ಬೆಂಗಳೂರು: ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅತ್ಯಂತ ಗಂಭೀರ ಅಪರಾಧ ಎಂದು ಕರ್ನಾಟಕ ಹೈಕೋರ್ಟ್ (High Court) ಅಭಿಪ್ರಾಯಪಟ್ಟಿದೆ. ಕೊಡಗು ಜಿಲ್ಲೆಯ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮೆರಿಕ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾಡಳಿತ ಹಾಗೂ ನ್ಯಾಯಾಲಯ ಎರಡೂ ಕಡೆಯಿಂದಲೂ ಈಗ ಕಠಿಣ ಕಾನೂನು ಕ್ರಮಗಳು ಜರುಗುತ್ತಿವೆ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಕೇಸ್ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿಗಳು ಆರೋಪಿತ ಹೋಂಸ್ಟೇಯ ಪರವಾನಗಿಯನ್ನು (License) ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಏನಿದು ಘಟನೆ?
ಕೊಡಗಿನ ಕುಟ್ಟಾ ಗ್ರಾಮದಲ್ಲಿದ್ದ ‘ದೇವಿ ವಿಲ್ಲಾ’ ಎಂಬ ಹೋಂಸ್ಟೇಯನ್ನು ಪಿ.ಎ. ಪೊನ್ನಪ್ಪ ಎಂಬುವವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಪ್ರವಾಸೋದ್ಯಮ ಇಲಾಖೆಯು 2024ರ ಜನವರಿ 15ರಂದು ಈ ಹೋಂಸ್ಟೇಗೆ 2029ರವರೆಗೆ ಐದು ವರ್ಷಗಳ ಕಾಲ ಮಾನ್ಯತೆ ಇರುವ ಪರವಾನಗಿ ನೀಡಿತ್ತು. ಆದರೆ ಪ್ರವಾಸಿ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಉಪ ಆಯುಕ್ತರಾದ ಎಸ್.ಜೆ. ಸೋಮಶೇಖರ್ ಅವರು ಈ ಹೋಂಸ್ಟೇಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಖಡಕ್ ಆದೇಶ ನೀಡಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ 33 ವರ್ಷದ ಅಮೆರಿಕ ಮೂಲದ ಮಹಿಳೆಯೊಬ್ಬರಿಗೆ ಮಾದಕ ವಸ್ತು ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ದೂರಿನ ಮೇರೆಗೆ ಹೋಂಸ್ಟೇ ಮಾಲೀಕ ವಿಶಾಲ್ ಪೊನ್ನಣ್ಣ ಹಾಗೂ ಕೆಲಸಗಾರ ಬ್ರಿಜೇಶ್ ಕುಮಾರ್ನನ್ನು ಪೊಲೀಸರು ಸೆರೆಮನೆಗೆ ತಳ್ಳಿದ್ದರು.
ಇತ್ತ ತನ್ನ ಮೇಲಿನ ಎಫ್ಐಆರ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಮಾಲೀಕ ವಿಶಾಲ್ ಪೊನ್ನಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದನು. ನ್ಯಾಯಾಲಯದಲ್ಲಿ ಅರ್ಜಿದಾರರ ಪರ ವಕೀಲರು, ತಮಗೆ ಎಫ್ಐಆರ್ ದಾಖಲಾಗುವ ಮುನ್ನ ಯಾವುದೇ ಮಾಹಿತಿ ಇರಲಿಲ್ಲ ಮತ್ತು ದೂರುದಾರ ಮಹಿಳೆಯು ಆರಂಭದಲ್ಲಿ ಕೇವಲ ಸಿಬ್ಬಂದಿಯನ್ನು ಮಾತ್ರ ದೂಷಿಸಿದ್ದರೇ ಹೊರತು ಮಾಲೀಕನ ಹೆಸರನ್ನು ಎಲ್ಲೂ ಹೇಳಿರಲಿಲ್ಲ ಎಂದು ವಾದಿಸಿದರು. ಅಲ್ಲದೆ, ತಮ್ಮ ಕಕ್ಷಿದಾರನನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿದರು.
ಪೊಲೀಸರಿಗೆ ನೋಟೀಸ್ ಜಾರಿ
ಆದರೆ ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ವಿದೇಶಿ ಮಹಿಳೆಯ ಮೇಲೆ ನಮ್ಮ ನೆಲದಲ್ಲಿ ಅತ್ಯಾಚಾರ ನಡೆದಿರುವುದು ಸಣ್ಣ ವಿಷಯವಲ್ಲ ಎಂದು ಗರಂ ಆಯಿತು. ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ತನಿಖಾ ವರದಿ ನೋಡಿ ನಿರ್ಧರಿಸಲಾಗುವುದು. ಇದು ತಕ್ಷಣವೇ ತಡೆಯಾಜ್ಞೆ (Stay) ನೀಡಬಹುದಾದ ಕೇಸ್ ಅಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳು, ಮುಂಬರುವ ಬುಧವಾರದೊಳಗೆ ಪ್ರಕರಣದ ಸಂಪೂರ್ಣ ತನಿಖಾ ದಾಖಲೆಗಳನ್ನು ಕೋರ್ಟ್ಗೆ ಒಪ್ಪಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
