ಬೆಂಗಳೂರು: ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು ಮತ್ತು ತೀವ್ರ ಸುಸ್ತು ಇವು ಮಧುಮೇಹದ (Diabetes) ಪ್ರಮುಖ ಲಕ್ಷಣಗಳಾಗಿವೆ. ಆದರೆ, ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವು ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಹೆಚ್ಚಾಗಿಯೇ ಇರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ಹಲವರಿಗೆ ತಮಗೆ ಟೈಪ್ 2 ಮಧುಮೇಹ ಇದೆ ಎಂಬುದೇ ಆರಂಭದಲ್ಲಿ ಗೊತ್ತಾಗುವುದಿಲ್ಲ.
ಇಂಡಿಯನ್ ಜರ್ನಲ್ ಆಫ್ ನೇತ್ರಶಾಸ್ತ್ರದ ಅಧ್ಯಯನದ ಪ್ರಕಾರ, 2019ರ ವೇಳೆಗೆ ಭಾರತದಲ್ಲಿ ಸುಮಾರು 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದರು. ಈ ಸಂಖ್ಯೆ 2045ರ ಹೊತ್ತಿಗೆ 134 ಮಿಲಿಯನ್ಗಿಂತಲೂ ಹೆಚ್ಚಾಗುವ ಅಂದಾಜಿದೆ. ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ ಡಾ. ವಿನಿತಾ ಸಿಂಗ್ ಟಂಡನ್ ಅವರ ಪ್ರಕಾರ, ಅನೇಕ ಮಂದಿ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗುವವರೆಗೂ ತಮಗೆ ಡಯಾಬಿಟಿಸ್ ಇರುವುದು ತಿಳಿಯುವುದೇ ಇಲ್ಲ. ಈ ಸಮಸ್ಯೆ ದೇಹದಲ್ಲಿ ದೀರ್ಘಕಾಲದವರೆಗೆ ಮೌನವಾಗಿ ಸುಪ್ತವಾಗಿರಬಹುದು.
ನಿಧಾನವಾಗಿ ಬೆಳೆಯುವ ಟೈಪ್ 2 ಮಧುಮೇಹ
ಟೈಪ್ 2 ಮಧುಮೇಹವು ದೇಹದಲ್ಲಿ ಬಹಳ ನಿಧಾನಗತಿಯಲ್ಲಿ ಬೆಳವಣಿಗೆ ಹೊಂದುತ್ತದೆ. ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದಿಸದಿದ್ದಾಗ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಏರಿಕೆಯಾಗುತ್ತದೆ. ಈ ಹಂತದಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಬದಲಾವಣೆಗಳನ್ನು ಹಲವರು ಗಂಭೀರವಾಗಿ ಪರಿಗಣಿಸುವುದಿಲ್ಲ. ದೈನಂದಿನ ಕೆಲಸದ ಒತ್ತಡ ಅಥವಾ ಸುಸ್ತು ಎಂದು ಭಾವಿಸಿ ನಿರ್ಲಕ್ಷ್ಯ ವಹಿಸುವುದೇ ಹೆಚ್ಚು.
ಆದರೆ, ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಯಾವುದೇ ಕಾರಣವಿಲ್ಲದೆ ತೂಕ ಇಳಿಕೆಯಾಗುವುದು, ಸತತ ಆಯಾಸ, ಕಣ್ಣು ಮಂಜಾಗುವುದು, ಗಾಯಗಳು ಬೇಗ ವಾಸಿಯಾಗದಿರುವುದು ಹಾಗೂ ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ ಅನುಭವವಾದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು.
ಯಾರಿಗೆ ಹೆಚ್ಚಿನ ಅಪಾಯವಿದೆ?
ಲಕ್ಷಣಗಳಿಲ್ಲದಿದ್ದರೂ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಡಾ. ವಿನಿತಾ ಸಿಂಗ್ ಟಂಡನ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ತೆಲುಗು ವರದಿ ಮಾಡಿದೆ. ಯಾವುದೇ ಸಮಸ್ಯೆ ಇಲ್ಲದಿದ್ದರೂ, ಕೆಲವು ಅಪಾಯಕಾರಿ ಅಂಶಗಳನ್ನು ಹೊಂದಿರುವವರು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಕುಟುಂಬದಲ್ಲಿ ಮಧುಮೇಹದ ಇತಿಹಾಸ ಹೊಂದಿರುವವರು, ಅಧಿಕ ತೂಕ, ದೈಹಿಕ ಶ್ರಮದ ಕೊರತೆ, ಅಧಿಕ ರಕ್ತದೊತ್ತಡ (ಬಿಪಿ) ಇರುವವರು, ಹಿಂದೆ ಪ್ರಿಡಿಯಾಬಿಟಿಸ್ ಸಮಸ್ಯೆ ಇದ್ದವರು ಹಾಗೂ ಗರ್ಭಾವಸ್ಥೆಯಲ್ಲಿ ಮಧುಮೇಹಕ್ಕೆ ಒಳಗಾಗಿದ್ದ ಮಹಿಳೆಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ರಕ್ತ ಪರೀಕ್ಷೆಯೊಂದೇ ನಿಖರ ಉತ್ತರ
ದೇಹದಲ್ಲಿ ಮೌನವಾಗಿರುವ ಮಧುಮೇಹವನ್ನು ಪತ್ತೆಹಚ್ಚಲು ರಕ್ತ ಪರೀಕ್ಷೆಯೇ ಸುಲಭ ಮತ್ತು ನಿಖರ ಮಾರ್ಗವಾಗಿದೆ. ಉಪವಾಸದ ರಕ್ತದ ಸಕ್ಕರೆ (FBS) ಪರೀಕ್ಷೆಯ ಜೊತೆಗೆ, ಕಳೆದ ಎರಡರಿಂದ ಮೂರು ತಿಂಗಳ ಸರಾಸರಿ ಸಕ್ಕರೆ ಮಟ್ಟವನ್ನು ತೋರಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ವರದಿಯಲ್ಲಿ HbA1c ಮಟ್ಟ ಶೇಕಡಾ 5.7ಕ್ಕಿಂತ ಕಡಿಮೆ ಇದ್ದರೆ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಶೇಕಡಾ 5.7ರಿಂದ 6.4ರವರೆಗೆ ಇದ್ದರೆ ಅದು ಮಧುಮೇಹ ಪೂರ್ವ ಸ್ಥಿತಿ (ಪ್ರಿಡಿಯಾಬಿಟಿಸ್) ಆಗಿದ್ದು, ಶೇಕಡಾ 6.5 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮಧುಮೇಹ ಇದೆ ಎಂದರ್ಥ.
ನೀವು ಆರೋಗ್ಯವಾಗಿದ್ದೀರಿ ಎಂಬ ಕಾರಣಕ್ಕೆ ಸಕ್ಕರೆ ಮಟ್ಟ ಸಹಜವಾಗಿದೆ ಎಂದು ಭಾವಿಸುವುದು ಸರಿಯಲ್ಲ. ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯದೆ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂಬುದು ತಜ್ಞರ ಕಿವಿಮಾತು.
ಇದನ್ನೂ ಓದಿ: ತೂಕ ಇಳಿಸಲು ಬೆಳಗಿನ ತಿಂಡಿಗೆ ಇಡ್ಲಿ ಉತ್ತಮವಾ ಅಥವಾ ದೋಸೆಯಾ? ಪೌಷ್ಟಿಕಾಂಶ ತಜ್ಞರ ಸಲಹೆ ಇಲ್ಲಿದೆ
