ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಅವರ ಫೋಟೋ ಪ್ರದರ್ಶನದ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಈಗಿದು ಬಿಜೆಪಿ (BJP) ಮತ್ತು ಕಾಂಗ್ರೆಸ್ ನಡುವಿನ ನೇರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಪ್ರಿಯಾಂಕಾ ಗಾಂಧಿ ಪುತ್ರನ ಫೋಟೋಗಳನ್ನು ಬಿಕಾನೇರ್ ಹೌಸ್ ಆಡಳಿತ ಮಂಡಳಿ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಹಿಸಿರುವ ಮೌನವನ್ನು ಬಿಜೆಪಿ ತೀವ್ರವಾಗಿ ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷದೊಳಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನಡುವೆ ಆಂತರಿಕ ಅಧಿಕಾರಕ್ಕಾಗಿ ಶೀತಲ ಸಮರ ನಡೆಯುತ್ತಿದೆ ಎಂದು ಬಿಜೆಪಿ ಶುಕ್ರವಾರ ಗಂಭೀರವಾಗಿ ಆರೋಪಿಸಿದೆ.
ಒಂದೇ ಒಂದೂ ಟ್ವಿಟ್ ಮಾಡದ ರಾಹುಲ್
ಪ್ರಸ್ತುತ ವಿಯೆಟ್ನಾಂ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಪಂಚದ ನಾನಾ ವಿದ್ಯಮಾನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ತಮ್ಮ ಸ್ವಂತ ಅಳಿಯ ರೈಹಾನ್ ವಾದ್ರಾ ವಿಚಾರದಲ್ಲಿ ಒಂದೇ ಒಂದು ಬೆಂಬಲದ ಟ್ವೀಟ್ ಮಾಡದಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ವ್ಯಂಗ್ಯವಾಡಿದ್ದಾರೆ. ತಮ್ಮ ಸಹೋದರ ರಾಹುಲ್ ಗಾಂಧಿ ಅವರ ರಾಜಕೀಯ ಭವಿಷ್ಯದ ಮೇಲೆ ಪ್ರಿಯಾಂಕಾ ಗಾಂಧಿ ಅವರಿಗೆ ಸಂಪೂರ್ಣ ನಂಬಿಕೆ ಹೊರಟುಹೋಗಿದೆ. ಹೀಗಾಗಿ ಕೃತಕ ವಿವಾದ ಸೃಷ್ಟಿಸುವ ಮೂಲಕ ತಮ್ಮ ಮಗನನ್ನು ರಾಜಕೀಯಕ್ಕೆ ‘ಸಾಫ್ಟ್ ಲಾಂಚ್’ ಮಾಡಲು ಪ್ರಿಯಾಂಕಾ ಯತ್ನಿಸುತ್ತಿದ್ದಾರೆ ಎಂದು ಭಂಡಾರಿ ಆರೋಪಿಸಿದ್ದಾರೆ.
ಜೂನ್‌ನಲ್ಲಿದ್ದ ಪ್ರಸ್ತಾವನೆಗೂ ಅಕ್ಟೋಬರ್‌ನ ಫೋಟೋಗೂ ಸಂಬಂಧವೇ ಇಲ್ಲ ಎಂದ ಬಿಜೆಪಿ!
ಬಿಕಾನೇರ್ ಹೌಸ್‌ನಲ್ಲಿ ನಡೆಯಬೇಕಿದ್ದ ‘ನೋ ಐಡಿಯಾ ಈಸ್ ಫೈನಲ್’ ಹೆಸರಿನ ಪ್ರದರ್ಶನದಿಂದ 74 ಫೋಟೋಗಳನ್ನು ತೆಗೆದುಹಾಕಿದ ಪ್ರಸಂಗವನ್ನು ಬಿಜೆಪಿ ಕೇವಲ ರಾಜಕೀಯ ಗಿಮಿಕ್ ಎಂದು ಬಣ್ಣಿಸಿದೆ. ರೈಹಾನ್ ವಾದ್ರಾ ಅವರು ಜೂನ್ 10ರಂದು ಬಿಕಾನೇರ್ ಹೌಸ್‌ಗೆ ಕಳುಹಿಸಿದ್ದ ಇಮೇಲ್ ಪ್ರಸ್ತಾವನೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ಅದರಲ್ಲಿ ವನ್ಯಜೀವಿ, ಪ್ರಕೃತಿ, ಕಲಾಕೃತಿ ಹಾಗೂ ಶಿಲ್ಪಕಲೆಗಳಿಗೆ ಸಂಬಂಧಿಸಿದ ಫೋಟೋಗಳನ್ನು ಪ್ರದರ್ಶಿಸುವುದಾಗಿ ಉಲ್ಲೇಖಿಸಲಾಗಿತ್ತು ಎಂದು ತಿಳಿಸಿದೆ. ಬಿಕಾನೇರ್ ಹೌಸ್ ಕೂಡ ಜೂನ್ 30ರಂದು ಈ ನಿಯಮಗಳಿಗೆ ಅನುಗುಣವಾಗಿ ಪ್ರದರ್ಶನಕ್ಕೆ ಅನುಮತಿ ನೀಡಿತ್ತು.
ಆದರೆ, ಅಕ್ಟೋಬರ್‌ನಲ್ಲಿ ಪ್ರದರ್ಶನ ಆರಂಭವಾಗುವ ಕೆಲವೇ ದಿನಗಳ ಮೊದಲು ನಿಯಮಗಳನ್ನು ಗಾಳಿಗೆ ತೂರಿ ದೆಹಲಿಯ ಯುವಕರ ಪ್ರತಿಭಟನೆಯ ರಾಜಕೀಯ ಫೋಟೋಗಳನ್ನು ಸೇರಿಸಲಾಯಿತು. ಈ ಕಾರಣಕ್ಕಾಗಿಯೇ ಬಿಕಾನೇರ್ ಹೌಸ್ ಅಕ್ಟೋಬರ್ 21ರಂದು ನೋಟಿಸ್ ನೀಡಿ ನಿಯಮಬಾಹಿರ ಫೋಟೋಗಳನ್ನು ತೆರವುಗೊಳಿಸಲು ಸೂಚಿಸಿತು ಎಂದು ಬಿಜೆಪಿ ದಾಖಲೆಗಳನ್ನು ಬಹಿರಂಗಪಡಿಸಿದೆ. ಕುಟುಂಬದ ಒತ್ತಡದಿಂದಾಗಿ ರೈಹಾನ್ ವಾದ್ರಾ ಕೊನೆ ಕ್ಷಣದಲ್ಲಿ ರಾಜಕೀಯ ಫೋಟೋಗಳನ್ನು ತಂದು ಇಟ್ಟಿದ್ದಾರೆ ಹಾಗೂ ಕಾಂಗ್ರೆಸ್ ನಾಯಕರು ಈ ಸತ್ಯವನ್ನು ಮುಚ್ಚಿಟ್ಟು ಬಿಕಾನೇರ್ ಹೌಸ್ ಹಾಗೂ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಆರೋಗ್ಯದ ಬಗ್ಗೆ ಸ್ಪಷ್ಟನೆ: ದೇಶದ ಅಧ್ಯಕ್ಷರೊಂದಿಗೆ 7 ಗಂಟೆಗಳ ಕಾಲ ಮಹತ್ವದ ಸಭೆ!
