TOP NEWS

‌Big News: ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದುಗೊಳಿಸಿದ ಹೈಕೋರ್ಟ್: ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಲು ಸಚಿವ ಸಂಪುಟ ನಿರ್ಧಾರ!

Big news Karnataka Government to Approach Supreme Court Against High Court Order

ಬೆಂಗಳೂರು: ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಿಸಿ ಹಿಂದಿನ ಸರ್ಕಾರ ಹೊರಡಿಸಿದ್ದ ಕಾಯ್ದೆಯನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿರುವ ಪ್ರಮುಖ ಬೆಳವಣಿಗೆಯ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಈ ತೀರ್ಪಿನ ವಿರುದ್ಧ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿರುವ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ, ಕೂಡಲೇ ಸುಪ್ರೀಂ ಕೋರ್ಟ್‌ನಲ್ಲಿ (‌Big News) ಮೇಲ್ಮನವಿ ಸಲ್ಲಿಸಲು ಗ್ರೀನ್ ಸಿಗ್ನಲ್ ನೀಡಿದೆ.

ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿನ ಹಿನ್ನೆಲೆ:

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿತ್ತು. ಸಮಾಜ ಕಲ್ಯಾಣ ಹಾಗೂ ಶೈಕ್ಷಣಿಕ ನೆರವಿನ ದೃಷ್ಟಿಯಿಂದ ಸರ್ಕಾರಿ ನೇಮಕಾತಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ (ಒಟ್ಟು ಶೇ. 56ಕ್ಕೆ) ಹೆಚ್ಚಿಸಿ ಕಾಯ್ದೆ ರೂಪಿಸಲಾಗಿತ್ತು.

ಆದರೆ, ಈ ಕಾಯ್ದೆಯ ಸಾಂವಿಧಾನಿಕ ಸಿಂಧುತೆಯನ್ನು ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿಶ್ರಾ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ‘ಇಂದಿರಾ ಸಹಾನಿ’ ತೀರ್ಪಿನ ಸ್ಪಷ್ಟ ಉಲ್ಲೇಖದಂತೆ ಒಟ್ಟು ಮೀಸಲಾತಿಯು ಯಾವುದೇ ಕಾರಣಕ್ಕೂ ಶೇ. 50ರಮಿತಿಯನ್ನು ಮೀರುವಂತಿಲ್ಲ ಎಂಬುದನ್ನು ಒತ್ತಿಹೇಳಿತು. ಮೀಸಲಾತಿ ಮಿತಿ ಮೀರುವುದಕ್ಕೆ ಯಾವುದೇ ಅಸಾಧಾರಣ ಸನ್ನಿವೇಶಗಳು ಅಥವಾ ಸಮರ್ಪಕ ಸಾಂವಿಧಾನಿಕ ಆಧಾರಗಳು ಇಲ್ಲದಿರುವುದರಿಂದ ಸರ್ಕಾರದ ಕಾಯ್ದೆ ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟು ಅದನ್ನು ರದ್ದುಗೊಳಿಸಿ ಆದೇಶಿಸಿತ್ತು.

ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಜ್ಜಾದ ರಾಜ್ಯ ಸರ್ಕಾರ:

ಹೈಕೋರ್ಟ್‌ನಿಂದ ಮೀಸಲಾತಿ ಹೆಚ್ಚಳ ರದ್ದಾಗಿರುವುದು ರಾಜ್ಯ ಸರ್ಕಾರಕ್ಕೆ ಹಾಗೂ ಆ ಸಮುದಾಯಗಳಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಗಂಭೀರವಾಗಿ ಮಂಥನ ನಡೆಸಲಾಯಿತು. ಹೈಕೋರ್ಟ್ ನೀಡಿರುವ ತೀರ್ಪಿನ ಸಾಧಕ-ಬಾಧಕಗಳ ಕುರಿತು ಸರ್ಕಾರದ ಹಿರಿಯ ಕಾನೂನು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಹಾಗೂ ಸಚಿವರು ಸಮಾಲೋಚನೆ ನಡೆಸಿದ್ದಾರೆ.

ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಾಳೇ ನಾಡಿದ್ದು ಅಥವಾ ಆದಷ್ಟು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ (SLP) ಸಲ್ಲಿಸಲು ಸಿದ್ಧತೆಗಳು ನಡೆದಿವೆ. ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ದೆಹಲಿಯ ಹಿರಿಯ ಸಾಂವಿಧಾನಿಕ ತಜ್ಞ ವಕೀಲರ ನೆರವು ಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಹಿಂದೆ ಕುಮಾರಸ್ವಾಮಿ ಪಾತ್ರವೇ ಇರಬಹುದು: ಸಚಿವ ಜಮೀರ್ ಅಹ್ಮದ್ ಖಾನ್ ಬಾಂಬ್!

Leave a Reply

Your email address will not be published. Required fields are marked *