TOP NEWS

DK Shivakumar: ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆ, ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಬಂಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ!

DK Shivakumar Hits Out at Election Commission Demands Arrest of Chief Election Commissioner

ಬೆಂಗಳೂರು: ದೇಶದಲ್ಲಿ ಮತಗಳ್ಳತನದ ಮೂಲಕ ಪ್ರಜಾಪ್ರಭುತ್ವದ ಮೂಲ ವ್ಯವಸ್ಥೆಯನ್ನೇ ಧ್ವಂಸಗೊಳಿಸಲು ಯತ್ನಿಸಲಾಗುತ್ತಿದ್ದು, ಭಾರತೀಯ ಚುನಾವಣಾ ಆಯೋಗವು ಸಂಪೂರ್ಣವಾಗಿ ಆಡಳಿತಾರೂಢ ಬಿಜೆಪಿಯ ಕೈಗೊಂಬೆಯಂತೆ ಕಾರ್ಯಾಚರಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ, ಶೋಷಿತರ ಮತ್ತು ಆಡಳಿತ ಪಕ್ಷದ ಲೋಪದೋಷಗಳನ್ನು ಪ್ರಶ್ನಿಸುವ ಮುಕ್ತ ಮನಸ್ಸಿನ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಸಾಲು ಸಾಲಾಗಿ ತೆಗೆದುಹಾಕಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿ, ಕೆಪಿಸಿಸಿ ವತಿಯಿಂದ ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರಪತಿಗಳ ಮಧ್ಯಪ್ರವೇಶ ಮತ್ತು ಆಯೋಗ ವಿಸರ್ಜನೆಗೆ ಒತ್ತಾಯ: ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, “ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಅಕ್ರಮಗಳ ವಿರುದ್ಧ ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು. ಬಿಜೆಪಿ ಜೊತೆ ಸೇರಿ ಮತಗಳ್ಳತನದಲ್ಲಿ ಭಾಗಿಗಳಾಗಿರುವ ಪ್ರಸ್ತುತ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಅಲ್ಲದೆ ಮುಖ್ಯ ಚುನಾವಣಾ ಆಯುಕ್ತರನ್ನು ಬಂಧಿಸಿ, ಅಕ್ರಮವಾಗಿ ನಡೆಸಲಾದ ಎಲ್ಲಾ ಚುನಾವಣೆಗಳನ್ನು ರದ್ದುಗೊಳಿಸಬೇಕು. ನಮ್ಮ ದೇಶದ ಸಂವಿಧಾನವು ಚುನಾವಣಾ ಆಯೋಗಕ್ಕೆ ನೀಡಿದ್ದ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಸ್ಪಷ್ಟ ಸಾಕ್ಷ್ಯಾಧಾರಗಳು ಲಭ್ಯವಿವೆ” ಎಂದು ಚಾಟಿ ಬಿದ್ದರು.

ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹರಿದುಬಿದ್ದ ಅವರು, “ನೀವು ‘ಚೀಫ್ ಎಲೆಕ್ಷನ್ ಕಮಿಷನರ್’ ಅಲ್ಲ, ಬದಲಾಗಿ ಕೇಂದ್ರ ಸರ್ಕಾರದ ‘ಚೀಫ್ ಸೆಲೆಕ್ಷನ್ ಕಮಿಷನರ್’ ತರಹ ವರ್ತಿಸುತ್ತಿದ್ದೀರಿ. ಜನಾಂಗೀಯ ಅನ್ಯಾಯಗಳು ಹೆಚ್ಚಾದಾಗ ಜನತೆ ಖಂಡಿತವಾಗಿ ದಂಗೆ ಏಳುತ್ತಾರೆ. ಕೇಂದ್ರ ಸರ್ಕಾರ ತಕ್ಷಣವೇ ವಿಶೇಷ ಅಧಿವೇಶನ ಕರೆದು ಈ ಅಕ್ರಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕು. ಅಧಿಕಾರದ ಮದ ಮತ್ತು ವ್ಯಾಮೋಹ ಶಾಶ್ವತವಲ್ಲ, ಹುಟ್ಟಿದ ಸೂರ್ಯ ಮುಳುಗಲೇಬೇಕು. ಈಗ ಜಾರಿಯಲ್ಲಿರುವ ಎಸ್‌ಐಆರ್ (SIR) ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಿ, ಮರುಪರಿಶೀಲನೆ ನಡೆಸಬೇಕು” ಎಂದು ಕಟ್ಟುನಿಟ್ಟಾಗಿ ಒತ್ತಾಯಿಸಿದರು.

ಮತದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆ: ದತ್ತಾಂಶ ತೆರೆದಿಟ್ಟ ಸಿಎಂ: ಕರ್ನಾಟಕದ ಜನಸಂಖ್ಯೆ ಮತ್ತು ಮತದಾರರ ಅಂಕಿಅಂಶಗಳನ್ನು ಮಾಧ್ಯಮಗಳು ಹಾಗೂ ಸಾರ್ವಜನಿಕರ ಮುಂದೆ ಬಿಚ್ಚಿಟ್ಟ ಶಿವಕುಮಾರ್, “ರಾಜ್ಯದ ಒಟ್ಟು ಜನಸಂಖ್ಯೆ ಸುಮಾರು ೭ ಕೋಟಿಯಷ್ಟಿದ್ದು, ಇದರಲ್ಲಿ ೫.೫೪ ಕೋಟಿ ನೋಂದಾಯಿತ ಮತದಾರರಿದ್ದರು. ಆದರೆ ಎಸ್‌ಐಆರ್ ಪ್ರಕ್ರಿಯೆಯ ನೆಪದಲ್ಲಿ ಈ ಸಂಖ್ಯೆಯನ್ನು ಬಲವಂತವಾಗಿ ೪.೪೬ ಕೋಟಿಗೆ ಇಳಿಸಲಾಗಿದೆ. ಅಂದರೆ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿಯಲಾಗಿದೆ. ಸುಮಾರು ೩೦ ರಿಂದ ೪೦ ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ. ಪ್ರಜಾಪ್ರಭುತ್ವ ನಮಗೆ ನೀಡಿದ ಅತಿದೊಡ್ಡ ಮೂಲಭೂತ ಹಕ್ಕು ಮತದಾನ, ಅದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ನಾವು ಬಿಡುವುದಿಲ್ಲ” ಎಂದರು.

ಉದಾಹರಣೆ ನೀಡಿದ ಅವರು, “ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ ಅವರು ಕೇವಲ ೩೧ ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ ಎಂದು ಆಯೋಗ ಹೇಳಿತ್ತು. ಆದರೆ ಈಗಿನ ಎಸ್‌ಐಆರ್ ಲೆಕ್ಕಾಚಾರದಲ್ಲಿ ಇಲ್ಲಿ ಸುಮಾರು ೧೨ ಲಕ್ಷ ಮತಗಳು ದಿಢೀರ್ ಮಾಯವಾಗಿವೆ. ಮಹದೇವಪುರ ಒಂದರಲ್ಲೇ ೩ ಲಕ್ಷ ಮತಗಳು ಕಾಣೆಯಾಗಿವೆ. ಈ ಅಕ್ರಮಗಳಿಗೆ ಬಿಜೆಪಿ ನಾಯಕರು ಸೂಕ್ತ ಉತ್ತರಿಸುತ್ತಾರೆಯೇ? ಬಿಜೆಪಿಯ ಈ ತರಹದ ದುಷ್ಟ ಕೃತ್ಯಗಳಿಂದ ಜನರಿಗೆ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯೇ ಹೊರಟುಹೋಗುತ್ತಿದೆ” ಎಂದು ವಿಷಾದಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಹಾಗೂ ಗ್ರಾಮಮಟ್ಟದ ಹೋರಾಟ: ಮುಂದಿನ ರಾಜಕೀಯ ನಡೆ ಪ್ರಕಟಿಸಿದ ಡಿಸಿಎಂ, ಬರುವ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದರು. ಈ ಚುನಾವಣೆಗಳಲ್ಲಿ ಇವಿಎಮ್ ಬದಲು ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ (Ballot Paper) ಬಳಸಲು ತೀರ್ಮಾನಿಸಲಾಗಿದೆ. ಮತದಾರರ ಹಕ್ಕು ರಕ್ಷಣೆಗಾಗಿ ಹಾಗೂ ಬಲಿಷ್ಠ ಚುನಾವಣಾ ವ್ಯವಸ್ಥೆ ಮರುಸ್ಥಾಪನೆಗಾಗಿ ಎಸ್‌ಐಆರ್ ವಿರೋಧಿ ಹೋರಾಟವನ್ನು ರಾಜ್ಯದ ಪ್ರತಿಯೊಂದು ಗ್ರಾಮ ಮಟ್ಟಕ್ಕೂ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿ, ಆಯೋಗದ ಒಳಗೆ ಆತ್ಮಸಾಕ್ಷಿಯಿಂದ ಕೆಲಸ ಮಾಡುವ ಕೆಲವರು ಆಯುಕ್ತರ ತೀರ್ಮಾನದ ವಿರುದ್ಧ ಧ್ವನಿ ಎತ್ತುತ್ತಿರುವುದು ಅಕ್ರಮಗಳಿಗೆ ಸಾಕ್ಷಿಯಾಗಿದೆ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಪ್ರತಿ ಬೂತ್ ಮಟ್ಟದ ಬಿಎಲ್‌ಎ-೨ (BLA-೨) ಕಾರ್ಯಕರ್ತರು ಈ ಮತಗಳ್ಳತನದ ವಿರುದ್ಧ ಕ್ರಾಂತಿಕಾರಿ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಮೈಸೂರು ದಸರಾ 2026: ಆನೆಗಳ ಸುರಕ್ಷತೆಗೆ ಆದ್ಯತೆ, ಮರದ ಅಂಬಾರಿ ತಾಲೀಮು ಮುಂದೂಡಿಕೆ!

Leave a Reply

Your email address will not be published. Required fields are marked *