಳನ್ನು ವಿತರಿಸಲು ಬೇಕಾದ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಹಿಂದೆ 2012ರಲ್ಲೇ ಐದು ನಗರಗಳಲ್ಲಿ 10 ರೂಪಾಯಿ ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಪ್ರಯತ್ನಿಸಲಾಗಿತ್ತಾದರೂ, ಆಗಿನ ತಾಂತ್ರಿಕ ಅಡಚಣೆಗಳಿಂದಾಗಿ ಅದನ್ನು ಕೈಬಿಡಲಾಗಿತ್ತು. ಆದರೆ ಈಗಿನ ಆಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಆರ್ಬಿಐ ಮತ್ತೊಮ್ಮೆ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
रिजर्व बैंक ऑफ इंडिया भारतीय नोट बदलने की तैयारी कर रही है ?
— Vijendra Patel (@vijend380) June 1, 2026
क्या रिजर्व बैंक ऑफ इंडिया भारतीय नोटों में बदलाव करने वाली है? 🤔 इन 700 रुपये के नए नोटों को देखकर तो यही लगता है! 😮 क्या आप इन नए डिज़ाइन के लिए उत्साहित हैं? 💰 #RBI #IndianCurrency pic.twitter.com/KUI6zJpKIl
ಆರ್ಬಿಐ ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಪ್ರಕಾರ, ಕಾಗದದ ನೋಟುಗಳ ಮುದ್ರಣಕ್ಕಾಗಿ ಸರ್ಕಾರ ಮಾಡುತ್ತಿರುವ ಖರ್ಚು ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಿ 5,101.4 ಕೋಟಿ ರೂಪಾಯಿಯಾಗಿದ್ದ ನೋಟು ಮುದ್ರಣ ವೆಚ್ಚವು, 2025ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 6,372.8 ಕೋಟಿ ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ ನೋಟುಗಳ ಬೇಡಿಕೆ ಹೆಚ್ಚಾಗಿರುವುದೇ ಈ ವೆಚ್ಚದ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಹಳೆಯ ಹಾಗೂ ಹರಿದು ಹೋದ ನೋಟುಗಳನ್ನು ವಿಲೇವಾರಿ ಮಾಡುವುದು ಆರ್ಬಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹರಿದ ನೋಟುಗಳ ಪ್ರಮಾಣ ಶೇಕಡಾ 12.3 ರಷ್ಟು ಹೆಚ್ಚಾಗಿದ್ದು, ಸುಮಾರು 2,380 ಕೋಟಿ ಹಳೆಯ ನೋಟುಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದೆ. ಇದರಲ್ಲಿ 500 ಮತ್ತು 100 ರೂಪಾಯಿ ಮುಖಬೆಲೆಯ ನೋಟುಗಳೇ ಅತಿ ಹೆಚ್ಚಾಗಿವೆ.
ಇನ್ನು ಮಾರುಕಟ್ಟೆಯಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ ಸಣ್ಣ ನೋಟುಗಳಿಗೆ ಭಾರಿ ಬೇಡಿಕೆಯಿದ್ದರೂ, ಒಟ್ಟು ಚಲಾವಣೆಯಲ್ಲಿರುವ ಹಣದ ಮೌಲ್ಯದಲ್ಲಿ ಇವುಗಳ ಪಾಲು ಶೇಕಡಾ ಒಂದಕ್ಕಿಂತಲೂ ಕಡಿಮೆಯಿದೆ. ಸಣ್ಣ ನೋಟುಗಳ ಅತಿಯಾದ ಬಳಕೆಯನ್ನು ತಪ್ಪಿಸಲು ನಾಣ್ಯಗಳ ಚಲಾವಣೆ ಹೆಚ್ಚಿಸುವ ಆರ್ಬಿಐ ಯೋಜನೆ ಅಂದುಕೊಂಡಷ್ಟು ಯಶಸ್ವಿಯಾಗಿಲ್ಲ.
700 ರೂಪಾಯಿ ನೋಟಿನ ಸುಳ್ಳು ಸುದ್ದಿ ನಂಬಬೇಡಿ: ಪ್ಲಾಸ್ಟಿಕ್ ಕರೆನ್ಸಿ ತರುವ ಚರ್ಚೆಗಳ ನಡುವೆಯೇ, ಆರ್ಬಿಐ ಶೀಘ್ರದಲ್ಲೇ 700 ರೂಪಾಯಿಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ತರಲಿದೆ ಎಂಬ ತಪ್ಪು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ಇಂಟರ್ನೆಟ್ನಲ್ಲಿ ವೈರಲ್ ಆಗಿರುವ 700 ರೂಪಾಯಿ ಮುಖಬೆಲೆಯ ಹೊಸ ವಿನ್ಯಾಸದ ನೋಟಿನ ಚಿತ್ರ ಸಂಪೂರ್ಣವಾಗಿ ನಕಲಿಯಾಗಿದ್ದು, ಇದನ್ನು ಮೊಬೈಲ್ ಆಪ್ ಅಥವಾ ಕಂಪ್ಯೂಟರ್ ಮೂಲಕ ಎಡಿಟ್ ಮಾಡಿ ಸೃಷ್ಟಿಸಲಾಗಿದೆ. ದೇಶದ ಹಣಕಾಸು ವ್ಯವಸ್ಥೆಯಲ್ಲಿ ಇಂತಹ ಯಾವುದೇ ಹೊಸ ನೋಟನ್ನು ಪರಿಚಯಿಸುವ ಯೋಜನೆ ಕೇಂದ್ರ ಬ್ಯಾಂಕ್ನ ಮುಂದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಆರ್ಬಿಐ ಯಾವುದೇ ಹೊಸ ನೋಟು ಅಥವಾ ಬದಲಾವಣೆಯನ್ನು ತರುವ ಮುನ್ನ ತನ್ನ ಅಧಿಕೃತ ವೆಬ್ಸೈಟ್ ಮೂಲಕ ದೇಶದ ಜನರಿಗೆ ಮಾಹಿತಿ ನೀಡುತ್ತದೆ. ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಇಂತಹ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು ಮತ್ತು ಇವುಗಳನ್ನು ಇತರರಿಗೆ ಹಂಚಿಕೊಳ್ಳಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
