ಧಾರವಾಡ: ‘ರಿಯಲ್ ಎಸ್ಟೇಟ್ ಸಿಎಂ’ ಎಂದು ಗುರುತಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಈಗ ‘ಬೆಲೆ ಏರಿಕೆ ದೊರೆ’ ಎಂಬ ಹೊಸ ಹೆಸರು ಅಥವಾ ಗರಿ ಮೂಡಿದೆ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಅವರು ಲೇವಡಿ ಮಾಡಿದ್ದಾರೆ.
ಬಿಎಂಟಿಸಿ ದರ ಏರಿಕೆ ಹಾಗೂ (Arvind Bellad) ಮುಂಬರುವ ಸ್ಟ್ಯಾಂಪ್ ಡ್ಯೂಟಿ ಹೊರೆ
ಸಿದ್ದರಾಮಯ್ಯನವರ ಹಾದಿಯಲ್ಲೇ ಸಾಗುತ್ತಿರುವ ಡಿ.ಕೆ. ಶಿವಕುಮಾರ್, ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಬೆಲೆ ಏರಿಕೆ ಸರಣಿ ಮುಂದುವರಿಸಿದ್ದಾರೆ ಎಂದು ಬೆಲ್ಲದ್ ಆರೋಪಿಸಿದರು. ಬಿಎಂಟಿಸಿ ಸಾರಿಗೆ ದರವನ್ನು ಶೇಕಡಾ 42 ರಷ್ಟು ಏರಿಕೆ ಮಾಡಿರುವುದು ಬಡ ಕೂಲಿಕಾರರು ಮತ್ತು ಸಾಮಾನ್ಯ ಜನರಿಗೆ ಭಾರಿ ಹೊರೆಯಾಗಿದೆ. ಹಾಲಿನ ದರ, ತುಪ್ಪ ಹಾಗೂ ಇತರ ಕ್ಷೀರ ಉತ್ಪನ್ನಗಳ ದರ ಏರಿಕೆಯಾಗಿದ್ದು, ಮುಂಬರುವ ನಾಲ್ಕೈದು ದಿನಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ದರದಲ್ಲೂ ಏರಿಕೆಯಾಗಲಿದೆ ಎಂಬ ಮಾಹಿತಿ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಪಿಂಚಣಿ ಕಡಿತ ಹಾಗೂ ಇಲಾಖಾ ವೆಚ್ಚಗಳ ಲೋಪ
ಕಾಂಗ್ರೆಸ್ ಸರ್ಕಾರಕ್ಕೆ ಸಾರ್ವಜನಿಕರ ಹಿತಾಸಕ್ತಿಗಿಂತ ಹಣ ಗಳಿಸುವುದೇ ಮುಖ್ಯ ಗುರಿಯಾಗಿದೆ. ಈಗಾಗಲೇ ಎರಡು ತಿಂಗಳ ಗೃಹಲಕ್ಷ್ಮಿ ಹಣ ನೀಡಲು ಸಾಧ್ಯವಿಲ್ಲವೆಂದು ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲ ಪಿಂಚಣಿಗಳನ್ನು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳ ಅನುದಾನ ಮತ್ತು ಬಸ್ಗಳಿಗೆ ಡೀಸೆಲ್ ಒದಗಿಸಲು ಹಣವಿಲ್ಲದೆ ಸರ್ಕಾರ ತತ್ತರಿಸಿದೆ. ಕೆಎಂಎಫ್ನಂತಹ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಆಡಳಿತಾತ್ಮಕ ವೆಚ್ಚಗಳನ್ನು (Administrative costs) ಕಡಿಮೆ ಮಾಡುವ ಬದಲು, ಸಾರ್ವಜನಿಕರ ಮೇಲೆ ನೇರ ತೆರಿಗೆ ಮತ್ತು ಬೆಲೆ ಏರಿಕೆಯ ಹೊರೆ ಹೊರಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಖಂಡನೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ್, ರಾಜಕೀಯ ಸಿದ್ಧಾಂತ ಏನೇ ಇರಲಿ, ಹಿರಿಯರಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿ. ಕುಮಾರಸ್ವಾಮಿ ಅವರಿಗೆ ಪ್ರಿಯಾಂಕ್ ಖರ್ಗೆ ಅವರಷ್ಟೇ ದೊಡ್ಡ ಮಗನಿದ್ದಾನೆ. ರಾಜಕೀಯ ಭಿನ್ನಾಭಿಪ್ರಾಯಗಳ ಏನೇ ಇದ್ದರೂ, ಪ್ರಿಯಾಂಕ್ ಖರ್ಗೆ ಹಿರಿಯ ನಾಯಕರ ವಿರುದ್ಧ ಮಾತನಾಡುವಾಗ ಕನಿಷ್ಠ ಮರ್ಯಾದೆ ಮತ್ತು ಗೌರವ ಕಾಪಾಡಿಕೊಳ್ಳಬೇಕು. ಈ ರೀತಿಯ ನಡವಳಿಕೆ ಸಚಿವರಿಗೆ ಶೋಭೆಯಲ್ಲ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಮುಂಬರುವ ಅಧಿವೇಶನದೊಳಗೆ ಮಹಿಳಾ ಸಚಿವರ ನೇಮಕ ಎಂದ ಸಿಎಂ ಡಿಕೆ ಶಿವಕುಮಾರ್!
