ದೊಡ್ಡಬಳ್ಳಾಪುರ: ಜಗಳ ಬಿಡಿಸಲು ಹೋದ ಹೊಯ್ಸಳ ತುರ್ತು ಸ್ಪಂದನ (112) ಸಿಬ್ಬಂದಿ ಮೇಲೆಯೇ ಮದ್ಯಪಾನಿ ಪುಂಡರು ಭೀಕರ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಾಲಜೋಗಹಳ್ಳಿಯಲ್ಲಿ ನಡೆದಿದೆ. ಮದ್ಯದ ಮತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಪುಂಡರನ್ನು ತಡೆಯಲು ಹೋದ ಪೋಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ (Crime) ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಘಟನೆಯ ವಿವರಗಳ ಪ್ರಕಾರ, ರಾತ್ರಿ ವೇಳೆ ನೈಟ್ ಡ್ಯೂಟಿಯಲ್ಲಿದ್ದ 112 ಪೊಲೀಸ್ ಸಿಬ್ಬಂದಿಗಳಾದ ಮಣಿಕಂಠ ಹಾಗೂ ರಾಯಪ್ಪ ಪೂಜಾರಿ ಅವರಿಗೆ ಪಾಲಜೋಗಹಳ್ಳಿಯಿಂದ ಕರೆ ಬಂದಿತ್ತು. ಸ್ಥಳೀಯವಾಗಿ ಇಬ್ಬರು ವ್ಯಕ್ತಿಗಳು ಕುಡಿದ ಮತ್ತಿನಲ್ಲಿ ಪರಸ್ಪರ ರಂಪಾಟ ಮಾಡುತ್ತಾ ತೀವ್ರ ಜಗಳವಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತುರ್ತು ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದರು. ದೂರು ಸ್ವೀಕರಿಸಿದ ತಕ್ಷಣವೇ ಈ ಇಬ್ಬರು ಪೊಲೀಸರು ಕರ್ತವ್ಯ ಪ್ರಜ್ಞೆಯಿಂದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸ್ಥಳಕ್ಕೆ ತಲುಪಿದ ಪೊಲೀಸರು ಜಗಳವಾಡುತ್ತಿದ್ದ ಹರಹಾನ್ ಸಾರಿಹಾನ್ ಹಾಗೂ ಬಸೀರ ಅಲಿಯಾಸ್ ಗಿಡ್ಡ ಎಂಬ ಇಬ್ಬರು ಆರೋಪಿಗಳನ್ನು ಸಮಾಧಾನಪಡಿಸಿ, ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ, ಕುಡಿತದ ಅಮಲಿನಲ್ಲಿದ್ದ ಆರೋಪಿಗಳು ಪೊಲೀಸರ ಮಾತಿಗೆ ಕಿವಿಕೊಡದೆ, ಉಲ್ಟಾ ಅವರ ಮೇಲೆಯೇ ಮುಗಿಬಿದ್ದು ಏಕಾಏಕಿ ದೌರ್ಜನ್ಯ ಎಸಗಿದ್ದಾರೆ. ಗಲಾಟೆ ಬಿಡಿಸಲು ಬಂದ ಪೋಲೀಸರ ಎದೆ, ಕೈ ಹಾಗೂ ಕಾಲುಗಳಿಗೆ ಮನಬಂದಂತೆ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದ್ದಾರೆ.
ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ
ಬೆದರಿಕೆಯ ನಡುವೆಯೂ ಪೋಲಿಸರ ಮೇಲೆ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡ ಆರೋಪಿಗಳ ಕೃತ್ಯದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಹಲ್ಲೆ ನಡೆಸಿದ ಆರೋಪಿಗಳಾದ ಹರಹಾನ್ ಸಾರಿಹಾನ್ ಮತ್ತು ಬಸೀರ ಅಲಿಯಾಸ್ ಗಿಡ್ಡ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡ ಸಿಬ್ಬಂದಿಗಳಾದ ಮಣಿಕಂಠ ಮತ್ತು ರಾಯಪ್ಪ ಪೂಜಾರಿ ಅವರನ್ನು ತಕ್ಷಣವೇ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: 43ನೇ ಮಹಡಿಯಿಂದ ಜಿಗಿದು ಯುವಕ ಭೀಕರ ಆತ್ಮಹತ್ಯೆ
