ಬೆಂಗಳೂರು: ರಾಜ್ಯದಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಅವಧಿಯಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಬಲವಂತವಾಗಿ ಮತ್ತು ಅಕ್ರಮವಾಗಿ ಮತದಾರರ ಪಟ್ಟಿಯಿಂದ ಕೈಬಿಡಲು ಬೃಹತ್ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕನ್ನು ಎತ್ತಿಹಿಡಿಯುವುದು ಹಾಗೂ ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ಸಾಮಾಜಿಕ ಹಿನ್ನೆಲೆಯ ಜನರನ್ನು ಪಟ್ಟಿಯಿಂದ ವಂಚಿಸದಂತೆ ತಡೆಯುವುದು ಸರ್ಕಾರದ ಹಾಗೂ ಚುನಾವಣಾ ಆಯೋಗದ ಪರಮ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಡಿಕೆಶಿ ಪ್ರತಿಪಾದಿಸಿದ್ದಾರೆ.
ಏನೆಲ್ಲಾ ಇದೆ ಸಿಎಂ ಪತ್ರದಲ್ಲಿ?
ಚುನಾವಣಾ ಆಯೋಗವು ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ್ದ ಕೊನೆಯ ದಿನಗಳಾದ ಸೆಪ್ಟೆಂಬರ್ 22, 23 ಮತ್ತು 24 ರಂದು ರಾಜ್ಯಾದ್ಯಂತ ದಿಢೀರನೆ ಬೃಹತ್ ಸಂಖ್ಯೆಯಲ್ಲಿ ಫಾರಂ-7 (ಮತದಾರರ ಹೆಸರು ರದ್ದುಗೊಳಿಸಲು ಸಲ್ಲಿಸುವ ಅರ್ಜಿ) ಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿ ಸಲ್ಲಿಕೆಯ ಪ್ರಮಾಣ ಹಾಗೂ ಶೈಲಿ ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸುಮಾರು 3,000, ಮೂಡಿಗೆರೆಯಲ್ಲಿ 6,259, ಬಬಲೇಶ್ವರದಲ್ಲಿ 1,373, ನರಸಿಂಹರಾಜ ಕ್ಷೇತ್ರದಲ್ಲಿ 1,200 ಹಾಗೂ ಭಾಲ್ಕಿ ಕ್ಷೇತ್ರದಲ್ಲಿ 2,285 ಫಾರಂ-7 ಅರ್ಜಿಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದ ಇನ್ನೂ ಹಲವು ಕ್ಷೇತ್ರಗಳಲ್ಲಿ ಇದೇ ಮಾದರಿಯಲ್ಲಿ ಸಾವಿರಾರು ಅರ್ಜಿಗಳನ್ನು ಅಕ್ರಮವಾಗಿ ಸಲ್ಲಿಸಲಾಗಿದೆ ಎಂದು ಸಿಎಂ ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.
ವಿಶೇಷವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ (OBC) ಮತದಾರರನ್ನೇ ಗುರುತಿಸಿ ಲಕ್ಷ್ಯವಾಗಿಸಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇವರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲು ಮುಂಚಿತವಾಗಿಯೇ ಮತದಾರರ ಹೆಸರು, ಎಪಿಕ್ (EPIC) ಸಂಖ್ಯೆ ಮತ್ತು ಇತರೆ ಸಂಪೂರ್ಣ ವಿವರಗಳನ್ನು ಪ್ರಿಂಟ್ ಮಾಡಲಾದ ಫಾರಂ-7 ಅರ್ಜಿಗಳನ್ನು ಬಳಸಲಾಗಿದೆ. ತದನಂತರ ಆಕ್ಷೇಪಣೆ ಸಲ್ಲಿಸುವವರ (Objector) ಹೆಸರನ್ನು ಭರ್ತಿ ಮಾಡಲಾಗಿದೆ. ಮತದಾರರ ವೈಯಕ್ತಿಕ ವಿವರಗಳು ಹಾಗೂ ಎಪಿಕ್ ದತ್ತಾಂಶಗಳು ಚುನಾವಣಾ ಆಯೋಗದ ಅತ್ಯಂತ ಸುರಕ್ಷಿತ ಸಿಸ್ಟಂನಲ್ಲಿ ಮಾತ್ರ ಲಭ್ಯವಿರುತ್ತವೆ. ಇಂತಹ ಖಾಸಗಿ ಹಾಗೂ ಸಂವೇದನಾಶೀಲ ಡೇಟಾ ಹೊರಗಿನ ವ್ಯಕ್ತಿಗಳಿಗೆ ಹೇಗೆ ಸಿಕ್ಕಿತು? ಡೇಟಾ ಭದ್ರತೆ ಮತ್ತು ಖಾಸಗಿತನದ ದೃಷ್ಟಿಯಿಂದ ಈ ದತ್ತಾಂಶ ಸೋರಿಕೆಯ ಕುರಿತು ತುರ್ತು ತನಿಖೆ ನಡೆಸಬೇಕಾಗಿದೆ ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ದಾಖಲೆಗಳ ಸಮೇತ ಆರೋಪ
ಮತ್ತೊಂದೆಡೆ, ಒಂದೇ ಒಬ್ಬ ವ್ಯಕ್ತಿ ಅಥವಾ ಕೇವಲ ಬೆರಳೆಣಿಕೆಯ ಕಾರ್ಯಕರ್ತರು ಬೃಹತ್ ಪ್ರಮಾಣದ ಫಾರಂ-7 ಅರ್ಜಿಗಳನ್ನು ಸಲ್ಲಿಸಿರುವುದು ವರದಿಯಾಗಿದೆ. ಬೆಳಗಾವಿ ಉತ್ತರದ ಪರಾಜಿತ ಬಿಜೆಪಿ ಅಭ್ಯರ್ಥಿ ಡಾ. ರವಿ ಬಿ. ಪಾಟೀಲ್ ಹಾಗೂ ಬೆಳಗಾವಿ ಜಿಲ್ಲಾ ಯುವ ಮೋರ್ಚಾದ ಜಾದವ್ ಅವರು ತಮ್ಮ ಬೆಂಬಲಿಗರ ಮೂಲಕ ಭಾರೀ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವುದಾಗಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಗಳು ಹಾಗೂ ಈಗಾಗಲೇ ದಾಖಲಾಗಿರುವ ಎಫ್ಐಆರ್ (FIR) ಪ್ರತಿಗಳನ್ನು ಸಿಎಂ ಆಯೋಗಕ್ಕೆ ಸಲ್ಲಿಸಿದ್ದಾರೆ. ಅಲ್ಲದೆ, ಕೆಲವೆಡೆ ಬೂತ್ ಮಟ್ಟದ ಅಧಿಕಾರಿಗಳು (BLO) ಇಂತಹ ಅಕ್ರಮ ಅರ್ಜಿಗಳನ್ನು ಸ್ವೀಕರಿಸದೆ ವಾಪಸ್ ಕಳುಹಿಸಿದ್ದು, ಆ ವಿವರಗಳನ್ನು ಸಂಗ್ರಹಿಸಿ ತನಿಖೆಗೆ ಒಳಪಡಿಸಬೇಕಿದೆ.
ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದಲೇ ನಡೆದಿರುವ ಈ ಷಡ್ಯಂತ್ರದ ಮೂಲ ಜಾಲವನ್ನು ಬೇರುಸಹಿತ ಕಿತ್ತೊಗೆಯಬೇಕಿದೆ. ಇದರಲ್ಲಿ ಪ್ರಭಾವಿ ರಾಜಕೀಯ ಮುಖಂಡರು ಭಾಗಿಯಾಗಿರುವ ಗಂಭೀರ ಆರೋಪಗಳಿದ್ದು, ಪ್ರತಿಯೊಂದು ಕ್ಷೇತ್ರ ಹಾಗೂ ಬೂತ್ವಾರಿಯಾಗಿ ತಟಸ್ಥ ಮತ್ತು ಕಾಲಮಿತಿಯ ತನಿಖೆ ನಡೆಯಬೇಕು. ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಯಾವುದೇ ಒಬ್ಬ ಅರ್ಹ ಮತದಾರನ ಹೆಸರೂ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟವಾಗಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಫಾರಂ-7 ದುರ್ಬಳಕೆ ನಡೆಸಿ ಬೋಗಸ್ ಅರ್ಜಿ ಸಲ್ಲಿಕೆ: ಚುನಾವಣಾ ಆಯೋಗದ ಕಚೇರಿಯಲ್ಲಿ ಡಿಕೆಶಿ ಧರಣಿಗೆ ಸಜ್ಜು
