ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ (ಪಶ್ಚಿಮ ಏಷ್ಯಾ) ಉಂಟಾಗಿರುವ ಉದ್ವಿಗ್ನತೆ, ಇರಾನ್-ಇಸ್ರೇಲ್ ಸಶಸ್ತ್ರ ಸಂಘರ್ಷ ಹಾಗೂ ಸೌದಿ ಅರೇಬಿಯಾ ಮೇಲಿನ ದಾಳಿಗಳ ಪ್ರಭಾವ ಇದೀಗ ನೇರವಾಗಿ ಅಡುಗೆಮನೆ ಮತ್ತು ಹಬ್ಬದ (Big News) ಬಜೆಟ್ ಮೇಲೆ ಬಿದ್ದಿದೆ. ಪಶ್ಚಿಮ ಏಷ್ಯಾದ ಯುದ್ಧ ಪೀಡಿತ ಪ್ರದೇಶಗಳಿಂದ ಆಮದಾಗುವ ಒಣ ಹಣ್ಣುಗಳ (Dry Fruits) ಪೂರೈಕೆ ಶೃಂಖಲೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೇರಿದೆ.
ಸಮುದ್ರ ಮಾರ್ಗಗಳ ಬಂದ್ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಳದಿಂದಾಗಿ ಈ ದರ ಏರಿಕೆ ಉಂಟಾಗಿದ್ದು, ದೀಪಾವಳಿ ಹಬ್ಬ ಹಾಗೂ ಶೀತಲ ಋತುವಿನ ವೇಳೆಯಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ಎದುರಾಗಿದೆ.
ಯಾವ ಒಣ ಹಣ್ಣಿನ (Big News) ಬೆಲೆ ಎಷ್ಟಿದೆ? (ಸಗಟು ಮಾರುಕಟ್ಟೆ ದರಪಟ್ಟಿ)
ಬೆಂಗಳೂರಿನ ಶಿವಾಜಿನಗರದ ರಸಲ್ ಮಾರ್ಕೆಟ್ ಹಾಗೂ ಕೆ.ಆರ್. ಮಾರ್ಕೆಟ್ ವರ್ತಕರು ನೀಡಿರುವ ಮಾಹಿತಿಯಂತೆ ಪ್ರಸ್ತುತ ಪ್ರಮುಖ ಡ್ರೈ ಫ್ರೂಟ್ಸ್ಗಳ ಸಗಟು ದರ ಹೀಗಿದೆ:
- ಕ್ಯಾಲಿಫೋರ್ನಿಯಾ ಬಾದಾಮಿ: ಕೆಜಿಗೆ ₹900 ರಿಂದ ₹1,200
- ಮಮ್ರಾ ಬಾದಾಮಿ: ಕೆಜಿಗೆ ₹2,500 ರಿಂದ ₹4,000
- ಸಾದಾ ಪಿಸ್ತಾ: ₹1,800 ರಿಂದ ದಿಢೀರ್ ₹2,800ಕ್ಕೆ ಏರಿಕೆ
- ವಾಲ್ನಟ್ಸ್ (ಆಕ್ರೋಟ್): ಕೆಜಿಗೆ ₹900 ರಿಂದ ₹1,400
- ಅಂಜೂರ: ಕೆಜಿಗೆ ₹1,200 ರಿಂದ ₹1,800
- ಒಣದ್ರಾಕ್ಷಿ: ಕೆಜಿಗೆ ₹350 ರಿಂದ ₹600
- ಅಜ್ವಾ ಹಾಗೂ ಕಲ್ಮಿ ಖರ್ಜೂರ: ಕೆಜಿಗೆ ₹650 ರಿಂದ ₹900
ಸದ್ಯದ ಸನ್ನಿವೇಶದಲ್ಲಿ ಯುದ್ಧದ ವಾತಾವರಣ ಮುಂದುವರಿದರೆ ಮುಂಬರುವ ಡಿಸೆಂಬರ್ ತಿಂಗಳವರೆಗೂ ಬೆಲೆಗಳು ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ ಎಂದು ರಸೆಲ್ ಮಾರ್ಕೆಟ್ ವರ್ತಕರ ಸಂಘದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸುತ್ತುಬಳಸಿದ ಹಡಗು ಮಾರ್ಗ: 4000 ಡಾಲರ್ಗೆ ಏರಿದ ಕಂಟೈನರ್ ಬಾಡಿಗೆ!
ಇರಾನ್ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ಸೌದಿ ಅರೇಬಿಯಾ ಮೂಲಕ ಬರುತ್ತಿದ್ದ ಸುರಕ್ಷಿತ ಸಮುದ್ರ ವ್ಯಾಪಾರ ಮಾರ್ಗಗಳು ಸಂಘರ್ಷದಿಂದಾಗಿ ಸಂಪೂರ್ಣವಾಗಿ ಬಂದ್ ಆಗಿವೆ. ಇದರಿಂದಾಗಿ ಸರಕು ಹೊತ್ತ ಹಡಗುಗಳು ಆಫ್ರಿಕಾ ಖಂಡವನ್ನು ಸುತ್ತುವರೆದು ಅತ್ಯಂತ ದೀರ್ಘವಾದ ಪರ್ಯಾಯ ಮಾರ್ಗಗಳಲ್ಲಿ ಪ್ರಯಾಣಿಸಬೇಕಾಗಿದೆ.
ಪರಿಣಾಮವಾಗಿ ಸರಕು ಸಾಗಣೆ ವೆಚ್ಚ (Freight Cost) ವಿಪರೀತ ಹೆಚ್ಚಾಗಿದೆ. ಈ ಹಿಂದೆ 20 ಅಡಿ ಕಂಟೈನರ್ ಸಾಗಣೆಗೆ 1,500 ಡಾಲರ್ ಬಾಡಿಗೆ ಇತ್ತು. ಆದರೆ ಈಗ ಅದು ಬರೋಬ್ಬರಿ 4,000 ಡಾಲರ್ಗೆ ಏರಿಕೆಯಾಗಿದೆ. ಇದಲ್ಲದೆ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದು ಸಹ ಆಮದು ವೆಚ್ಚ ಹೆಚ್ಚಾಗಲು ಮುಖ್ಯ ಕಾರಣವಾಗಿದೆ.
ಗೋಡಂಬಿ ಇಳುವರಿ ಕುಸಿತ ಹಾಗೂ ಗಿಫ್ಟ್ ಬಾಕ್ಸ್ ಬೇಡಿಕೆ
ಒಂದೆಡೆ ಆಮದು ಸರಕುಗಳ ಅಭಾವವಾದರೆ, ಇನ್ನೊಂದೆಡೆ ದೇಶೀಯವಾಗಿ ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಗೋಡಂಬಿ ಇಳುವರಿ ಶೇಕಡಾ 12ರಷ್ಟು ಕುಸಿದಿದೆ. ಆದರೂ ಮಂಗಳೂರು ಹಾಗೂ ದಕ್ಷಿಣ ಆಫ್ರಿಕಾದಿಂದ ಗೋಡಂಬಿ ಪೂರೈಕೆಯಾಗುತ್ತಿದ್ದು, ಕೆಜಿಗೆ ₹800 ಇದ್ದ ಗೋಡಂಬಿ ದರ ₹950ಕ್ಕೆ ತಲುಪಿದೆ.
ಮತ್ತೊಂದೆಡೆ ಹಬ್ಬದ ಋತುವಿನಲ್ಲಿ ಕಾರ್ಪೊರೇಟ್ ಕಂಪನಿಗಳು ಸಾವಿರಾರು ಡ್ರೈ ಫ್ರೂಟ್ಸ್ ಗಿಫ್ಟ್ ಬಾಕ್ಸ್ಗಳಿಗೆ ಆರ್ಡರ್ ನೀಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಶರವೇಗದಲ್ಲಿ ಹೆಚ್ಚಾಗಿದೆ.
ಹೆಲ್ತ್ ಸೀಡ್ಸ್ಗಳಿಗೂ ತಟ್ಟಿದ ಬೆಲೆ ಏರಿಕೆಯ ಬಿಸಿ!
ಬಾದಾಮಿ, ಪಿಸ್ತಾ ಹಾಗೂ ಅಂಜೂರದಂತಹ ಸಾಂಪ್ರದಾಯಿಕ ಡ್ರೈ ಫ್ರೂಟ್ಸ್ ಬೆಲೆ ಅತಿಯಾಗಿ ಏರಿಕೆಯಾದ ಹಿನ್ನೆಲೆಯಲ್ಲಿ ಗ್ರಾಹಕರು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಪರ್ಯಾಯ ಉತ್ಪನ್ನಗಳತ್ತ ಮುಖ ಮಾಡಿವೆ. ಗಿಫ್ಟ್ ಬಾಕ್ಸ್ಗಳಲ್ಲಿ ಈಗ ಕುಂಬಳಕಾಯಿ ಬೀಜ (Pumpkin Seeds), ಚಿಯಾ ಸೀಡ್ಸ್, ಸೂರ್ಯಕಾಂತಿ ಬೀಜ, ಫ್ಲಾಕ್ಸ್ ಸೀಡ್ಸ್ ಹಾಗೂ ಮಖಾನಾಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
ಇದರಿಂದಾಗಿ ಈ ಹೆಲ್ತ್ ಸೀಡ್ಸ್ಗಳಿಗೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಇವುಗಳ ಬೆಲೆಯಲ್ಲೂ ಶೇ. 30ರಷ್ಟು ಏರಿಕೆ ಕಂಡುಬಂದಿದೆ ಎಂದು ಕೆ.ಆರ್. ಮಾರ್ಕೆಟ್ ವರ್ತಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮುತ್ತಾತಂದಿರ ಕಾಲದ ಸಂಪ್ರದಾಯಕ್ಕೆ ಅಡಚಣೆ: ಪೊಲೀಸರು ಹಾಗೂ ಎಸಿಬಿ ಅಧಿಕಾರಿ ವಿರುದ್ಧ ರೊಚ್ಚಿಗೆದ್ದ ಕೃಷ್ಣಾ ಜೆಟ್ಟಿ
