TOP NEWS

Kottiyoor: ಕೊಟ್ಟಿಯೂರು ಶಿವನ ಸನ್ನಿಧಿಯಲ್ಲಿ ಭಕ್ತರ ಆಕ್ರೋಶ: ಕನ್ನಡಿಗರಿಗೆ ರಕ್ಷಣೆ ಹಾಗೂ ಗೂಂಡಾಗಿರಿ ವಿರುದ್ಧ ಕ್ರಮದ ಭರವಸೆ ನೀಡಿದ ಡಿಐಜಿ ಯತೀಶ್ಚಂದ್ರ

Kottiyoor temple controversy kannur dig promises to hep Karnataka people

ಕಣ್ಣೂರು: ಕೇರಳದ ಸುಪ್ರಸಿದ್ಧ ಕೊಟ್ಟಿಯೂರು (Kottiyoor) ಶಿವನ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಮತ್ತು ಕರ್ನಾಟಕದ ಭಕ್ತರ ಮೇಲಿನ ಸ್ಥಳೀಯರ ದೌರ್ಜನ್ಯದ ಹಿನ್ನೆಲೆಯಲ್ಲಿ ಕಣ್ಣೂರು ವಲಯದ ಡಿಐಜಿ ಯತೀಶ್ಚಂದ್ರ ಅವರು ಪರಿಸ್ಥಿತಿಯ ವಿವರಣೆ ನೀಡಿದ್ದಾರೆ. ದೇವಸ್ಥಾನದ ನಿಗದಿತ ಸಾಮರ್ಥ್ಯಕ್ಕಿಂತಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಒಮ್ಮೆಲೇ ಆಗಮಿಸಿದ್ದರಿಂದ ಈ ಕಹಿ ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.

ಪದ್ಧತಿಗಳ ಅರಿವಿಲ್ಲದೆ ಹತಾಶರಾದ ಭಕ್ತರು

ಸಾಮಾನ್ಯವಾಗಿ ಈ ದೇವಸ್ಥಾನದಲ್ಲಿ ಒಂದು ದಿನಕ್ಕೆ ಗರಿಷ್ಠ 1.25 ಲಕ್ಷ ಜನರಿಗೆ ಮಾತ್ರ ದರ್ಶನ ಕಲ್ಪಿಸಲು ಸಾಧ್ಯವಿದೆ. ಆದರೆ ವಾರಾಂತ್ಯದ ರಜೆಯಾಗಿದ್ದರಿಂದ ಭಾನುವಾರ ಬರೋಬ್ಬರಿ 1.70 ಲಕ್ಷಕ್ಕೂ ಹೆಚ್ಚು ಮಂದಿ ದೇವಸ್ಥಾನಕ್ಕೆ ಬಂದಿದ್ದರು. ಇವರಲ್ಲಿ ಬಹುತೇಕರು ಕರ್ನಾಟಕದಿಂದ ವಾಹನಗಳಲ್ಲಿ ಬಂದವರಾಗಿದ್ದಾರೆ. ಇಷ್ಟೊಂದು ಭಾರಿ ಪ್ರಮಾಣದ ಜನದಟ್ಟಣೆ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ.

ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಪೂಜೆಯ ಸಮಯದಲ್ಲಿ ಅರ್ಧ ಗಂಟೆ ಬಾಗಿಲು ಮುಚ್ಚಲಾಗುತ್ತದೆ ಹಾಗೂ 10 ನಿಮಿಷ ಮೂರ್ತಿ ಶುದ್ಧೀಕರಣ ಕಾರ್ಯ ಜರುಗುತ್ತದೆ. ಅಲ್ಲದೆ, ದೇವರನ್ನು ಆನೆ ಮೇಲೆ ಮೆರವಣಿಗೆ ಮಾಡುವ ‘ಶಿವೇಲಿ’ ಉತ್ಸವದ ಸಂದರ್ಭದಲ್ಲಿ ಯಾರೂ ನೀರಿಗೆ ಇಳಿಯುವಂತಿಲ್ಲ. ಹೊರರಾಜ್ಯದ ಭಕ್ತರಿಗೆ ಇಲ್ಲಿನ ಕಟ್ಟುಪಾಡುಗಳ ಮಾಹಿತಿ ಇಲ್ಲದ ಕಾರಣ, ಸಾಲಿನಲ್ಲಿ ನಿಂತು ಕಾಯುವಾಗ ತಾಳ್ಮೆ ಕಳೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿ ಹತೋಟಿಗೆ ತರಲು ಕನ್ನಡ ಪೊಲೀಸರ ಸಾಥ್

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಗಲಾಟೆಯ ದೃಶ್ಯಗಳು ಶನಿವಾರದ್ದಾಗಿದ್ದು, ಭಾನುವಾರ ಪರಿಸ್ಥಿತಿ ನಿಯಂತ್ರಿಸಲು ವಾಹನಗಳನ್ನು ಹಂತ-ಹಂತವಾಗಿ ಬ್ಯಾಚ್ ಮಾದರಿಯಲ್ಲಿ ಬಿಡುವ ವ್ಯವಸ್ಥೆ ಮಾಡಲಾಗಿತ್ತು ಎಂದು ಡಿಐಜಿ ತಿಳಿಸಿದ್ದಾರೆ. ಆದಾಗ್ಯೂ, ದೀರ್ಘಾವಧಿಯ ಕಾಯುವಿಕೆಯಿಂದ ಭಕ್ತರು ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದ್ದಾರೆ. ಹೊರರಾಜ್ಯದ ಭಕ್ತರ ಭಾಷಾ ಸಮಸ್ಯೆಯನ್ನು ನಿವಾರಿಸಲು ಕಾಸರಗೋಡು ಜಿಲ್ಲೆಯಿಂದ ಕನ್ನಡ ಮಾತನಾಡುವ 15 ಪೊಲೀಸರನ್ನು ವಿಶೇಷವಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಆಚರಣೆಗಳ ಸಮಯದ ಬಗ್ಗೆ ಭಕ್ತರಿಗೆ ಮುಂಚಿತವಾಗಿ ತಿಳಿಸಲು ಮೈಕ್ ಮೂಲಕ ಅನೌನ್ಸ್ ಮಾಡುವ ವ್ಯವಸ್ಥೆ ತರಲಾಗುತ್ತಿದೆ.

ನೀರಿನ ಅಭಾವ ಮತ್ತು ಪ್ಲಾಸ್ಟಿಕ್ ಬ್ಯಾನ್ ನಿಯಮ

ದೇವಸ್ಥಾನದಲ್ಲಿ ಕುಡಿಯುವ ನೀರಿನ ಕೊರತೆಯಾಗಿರುವ ಬಗ್ಗೆ ಕೇಳಿಬಂದ ದೂರುಗಳಿಗೆ ಪ್ರತಿಕ್ರಿಯಿಸಿದ ಅವರು, ಆವರಣದೊಳಗೆ ನೀರಿನ ಘಟಕಗಳಿದ್ದರೂ ಭಕ್ತರ ಸಂಖ್ಯೆ ಮಿತಿ ಮೀರಿದ್ದರಿಂದ ಎಲ್ಲರಿಗೂ ನೀರು ಸಿಗುವುದು ವಿಳಂಬವಾಗಿದೆ. ಈ ಕೊರತೆಯ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುವುದು. ಜೊತೆಗೆ, ದೇವಸ್ಥಾನದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ ಭಕ್ತರಿಗೆ ಲೋಟಗಳ ಮೂಲಕ ನೀರು ವಿತರಿಸಲಾಗುತ್ತಿತ್ತು. ಆದರೆ ಅತಿಯಾದ ಜನಸ್ತೋಮದಿಂದಾಗಿ ಈ ವ್ಯವಸ್ಥೆಯಲ್ಲೂ ಕೊಂಚ ತೊಂದರೆಯಾಗಿದೆ ಎಂದು ವಿವರಿಸಿದರು.

ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ: ಕರ್ನಾಟಕದ ಭಕ್ತರ ಮೇಲೆ ಸ್ಥಳೀಯರು ದರ್ಪ ತೋರಿರುವ ವೀಡಿಯೋಗಳು ಗಮನಕ್ಕೆ ಬಂದಿದ್ದು, ತೊಂದರೆಗೊಳಗಾದ ಭಕ್ತರು ಯಾವುದೇ ಭಯವಿಲ್ಲದೆ ದೂರು ದಾಖಲಿಸಬಹುದು. ದೌರ್ಜನ್ಯ ನಡೆಸಿದವರು ದೇವಸ್ಥಾನದ ಸಿಬ್ಬಂದಿಯೇ ಇರಲಿ ಅಥವಾ ಸ್ಥಳೀಯ ಗೂಂಡಾಗಳೇ ಇರಲಿ, ಯಾರನ್ನೂ ಬಿಡದೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಐಜಿ ಯತೀಶ್ಚಂದ್ರ ಖಡಕ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಂತರರಾಷ್ಟ್ರೀಯ ಬಿಕ್ಕಟ್ಟಿನ ಎಫೆಕ್ಟ್: ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಅನಿವಾರ್ಯ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Leave a Reply

Your email address will not be published. Required fields are marked *