ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ಜಟಾಪಟಿ ಈಗ ಬಾಲಿವುಡ್ ಡೈಲಾಗ್‌ಗಳ ಮಟ್ಟಕ್ಕೆ ಬಂದು ನಿಂತಿದೆ. ಇರಾನ್‌ನ 158 ಹಡಗುಗಳನ್ನು ಅಮೆರಿಕ ಸೇನೆ ಧ್ವಂಸಗೊಳಿಸಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ, ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು ಶಾರುಖ್ ಖಾನ್ ಅವರ ಸಿನಿಮಾ (America-Iran) ಶೈಲಿಯಲ್ಲೇ ಖಡಕ್ ತಿರುಗೇಟು ನೀಡಿದೆ. ಸೋಮವಾರ ‘ಎಕ್ಸ್’ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಯಭಾರ ಕಚೇರಿ, ಅಮೆರಿಕಕ್ಕೆ ಎಚ್ಚರಿಕೆ ನೀಡಲು “ಓಂ ಶಾಂತಿ ಓಂ” ಸಿನಿಮಾದ ಜನಪ್ರಿಯ ಸಂಭಾಷಣೆಯನ್ನು ಬಳಸಿಕೊಂಡಿದೆ.
ಸಿನಿಮಾ ಇನ್ನೂ ಬಾಕಿ ಇದೆ ಎಂದ ಇರಾನ್
ಇರಾನ್ ನೌಕಾಪಡೆ ಸಂಪೂರ್ಣ ನೆಲಸಮವಾಗಿದೆ ಎಂದು ಟ್ರಂಪ್ ಬೀಗಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ರಾಯಭಾರ ಕಚೇರಿಯು ತನ್ನ ವೇಗದ ದೋಣಿಗಳು ಕ್ಷಿಪಣಿಗಳನ್ನು ಉಡಾಯಿಸುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. “ಪರ್ಷಿಯನ್ ಕೊಲ್ಲಿಯ ಕೆಂಪು ಜೇನುನೊಣಗಳು (Red bees) ಈಗಷ್ಟೇ ಕಣಕ್ಕಿಳಿಯಲು ಸಜ್ಜಾಗುತ್ತಿವೆ. ಇರಾನ್ ನೌಕಾಪಡೆ ಅಂತ್ಯವಾಯಿತು ಎಂದು ಟ್ರಂಪ್ ಹೇಳುತ್ತಿರುವುದು ತಮಾಷೆಯಾಗಿದೆ. ಜೇನುನೊಣಗಳ ಹಿಂಡಿನಂತೆ ನಾವು ಮುತ್ತಿಗೆ ಹಾಕಿದರೆ ತಪ್ಪಿಸಿಕೊಳ್ಳುವುದು ಅಸಾಧ್ಯ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಅಲ್ಲದೆ, “ಅಭಿ ತೋ ಸಿರ್ಫ್ ಟ್ರೈಲರ್ ಹೈ, ಪಿಕ್ಚರ್ ಅಭಿ ಬಾಕಿ ಹೈ” (ಇದು ಬರೀ ಟ್ರೈಲರ್ ಅಷ್ಟೇ, ಸಿನಿಮಾ ಇನ್ನು ಬಾಕಿ ಇದೆ) ಎಂದು ಟ್ರಂಪ್ ಅವರ ಕಾಲೆಳೆದಿದೆ.
“Red bees of the #PersianGulf” yeah, the fast missile boats are warming up.
— Consulate General of the I.R. Iran in Mumbai (@IRANinMumbai) April 13, 2026
Funny how #Trump kept claiming #Iran’s navy was “finished”… now they’re about to find out how a swarm can pin you down real quick.
Abhi toh sirf trailer hai, picture abhi baaki hai 😏.#HORMUZ pic.twitter.com/Wu0FV5iMIc
ಅಮೆರಿಕ ಅಧ್ಯಕ್ಷ ಟ್ರಂಪ್ ಈ ಹಿಂದೆ ಇರಾನ್‌ನ ಬಹುತೇಕ ಹಡಗುಗಳು ಸಮುದ್ರದ ತಳ ಸೇರಿವೆ ಎಂದು ಪೋಸ್ಟ್ ಮಾಡಿದ್ದರು. ಇರಾನ್‌ನ ಸಣ್ಣ ಗಾತ್ರದ ವೇಗದ ದೋಣಿಗಳನ್ನು ತಾವು ಇದುವರೆಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ, ಆದರೆ ಈಗ ವಿಧಿಸಿರುವ ಸಮುದ್ರ ದಿಗ್ಬಂಧನದ ಹತ್ತಿರ ಈ ದೋಣಿಗಳು ಬಂದರೆ ಅವುಗಳನ್ನು ಮಾದಕ ವಸ್ತು ಸಾಗಣೆದಾರರನ್ನ ಕೊಲ್ಲುವಷ್ಟೇ ಬ್ರೂಟಲ್ ಆಗಿ ನಾಶಪಡಿಸುವುದಾಗಿ ಟ್ರಂಪ್ ಗುಡುಗಿದ್ದರು.
ಹಾರ್ಮುಜ್ ಜಲಸಂಧಿಯ ಎಲ್ಲಾ ಬಂದರುಗಳನ್ನು ಅಮೆರಿಕ ನೌಕಾಪಡೆ ದಿಗ್ಬಂಧನಕ್ಕೊಳಪಡಿಸಿರುವ ಕಾರಣ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಇಂತಹ ಬಿಗುವಿನ ವಾತಾವರಣದ ನಡುವೆಯೂ ಇರಾನ್ ತನ್ನ ‘ರೆಡ್ ಬೀಸ್’ ಕ್ಷಿಪಣಿ ದೋಣಿಗಳ ಶಕ್ತಿ ಪ್ರದರ್ಶಿಸುತ್ತಾ, ಬಾಲಿವುಡ್ ಪ್ರಭಾವದ ಮೂಲಕ ಅಮೆರಿಕಕ್ಕೆ ಸವಾಲು ಹಾಕಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇರಾನ್‌ನ ಈ ‘ಸಿನೆಮ್ಯಾಟಿಕ್’ ತಿರುಗೇಟು ಮತ್ತು ಅಮೆರಿಕದ ದಿಗ್ಬಂಧನ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.
