TOP NEWS

Crime: ಅಡ್ವಾನ್ಸ್ ಹಣದ ಕಿರಿಕ್: ವ್ಯಕ್ತಿಯ ಭೀಕರ ಕೊ*ಲೆ, ಮೂವರು ಆರೋಪಿಗಳು ಲಾಕ್!

crime belagavi police arrested 3 accused

ಬೆಳಗಾವಿ: ಕುರಿ ಕಾಯುವ ಕೆಲಸಕ್ಕೆಂದು ಮುಂಗಡವಾಗಿ ಪಡೆದಿದ್ದ ಹಣದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ (Crime) ದೊಡವಾಡ ಗ್ರಾಮದಲ್ಲಿ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಘಟನೆ ನಡೆದು ಕೆಲವೇ ದಿನಗಳಲ್ಲಿ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಹಾಲಪ್ಪ, ಮಂಜುನಾಥ ಹಾಗೂ ಅರ್ಜುನ ಬಂಧಿತ ಕಿಡಿಗೇಡಿಗಳು.

ಜಮೀನಿನಲ್ಲಿ ಪತ್ತೆಯಾಗಿತ್ತು ನಿಗೂಢ ಶವ

ದೊಡವಾಡ ಗ್ರಾಮದ ನಿವಾಸಿ ಫಕ್ಕೀರಪ್ಪ ಕಿರಕಸಾಲಿ (38) ಕೊಲೆಯಾದ ವ್ಯಕ್ತಿ. ಕಳೆದ ಕೆಲವು ದಿನಗಳ ಹಿಂದೆ ದಿಢೀರನೆ ನಾಪತ್ತೆಯಾಗಿದ್ದ ಇವರ ಮೃತದೇಹವು, ಗ್ರಾಮದ ರುದ್ರವ್ವ ಹೆಬ್ಬಳ್ಳಿ ಎಂಬುವವರಿಗೆ ಸೇರಿದ ಜೋಳದ ಜಮೀನಿನ ಹುಣಸೆ ಮರದ ಬಳಿ ಶವವಾಗಿ ಪತ್ತೆಯಾಗಿತ್ತು. ಪತಿಯ ಸಾವಿನಿಂದ ಕಂಗಾಲಾದ ಪತ್ನಿ ನೀಲಮ್ಮ ಕಿರಕಸಾಲಿ ಅವರು ಬೈಲಹೊಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಸಿಸಿಟಿವಿ ದೃಶ್ಯದಿಂದ ಸಿಕ್ಕಿತು ಕ್ಲೂ

ನಾಪತ್ತೆಯಾದ ದಿನದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಜಾಲಾಡಿದಾಗ ಮಹತ್ವದ ಸುಳಿವು ಸಿಕ್ಕಿತ್ತು. ಫಕ್ಕೀರಪ್ಪ ಕೊನೆಯದಾಗಿ ಆರೋಪಿಗಳಾದ ಹಾಲಪ್ಪ ಜವಳಿ ಮತ್ತು ಮಂಜುನಾಥ ತಳವಾರ ಜೊತೆ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಇಂಚಿಂಚು ಮಾಹಿತಿ ಬಯಲಾಗಿದೆ.

ಹತ್ತು ಸಾವಿರ ರೂಪಾಯಿಗೆ ಹೋದ ಜೀವ!

ಪೊಲೀಸ್ ತನಿಖೆಯ ಪ್ರಕಾರ, ಮೃತ ಫಕ್ಕೀರಪ್ಪ ಈ ಹಿಂದೆ ಆರೋಪಿಗಳಿಂದ ಕುರಿ ಕಾಯುವ ಕೆಲಸ ಮಾಡಿಕೊಡುವುದಾಗಿ ಒಪ್ಪಿ 10,000 ರೂಪಾಯಿ ಮುಂಗಡ ಹಣ (ಅಡ್ವಾನ್ಸ್) ಪಡೆದಿದ್ದ. ಆದರೆ, ಹಣ ಪಡೆದ ಕೆಲವೇ ದಿನಗಳಲ್ಲಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಮರಳಿದ್ದ. ಇದೇ ವಿಚಾರವಾಗಿ ಇವರ ನಡುವೆ ದ್ವೇಷ ಹೊಗೆಯಾಡುತ್ತಿತ್ತು. ಮೇ 28ರ ರಾತ್ರಿ ಇವರೆಲ್ಲರೂ ಒಟ್ಟಿಗೆ ಮದ್ಯ ಸೇವಿಸಿ ಊಟ ಮಾಡುವಾಗ ಮತ್ತೆ ಹಣದ ವಿಷಯ ಪ್ರಸ್ತಾಪವಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಫಕ್ಕೀರಪ್ಪ ಆರೋಪಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಇದರಿಂದ ಕೆರಳಿದ ಆರೋಪಿಗಳು ಅಲ್ಲೇ ಇದ್ದ ಕೊಡಲಿ ಕಾವಿನಿಂದ ಫಕ್ಕೀರಪ್ಪನ ತಲೆ, ಕೈ ಹಾಗೂ ಕಾಲುಗಳಿಗೆ ಮನಬಂದಂತೆ ಜಜ್ಜಿದ್ದಾರೆ. ಹಲ್ಲೆಯ ಭೀಕರತೆಗೆ ಬಲಗಾಲು ಮುರಿದು ಫಕ್ಕೀರಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಜೋಳದ ಜಮೀನಿನಲ್ಲಿ ಎಸೆದು ಪರಾರಿಯಾಗಿದ್ದರು.

ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಹಾಗೂ ಡಿಎಸ್‌ಪಿ ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶಿವಾನಂದ ಗುಡಗನಟ್ಟಿ ಮತ್ತು ಪಿಎಸ್‌ಐ ಹೆಚ್.ಕೆ. ಪಾಟೀಲ ನೇತೃತ್ವದ ಚಾಣಾಕ್ಷ ಪೊಲೀಸ್ ತಂಡ ಈ ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಪಾನ್ ಶಾಪ್‌ನಲ್ಲಿ ಭೀಕರ ಸ್ಫೋಟ: ಮೂವರಿಗೆ ಗಂಭೀರ ಗಾಯ

Leave a Reply

Your email address will not be published. Required fields are marked *