ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿ ಮುಕ್ತ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಸಂಘಟಿತ ಅಪರಾಧ ದಳದ ಅಧಿಕಾರಿಗಳು, ಸುದೀರ್ಘ ಕಾಲದಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಇಬ್ಬರು ಕುಖ್ಯಾತ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕೋರ್ಟ್ಗೆ ಹಾಜರಾಗದೆ ಪರಾರಿಯಾಗಿದ್ದ ರೌಡಿಶೀಟರ್ ಒಬ್ಬನನ್ನು ಸಿಸಿಬಿ (Crime) ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ.
ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ಅವರ ಪ್ರತ್ಯಕ್ಷ ಮಾರ್ಗದರ್ಶನ ಹಾಗೂ ಉಸ್ತುವಾರಿಯಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಲಾಗಿದ್ದು, ನಗರದಾದ್ಯಂತ ನಿತ್ಯ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಸಿಸಿಬಿಯ ಈ ಮಿಂಚಿನ ದಾಳಿ ಹಾಗೂ ಖಡಕ್ ನಡಗೆ ಸದ್ಯ ರಾಜಧಾನಿಯ ರೌಡಿ ಪಡೆ ಕಂಗಾಲಾಗಿದೆ.
ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ: ಮೊದಲ ಕಾರ್ಯಾಚರಣೆಯಲ್ಲಿ, ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ (ಮೊ.ಸಂ. 149/2020) ಭಾಗಿಯಾಗಿದ್ದ ಸೈಯ್ಯದ್ ಶೋಬೇನ್ ಬಿನ್ ಸೈಯ್ಯದ್ ಅಫ್ಸರ್ ಎಂಬ ಆರೋಪಿಯನ್ನು ಸಿಸಿಬಿ ತಂಡ ಬಂಧಿಸಿದೆ. ಈತ ಕಳೆದ ಐದು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಿರಂತರವಾಗಿ ತಲೆಮರೆಸಿಕೊಂಡಿದ್ದನು. ಈತನ ಬಂಧನಕ್ಕಾಗಿ ಸ್ಥಳೀಯ ಪೊಲೀಸರು ಸಾಲು ಸಾಲು ಯತ್ನಗಳನ್ನು ನಡೆಸಿದ್ದರೂ ಆತ ಚಾಣಾಕ್ಷತನದಿಂದ ಪರಾರಿಯಾಗುತ್ತಿದ್ದನು. ಸಿಸಿಬಿಯ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿ ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಮುಂದಿನ ಕಾನೂನು ನಡಾವಳಿಗಳಿಗಾಗಿ ಕೆ.ಜಿ. ಹಳ್ಳಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂರು ವರ್ಷಗಳಿಂದ ಪರಾರಿಯಾಗಿದ್ದ ರೌಡಿಶೀಟರ್ ‘ಕಬೂತರ್ ಇಮ್ರಾನ್’ ಜೈಲಿಗೆ: ಮತ್ತೊಂದು ಯಶಸ್ವಿ ಕಾರ್ಯಾಚರಣೆಯಲ್ಲಿ, ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಇಮ್ರಾನ್ ಅಲಿಯಾಸ್ ಕಬೂತರ್ ಇಮ್ರಾನ್ ಬಿನ್ ಸೈಯ್ಯದ್ ಸಮಿ (38) ಎಂಬಾತನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ವಿರುದ್ಧ ಕೊಲೆಯತ್ನ, ದರೋಡೆ ಯತ್ನ ಹಾಗೂ ಮಾದಕ ದ್ರವ್ಯ (ಡ್ರಗ್ಸ್) ಸರಬರಾಜು ಸೇರಿದಂತೆ ಸುಮಾರು 8ಕ್ಕೂ ಹೆಚ್ಚು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ 3 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ (NBW) ಜಾರಿಗೊಳಿಸಿತ್ತು. ಕಾರ್ಯಾಚರಣೆ ನಡೆಸಿ ರೌಡಿಶೀಟರ್ನನ್ನು ಸೆರೆಹಿಡಿದಿರುವ ಸಿಸಿಬಿ, ಆತನನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಡಿ.ಜೆ. ಹಳ್ಳಿ ಠಾಣೆಗೆ ಹಸ್ತಾಂತರಿಸಿದೆ.
ಡಿಸಿಪಿ ಶ್ರೀನಿವಾಸ್ ಗೌಡ ಅವರ ನಿರ್ದೇಶನದಂತೆ ಸಿಸಿಬಿಯ ವಿಶೇಷ ವಿಭಾಗವು ರೌಡಿಗಳು ಹಾಗೂ ತಲೆಮರೆಸಿಕೊಂಡಿರುವ ಹಳೆಯ ಅಪರಾಧಿಗಳ ಹೆಡೆಮುರಿ ಕಟ್ಟಲು ನಗರದಾದ್ಯಂತ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿರಿಯ ಅಧಿಕಾರಿ ಆತ್ಮಹತ್ಯೆ
