TOP NEWS

Crime: 68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಆರೋಪ: ಕೆಎಎಸ್ ಅಧಿಕಾರಿ ದುರ್ಗಾಶ್ರೀ ವಿರುದ್ಧ ಕ್ರಿಮಿನಲ್ ಕೇಸ್!

Crime FIR Registered Against KAS Officer Durga Shree Over Alleged Fake Land Records Scam

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರ್‍ಟಿಸಿಯಲ್ಲಿ(Crime) ಖಾತೆ ಬದಲಾಯಿಸಿರುವ ಗಂಭೀರ ಆರೋಪದಡಿಯಲ್ಲಿ ಕೆಎಎಸ್ (KAS) ಅಧಿಕಾರಿ ದುರ್ಗಾಶ್ರೀ ಅವರ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಹಾಲಿ ದೊಡ್ಡಬಳ್ಳಾಪುರ ಸಹಾಯಕ ಆಯುಕ್ತ (AC) ಮಂಜುನಾಥ್ ಅವರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ಈ ಕಠಿಣ ಕಾನೂನು ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

೬೮ ಎಕರೆಗೂ ಹೆಚ್ಚು ಜಮೀನಿಗೆ ನಕಲಿ ದಾಖಲೆ (Crime) ಸೃಷ್ಟಿಸಿದ ಗಂಭೀರ ಆರೋಪ

ದೊಡ್ಡಬಳ್ಳಾಪುರ ಮಾಜಿ ಎಸಿ ಆಗಿದ್ದ ದುರ್ಗಾಶ್ರೀ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಗೆ ಒಳಪಡುವ ಮೂರು ಪ್ರಮುಖ ಗ್ರಾಮಗಳ ಜಮೀನುಗಳಲ್ಲಿ ಭಾರಿ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ೮೭ ಸರ್ವೆ ನಂಬರ್‌ಗಳಿಗೆ ಸೇರಿದ ಬರೋಬ್ಬರಿ ೬೮ ಎಕರೆ ೩೫ ಗುಂಟೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಆರ್‍ಟಿಸಿಯಲ್ಲಿ ಸೇರ್ಪಡೆ ಮಾಡಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲಿದೆ.

ಈ ಪ್ರಮುಖ ಅಕ್ರಮಕ್ಕೆ ಸಂಬಂಧಿಸಿದಂತೆ ಈ ಹಿಂದೆ ಲೋಕಾಯುಕ್ತದಲ್ಲೂ ಸುಮೊಟೊ (ಸುವೊ ಮೊಟು) ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು. ಇದೀಗ ಪ್ರಕರಣದ ಆಳವನ್ನು ಪರಿಶೀಲಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ (DC) ಕಟ್ಟುನಿಟ್ಟಿನ ಆದೇಶದ ಮೇರೆಗೆ ಹಾಲಿ ಎಸಿ ಮಂಜುನಾಥ್ ಅವರು ದೊಡ್ಡಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ.

ಬಿಎನ್‌ಎಸ್ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲು

ದೊಡ್ಡಬಳ್ಳಾಪುರ ನಗರ ಪೊಲೀಸರು ಮಾಜಿ ಎಸಿ ದುರ್ಗಾಶ್ರೀ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ವಿವಿಧ ಪ್ರಮುಖ ವಿಭಾಗಗಳಾದ ೩೧೮ (೪), ೩೩೫, ೩೩೭, ೩೪೦ (೨), ೩೪೧ ಹಾಗೂ ೩ (೫) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೆಎಎಸ್ ಅಧಿಕಾರಿಯೊಬ್ಬರ ವಿರುದ್ಧವೇ ಈ ರೀತಿಯ ಬೃಹತ್ ಭೂ ಅಕ್ರಮ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಇದನ್ನೂ ಓದಿ: 5,೦೦೦ ಕೋಟಿ ರೂ. ಅಕ್ರಮ ಕ್ರಿಪ್ಟೋ ವಹಿವಾಟು ಪತ್ತೆ: ಪ್ರಮುಖ ಕಂಪನಿ ಮೇಲೆ ಇ.ಡಿ ದಾಳಿ!

Leave a Reply

Your email address will not be published. Required fields are marked *