TOP NEWS

Ramayana: ‘ರಾಮಾಯಣ’ ಚಿತ್ರದ ಮನಮುಟ್ಟುವ ಸಂಭಾಷಣೆಗಳು: ರಾಮ-ಸೀತೆಯ ಆಪ್ತ ಮಾತುಕತೆ- ಕನ್ನಡ ಡಬ್ಬಿಂಗ್‌ನ ವಿಶೇಷತೆ ಇಲ್ಲಿದೆ

From Rama Sita Subtle Conversation to Ravana Intellect How Ramayana Kannada Dubbing Captures the Epic Essence

ಬೆಂಗಳೂರು: ಭಾರತೀಯ ಮಹಾಕಾವ್ಯ ‘ರಾಮಾಯಣ’ (Ramayana) ಆಧಾರಿತ ಸಿನಿಮಾದಲ್ಲಿ ಬರುವ ಅರ್ಥಪೂರ್ಣ ಸಂಭಾಷಣೆಗಳು ಹಾಗೂ ಪಾತ್ರಗಳ ಚಿತ್ರಣ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶ್ರೀಮನ್ನಾರಾಯಣನ ಏಳನೇ ಅವತಾರವೇ ಶ್ರೀರಾಮ ಎಂಬುದನ್ನು ಸಿನಿಮಾದಲ್ಲಿ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. ಮತ್ತೊಂದೆಡೆ, ಲಂಕಾಧಿಪತಿ ರಾವಣನ ಅಟ್ಟಹಾಸದ ಜೊತೆಗೆ ಆತನ ಅಪಾರ ಬುದ್ಧಿವಂತಿಕೆಯನ್ನೂ ಅಷ್ಟೇ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಹತ್ತು ತಲೆಗಳ ದಶಾನನನಿಗೆ ಒಂದೇ ಬಾರಿಗೆ ಹತ್ತು ಬಗೆಯ ಆಲೋಚನೆಗಳು ಹೇಗೆ ಮೂಡುತ್ತಿದ್ದವು ಎಂಬುದನ್ನು ವಿಶೇಷವಾಗಿ ಬಿಂಬಿಸಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಮೂಲ ಹಿಂದಿ ಭಾಷೆಯ ಈ ಚಿತ್ರವನ್ನು ಕನ್ನಡಕ್ಕೆ ಅತ್ಯಂತ ಅಚ್ಚುಕಟ್ಟಾಗಿ ಡಬ್ ಮಾಡಲಾಗಿದ್ದು, ಸರಳ ಹಾಗೂ ಸ್ಪಷ್ಟವಾದ ಸಂಭಾಷಣೆಗಳು ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿವೆ.

“ನಿಮ್ಮ ಬಗ್ಗೆ ಸ್ವಲ್ಪ ತಿಳಿದುಕೊಂಡೆ, ಸ್ವಲ್ಪ ನೋಡಿದೆ”: ರಾಮ-ಸೀತೆಯ ಆಪ್ತ ಸಂಭಾಷಣೆ

ರಾಕ್ಷಸರ ಉಪಟಳದಿಂದ ಕಂಗೆಟ್ಟ ಮುನಿವರ್ಯರು ಅಯೋಧ್ಯೆಗೆ ಆಗಮಿಸಿ, ದುಷ್ಟ ಸಂಹಾರಕ್ಕಾಗಿ ರಾಮ-ಲಕ್ಷ್ಮಣರನ್ನು ತಮ್ಮೊಂದಿಗೆ ಕಳುಹಿಸುವಂತೆ ಕೇಳಿಕೊಳ್ಳುತ್ತಾರೆ. ಮುನಿಗಳ ಆಶ್ರಮಕ್ಕೆ ತೆರಳಿ ರಾಕ್ಷಸರನ್ನು ಸಂಹರಿಸಿದ ಬಳಿಕ, ಮುನಿವರ್ಯರು ರಾಮನಿಗೆ ಆಶೀರ್ವಾದ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಮಿಥಿಲೆಯ ರಾಜಕುಮಾರಿ ಸೀತೆಯ ವಿಚಾರ ಪ್ರಸ್ತಾಪವಾಗುತ್ತದೆ. ಶಿವನ ‘ಪಿನಾಕ’ ಧನಸ್ಸನ್ನು ಎತ್ತಿ ಮುರಿದ ಬಳಿಕ ರಾಮನಿಗೆ ಸೀತೆಯನ್ನು ವರಿಸುವ ಯೋಗ ಕೂಡಿಬರುತ್ತದೆ.

ವಿವಾಹಕ್ಕೂ ಮುನ್ನ ರಾಮ ಮತ್ತು ಸೀತೆ ಪರಸ್ಪರ ಭೇಟಿಯಾಗಿ ಆಡುವ ಮಾತುಗಳು ಸಿನಿಮಾದಲ್ಲಿ ಅತ್ಯಂತ ಸೊಗಸಾಗಿ ಮೂಡಿಬಂದಿವೆ. “ನನ್ನ ಸ್ವಯಂವರಕ್ಕೆ ಬರಲು ನಿಮಗೆ ಇಷ್ಟ ಇರಲಿಲ್ಲವೇ?” ಎಂದು ಸೀತೆ ಕೇಳಿದಾಗ, ರಾಮನು ಅಷ್ಟೇ ನಯವಾಗಿ “ನಿಮ್ಮ ಬಗ್ಗೆ ಸ್ವಲ್ಪ ತಿಳಿದುಕೊಂಡೆ, ಸ್ವಲ್ಪ ನೋಡಿದೆ; ಅದಕ್ಕಾಗಿಯೇ ಈ ಸ್ವಯಂವರಕ್ಕೆ ಬಂದೆ” ಎಂದು ಉತ್ತರಿಸುತ್ತಾನೆ. ಬಳಿಕ ರಾಮನೂ ಸಹ ಸೀತೆಯ ಅಭಿಪ್ರಾಯ ಕೇಳಿದಾಗ, ಸೀತೆ ಕೂಡ “ನಾನೂ ನಿಮ್ಮ ಬಗ್ಗೆ ಸ್ವಲ್ಪ ತಿಳಿದುಕೊಂಡೆ, ಸ್ವಲ್ಪ ನೋಡಿದೆ” ಎಂದು ಮಾರ್ಮಿಕವಾಗಿ ನುಡಿಯುತ್ತಾಳೆ. ಅನಗತ್ಯ ವಿಸ್ತರಣೆ ಇಲ್ಲದೆ, ಎಷ್ಟು ಬೇಕೋ ಅಷ್ಟೇ ಹಿತಮಿತವಾದ ಮತ್ತು ಆಳವಾದ ಅರ್ಥವಿರುವ ಸಂಭಾಷಣೆಗಳು ಈ ದೃಶ್ಯದ ತೂಕವನ್ನು ಹೆಚ್ಚಿಸಿವೆ.

ಸ್ತ್ರೀ ಗೌರವ ಮತ್ತು ಧರ್ಮಸಂಕಟದ ಸನ್ನಿವೇಶ

ರಾಮಾಯಣದ ಕಥೆಯಲ್ಲಿ ಬರುವ ಪ್ರತಿಯೊಂದು ಘಟನೆಯೂ ಬದುಕಿಗೆ ಒಂದೊಂದು ಪಾಠವನ್ನು ಕಲಿಸುತ್ತದೆ. ಅಂತಹ ಒಂದು ಮಹತ್ವದ ಸನ್ನಿವೇಶ ಸಿನಿಮಾದಲ್ಲಿದೆ. ಯಜ್ಞಕ್ಕೆ ಅಡ್ಡಿಪಡಿಸುತ್ತಿದ್ದ ಇಬ್ಬರು ರಾಕ್ಷಸರನ್ನು ಸಂಹರಿಸುವ ಜವಾಬ್ದಾರಿ ರಾಮನ ಮೇಲಿರುತ್ತದೆ. ಅವರಲ್ಲಿ ಒಬ್ಬ ಪುರುಷ ರಾಕ್ಷಸನಾಗಿದ್ದರೆ, ಮತ್ತೊಬ್ಬಳು ಸ್ತ್ರೀ ರಾಕ್ಷಸಿ. ಪುರುಷ ರಾಕ್ಷಸನನ್ನು ಕ್ಷಣಾರ್ಧದಲ್ಲಿ ಸಂಹರಿಸುವ ರಾಮ, ಸ್ತ್ರೀ ರಾಕ್ಷಸಿಯನ್ನು ಕೊಲ್ಲಲು ಹಿಂದೇಟು ಹಾಕುತ್ತಾನೆ.

ಮಹಿಳೆಯರ ಮೇಲೆ ಅಪಾರ ಗೌರವ ಹೊಂದಿದ್ದ ರಾಮನು, ಹೆಣ್ಣುಮಕ್ಕಳನ್ನು ಕೊಲ್ಲುವುದು ಧರ್ಮವಲ್ಲ ಎಂಬ ಭಾವನೆಯಿಂದ ಆಕೆಯ ಪ್ರಾಣ ತೆಗೆಯದೆ ಕೇವಲ ಕಾಲಿಗೆ ಬಾಣ ಹೂಡಿ ಗಾಯಗೊಳಿಸುತ್ತಾನೆ. ಆದರೆ, ರಾಮನ ಈ ಧರ್ಮಸಂಕಟವನ್ನು ಗಮನಿಸಿದ ಮುನಿವರ್ಯರು ಆತನಿಗೆ ಕರ್ತವ್ಯದ ಅರಿವು ಮೂಡಿಸುತ್ತಾರೆ. ದುಷ್ಟತನ ಮತ್ತು ರಾಕ್ಷಸ ಪ್ರವೃತ್ತಿಗೆ ಹೆಣ್ಣು-ಗಂಡು ಎಂಬ ಭೇದವಿಲ್ಲ; ಲೋಕಕಲ್ಯಾಣಕ್ಕಾಗಿ ದುಷ್ಟರ ಸಂಹಾರ ಅನಿವಾರ್ಯ ಎಂದು ಮುನಿಗಳು ಮನವರಿಕೆ ಮಾಡಿಕೊಡುತ್ತಾರೆ. ಗುರುಗಳ ಮಾತಿನಂತೆ ಕರ್ತವ್ಯಪ್ರಜ್ಞೆಗೆ ಬದ್ಧನಾದ ರಾಮ, ಅಂತಿಮವಾಗಿ ಆ ರಾಕ್ಷಸಿಯ ಎದೆಗೆ ಬಾಣ ಬಿಟ್ಟು ಸಂಹರಿಸುತ್ತಾನೆ.

ಒಟ್ಟಾರೆಯಾಗಿ, ಇಂತಹ ಅನೇಕ ಮೌಲ್ಯಯುತ ಸನ್ನಿವೇಶಗಳನ್ನು ಈ ಚಿತ್ರದಲ್ಲಿ ಅರ್ಥಪೂರ್ಣವಾಗಿ ಹೆಣೆಯಲಾಗಿದೆ. ಕನ್ನಡ ಡಬ್ಬಿಂಗ್‌ನಲ್ಲಿ ಬಳಸಲಾಗಿರುವ ಸಾಹಿತ್ಯ ಮತ್ತು ಪದಗಳ ಆಯ್ಕೆ ಅತ್ಯುತ್ತಮವಾಗಿದ್ದು, ಕನ್ನಡದಲ್ಲಿ ಸಿನಿಮಾ ವೀಕ್ಷಿಸಿದವರಿಗೆ ಒಂದು ವಿಶಿಷ್ಟ ಮತ್ತು ಆಪ್ತ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: ನಟ ರವಿ ಮೋಹನ್ ಪತ್ನಿ ಮಾನನಷ್ಟ ಮೊಕದ್ದಮೆ: ಗಾಯಕಿ ಕೆನಿಶಾ ಫ್ರಾನ್ಸಿಸ್‌ಗೆ ಕೋರ್ಟ್ ನೋಟಿಸ್

Leave a Reply

Your email address will not be published. Required fields are marked *