TOP NEWS

Asha Workers: “ಜಾಹೀರಾತಿಗೆ 500 ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಹಣವಿಲ್ಲವೇ?”: ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಕಿಡಿ

No Funds for Us Despite 500 Crore on Ads ASHA Workers Slam Karnataka Govt Over Fund Shortage Claim

ಬೆಂಗಳೂರು: ಹವಾಮಾನದ ಏರುಪೇರು, ಬಿಸಿಲು ಮತ್ತು ಚಳಿಯನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು (Asha Workers) ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಮಾಸಿಕ 15,000 ರೂಪಾಯಿ ಗೌರವಧನ ನೀಡಬೇಕು ಹಾಗೂ ನಿವೃತ್ತಿಯ ನಂತರ 5 ಲಕ್ಷ ರೂಪಾಯಿ ಇಡಿಗಂಟು ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ನಡೆಸಿದ ಮನವೊಲಿಕೆ ಪ್ರಯತ್ನಗಳಿಗೂ ಬಗ್ಗದ ಕಾರ್ಯಕರ್ತೆಯರು, ಪ್ರತಿಭಟನೆಯನ್ನು ಇನ್ನಷ್ಟು ಗಟ್ಟಿಯಾಗಿ ಮುಂದುವರಿಸಲು ನಿರ್ಧರಿಸಿದ್ದಾರೆ. ತಮ್ಮ ಎಲ್ಲ ಬೇಡಿಕೆಗಳು ಈಡೇರುವ ಕುರಿತು ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಸ್ಪಷ್ಟ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

“ಜಾಹೀರಾತಿಗೆ 500 ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಹಣವಿಲ್ಲವೇ?”

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ವಿಷಯದಲ್ಲಿ ಇದು ಕೇಂದ್ರ ಸರ್ಕಾರದ ಯೋಜನೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಪ್ರತಿಭಟನಾನಿರತರು ದೂರಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಮತ್ತು ಹಣಕಾಸಿನ ಕೊರತೆ ಇದೆ ಎಂಬ ಸರ್ಕಾರದ ಮಾತುಗಳಿಗೆ ಕಾರ್ಯಕರ್ತೆಯರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಚಾರ ಮತ್ತು ಜಾಹೀರಾತುಗಳಿಗಾಗಿ 500 ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರಕ್ಕೆ, ತಳಮಟ್ಟದಲ್ಲಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸುರಂಗ ಮಾರ್ಗ ನಿರ್ಮಾಣ ಯೋಜನೆಗೆ 17,000 ಕೋಟಿಯಿಂದ 20,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಸಂಸದರಿಗೆ ತಲಾ 30 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ಕೊಡಿಸುವ ಸರ್ಕಾರ, ಪ್ರತಿ ವಾರ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಕಟಿಸುತ್ತಿದೆ. ಆದರೆ, ಆಶಾ ಕಾರ್ಯಕರ್ತೆಯರ ವಿಷಯ ಬಂದಾಗ ಮಾತ್ರ ಹಣದ ಕೊರತೆಯ ಕಾರಣ ಮುಂದಿಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ನೌಕರರ ಸ್ಥಾನಮಾನಕ್ಕೆ ಆಗ್ರಹ, ವಿಭಜನೆ ತಂತ್ರಕ್ಕೆ ಆಕ್ಷೇಪ

ನಾವು ನೀಡುತ್ತಿರುವ ಹಣ ರಾಜ್ಯದ ಜನರ ತೆರಿಗೆ ಹಣವಾಗಿದ್ದು, ಅದನ್ನು ನ್ಯಾಯಯುತವಾಗಿ ಮತ್ತು ಸಮಾನವಾಗಿ ಹಂಚಬೇಕು ಎಂದು ಆಶಾ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ. ಸರ್ಕಾರಿ ನೌಕರರಂತೆಯೇ ದಿನದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೂ, ತಮಗೆ ಇನ್ನೂ ನೌಕರರ ಸ್ಥಾನಮಾನ ನೀಡಿಲ್ಲ ಎಂಬ ಕೊರಗನ್ನು ಅವರು ತೋಡಿಕೊಂಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಹಾಗೂ ಅತಿಥಿ ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳ ನೌಕರರ ಪ್ರತಿಭಟನೆಗಳ ಉದಾಹರಣೆಗಳನ್ನು ನೀಡುವ ಮೂಲಕ, ಬೇರೆ ಬೇರೆ ವರ್ಗಗಳ ಹೋರಾಟವನ್ನು ಒಡೆಯುವ ಮತ್ತು ದುರ್ಬಲಗೊಳಿಸುವ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ. ಬೇಡಿಕೆಗಳಿಗೆ ಲಿಖಿತ ಭರವಸೆ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಕಾರ್ಯಕರ್ತೆಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 2028ರ ಮೇ ಒಳಗೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸುವುದು ಖಚಿತ: ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ತಿರುಗೇಟು

Leave a Reply

Your email address will not be published. Required fields are marked *