TOP NEWS

SIR: ದೇಶದ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ: ಕರ್ನಾಟಕದ 5.5 ಕೋಟಿ ಮತದಾರರ ವಿವರ ಮರುಪರಿಶೀಲನೆ

election commission to conduct SIR Phase III

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ದೇಶದ ಮತದಾರರ ಪಟ್ಟಿಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲು ಮುಂದಾಗಿದ್ದು, 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಮೂರನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ’ (SIR Phase-III) ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಸುಮಾರು 36.73 ಕೋಟಿ ಮತದಾರರ ವಿವರಗಳನ್ನು ಮರುಪರಿಶೀಲಿಸುವ ಬೃಹತ್ ಗುರಿಯನ್ನು ಆಯೋಗ ಹಾಕಿಕೊಂಡಿದೆ.

ಮನೆ ಮನೆಗೆ ಬರಲಿದ್ದಾರೆ ಅಧಿಕಾರಿಗಳು: ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಇವರಿಗೆ ಸಹಕರಿಸಲು ರಾಜಕೀಯ ಪಕ್ಷಗಳ ವತಿಯಿಂದ 3.42 ಲಕ್ಷ ಏಜೆಂಟ್‌ಗಳು ಕೂಡ ಸಾಥ್ ನೀಡಲಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು, ಒಂದೇ ಹೆಸರಿನ ನಕಲಿ ಗುರುತಿನ ಚೀಟಿಗಳನ್ನು ರದ್ದುಪಡಿಸುವುದು ಮತ್ತು ಹೊಸದಾಗಿ ಮತದಾನದ ಹಕ್ಕು ಪಡೆದ ಯುವಕರನ್ನು ಪಟ್ಟಿಗೆ ಸೇರಿಸುವ ಕೆಲಸ ನಡೆಯಲಿದೆ.

ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳ ಅಂಕಿಅಂಶ: ಈ ಅಭಿಯಾನದ ವ್ಯಾಪ್ತಿಗೆ ಬರುವ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಅಂದರೆ 9.86 ಕೋಟಿ ಮತದಾರರನ್ನು ಹೊಂದಿದೆ. ಕರ್ನಾಟಕದಲ್ಲಿ 5.55 ಕೋಟಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದರೆ, ಆಂಧ್ರಪ್ರದೇಶದಲ್ಲಿ 4.16 ಕೋಟಿ ಹಾಗೂ ತೆಲಂಗಾಣದಲ್ಲಿ 3.39 ಕೋಟಿ ಮತದಾರರಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.48 ಕೋಟಿ ಮತದಾರರ ವಿವರಗಳನ್ನು ಪರಿಶೀಲಿಸಲಾಗುತ್ತದೆ.

ಅಂತಿಮ ಪಟ್ಟಿ ಬಿಡುಗಡೆ ಎಂದು? ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ಜೂನ್ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ಅಕ್ಟೋಬರ್ 7, 2026 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಇನ್ನು ಒಡಿಶಾ, ಮಿಜೋರಾಂ ಮತ್ತು ಮಣಿಪುರ ರಾಜ್ಯಗಳಲ್ಲಿ ಮೇ 30 ರಿಂದಲೇ ಮನೆ ಮನೆ ಭೇಟಿ ಕಾರ್ಯ ಆರಂಭವಾಗಲಿದ್ದು, ಸೆಪ್ಟೆಂಬರ್ 6 ರಂದು ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗಲಿದೆ.

ಹವಾಮಾನದ ಕಾರಣಕ್ಕೆ ಕೆಲವು ಕಡೆ ವಿಳಂಬ: ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಂತಹ ಪ್ರದೇಶಗಳಲ್ಲಿ ಪ್ರಸ್ತುತ ಹವಾಮಾನ ವೈಪರೀತ್ಯ ಇರುವುದರಿಂದ ಅಲ್ಲಿ ಈ ಅಭಿಯಾನವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಅಲ್ಲಿನ ಪರಿಸ್ಥಿತಿ ಸುಧಾರಿಸಿದ ನಂತರ ಹೊಸ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಪರಿಷ್ಕರಣಾ ಕಾರ್ಯವು ಮುಂಬರುವ ಚುನಾವಣೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

ಇದನ್ನೂ ಓದಿ: ಬೈಕ್ ಏರಿ ಬಂದು ಬಜೆಟ್ ಉಳಿಸಿದ ಸಿಎಂ; ಮಹಾರಾಷ್ಟ್ರದಲ್ಲಿ ಜಾರಿಗೆ ಬಂತು ಹೈಟೆಕ್ ಮಿತವ್ಯಯ ಮಾರ್ಗಸೂಚಿ!

Leave a Reply

Your email address will not be published. Required fields are marked *