TOP NEWS

CM Vijay: ದಳಪತಿ ವಿಜಯ್‌ಗೆ ಪರೋಕ್ಷ ಟಾಂಗ್? ವಿಜಯ್ ಸೇತುಪತಿ ಕಾಮೆಂಟ್‌ಗೆ ರಾಜಕೀಯ ಬಣ್ಣ

CM Vijay Controversy Sethupathi Leadership Comment Triggers Social Media Storm

ತಮಿಳುನಾಡು: ತಮಿಳು ನಟ ವಿಜಯ್ ಸೇತುಪತಿ ಅವರು ತಮಿಳಿನ (Tamil Nadu) ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನಾಯಕತ್ವದ ಕುರಿತು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿ ಸಕ್ರಿಯರಾಗಿರುವ ನಟ ವಿಜಯ್ (CM Vijay)_ ಅವರನ್ನೇ ಗುರಿಯಾಗಿಸಿಕೊಂಡು ಸೇತುಪತಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕೆಲ ವೀಕ್ಷಕರು ಅಭಿಪ್ರಾಯಪಟ್ಟಿದ್ದು, ಇದು ವಿಜಯ್ ಅವರ ರಾಜಕೀಯ ಬೆಂಬಲಿಗರಲ್ಲಿ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ.

ವಿಜಯ್‌ ಸೇತುಪತಿ ಹೇಳಿದ್ದೇನು?

ಬಿಗ್ ಬಾಸ್ ಸಂಚಿಕೆಯೊಂದರಲ್ಲಿ ನಿಜವಾದ ನಾಯಕತ್ವದ ಅರ್ಥವೇನು ಎಂಬುದರ ಕುರಿತು ಮಾತನಾಡಿದ್ದ ವಿಜಯ್ ಸೇತುಪತಿ, ನಾಯಕತ್ವ ಎಂದರೆ ಏನೆಂದೇ ತಿಳಿಯದೆ ಕೇವಲ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವುದಲ್ಲ ಎಂದಿದ್ದರು. ಅಷ್ಟೇ ಅಲ್ಲದೆ, ಸಮಸ್ಯೆಗಳು ಎದುರಾದಾಗ ಎದುರಾಳಿಗಳ ಮೇಲೆ ಗೂಬೆ ಕೂರ್ಸಿ ಜಾರಿಕೊಳ್ಳುವುದು ಅಥವಾ ಕಾಲ್ತೆಗೆಯುವುದು ನಿಜವಾದ ನಾಯಕನ ಲಕ್ಷಣವಲ್ಲ ಎಂದು ಪ್ರತಿಪಾದಿಸಿದ್ದರು. ಈ ಹೇಳಿಕೆಗಳ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದ್ದವು.

ನಟ ವಿಜಯ್ ಅವರ ರಾಜಕೀಯ ಪಕ್ಷವಾದ ‘ಟಿವಿಕೆ’ (ತಮಿಳಗ ವೆಟ್ರಿ ಕಳಗಂ) ಬೆಂಬಲಿಗರು ಈ ಮಾತುಗಳನ್ನು ವಿಜಯ್ ವಿರುದ್ಧದ ಪರೋಕ್ಷ ವಾಗ್ದಾಳಿ ಎಂದೇ ವಿಶ್ಲೇಷಿಸಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ವಿಜಯ್ ಸೇತುಪತಿ ಅವರು ಇಂತಹ ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನು ಕೆಲ ನೆಟ್ಟಿಗರು, ಆಡಳಿತಾರೂಢ ಡಿಎಂಕೆ ಪಕ್ಷವನ್ನು ಮೆಚ್ಚಿಸಲು ಹಾಗೂ ಅವರ ಪ್ರೀತಿ ಗಿಟ್ಟಿಸಿಕೊಳ್ಳಲು ಸೇತುಪತಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ರಾಜಕೀಯ ಪ್ರವೇಶದ ಸಂದರ್ಭದಲ್ಲಿ ವಿಜಯ್ ಅವರಿಗೆ ವಿಜಯ್ ಸೇತುಪತಿ ಸಾರ್ವಜನಿಕವಾಗಿ ಶುಭಾಶಯ ತಿಳಿಸಿರಲಿಲ್ಲ ಎಂಬ ವಿಷಯವನ್ನೂ ವಿಜಯ್ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿಯೇ ಬಿಗ್ ಬಾಸ್ ವೇದಿಕೆಯಲ್ಲಿ ಸೇತುಪತಿ ಆಡಿದ ಮಾತುಗಳನ್ನು ವಿಜಯ್ ಅವರ ರಾಜಕೀಯ ಚಟುವಟಿಕೆಗಳಿಗೆ ಲಿಂಕ್ ಮಾಡಿ ನೋಡಲಾಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್ ವಾರ್

ಆದರೆ, ಈ ಎಲ್ಲಾ ಆರೋಪ ಹಾಗೂ ವಿಶ್ಲೇಷಣೆಗಳನ್ನು ವಿಜಯ್ ಸೇತುಪತಿ ಅವರ ಅಭಿಮಾನಿಗಳು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ನಡೆಯುವ ಸ್ಪರ್ಧಿಗಳ ನಡುವಿನ ಘಟನೆಗಳು ಮತ್ತು ಚರ್ಚೆಗಳನ್ನು ಆಧಾರವಾಗಿಟ್ಟುಕೊಂಡು ಸೇತುಪತಿ ಅವರು ಆ ಮಾತುಗಳನ್ನು ಆಡಿದ್ದಾರೆಯೇ ವಿನಃ ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಗ್ ಬಾಸ್‌ನಂತಹ ಮನರಂಜನಾ ವೇದಿಕೆಯ ಮಾತುಗಳಿಗೆ ರಾಜಕೀಯ ಬಣ್ಣ ಬಳಿಯುವುದು ತಪ್ಪು ಎಂಬುದು ಅವರ ವಾದವಾಗಿದೆ.

ಈ ವಿವಾದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದಂತೆ, ಕಾರ್ಯಕ್ರಮವನ್ನು ಪ್ರಸಾರ ಮಾಡುವ ‘ವಿಜಯ್ ಟಿವಿ’ ವಾಹಿನಿಯು ಅಧಿಕೃತ ಸ್ಪಷ್ಟನೆ ನೀಡಿದೆ. ಬಿಗ್ ಬಾಸ್ ಸಂಪೂರ್ಣವಾಗಿ ಒಂದು ಮನರಂಜನಾ ಕಾರ್ಯಕ್ರಮವಾಗಿದ್ದು, ಶೋನಲ್ಲಿ ಆಡುವ ಮಾತುಗಳು ಕೇವಲ ಕಾರ್ಯಕ್ರಮದ ಭಾಗ ಮತ್ತು ಅಲ್ಲಿನ ಚಟುವಟಿಕೆಗಳಿಗೆ ಸೀಮಿತವಾಗಿವೆ ಎಂದು ತಿಳಿಸಿದೆ. ಈ ಶೋ ಮೂಲಕ ಯಾವುದೇ ವ್ಯಕ್ತಿ, ರಾಜಕೀಯ ಚಳವಳಿ ಅಥವಾ ಸಿದ್ಧಾಂತವನ್ನು ಬೆಂಬಲಿಸುವ ಅಥವಾ ಟೀಕಿಸುವ ಉದ್ದೇಶ ವಾಹಿನಿಗಿಲ್ಲ. ವೀಕ್ಷಕರು ಮತ್ತು ಸಾರ್ವಜನಿಕರು ಇದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಸರಿಯಲ್ಲ ಎಂದು ವಾಹಿನಿ ಮನವಿ ಮಾಡಿದೆ.

ಜನಪ್ರಿಯ ನಟರು ಆಡುವ ಸಣ್ಣ ಮಾತುಗಳು ಕೂಡ ರಾಜಕೀಯ ರಂಗದಲ್ಲಿ ಎಷ್ಟೊಂದು ದೊಡ್ಡ ಚರ್ಚೆಗೆ ಕಾರಣವಾಗಬಲ್ಲವು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ. ವಿಜಯ್ ಟಿವಿ ನೀಡಿದ ಸ್ಪಷ್ಟನೆಯ ನಂತರವಾದರೂ ಈ ವಿವಾದಕ್ಕೆ ತೆರೆ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಖಾಸಗಿ ಬಸ್ ಸೇವೆ ವಿರುದ್ಧ ಸ ರಿ ಗ ಮ ಪ ಸುನೀಲ್ ಗರಂ: 6 ಗಂಟೆ ವಿಳಂಬಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ!

Leave a Reply

Your email address will not be published. Required fields are marked *