ಇರಾನ್: ಇಲ್ಲಿನ ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರ ನಡೆದ 10 ಕಿಲೋಮೀಟರ್ (Iran) ಓಟದ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಹಿಜಾಬ್ ಅಥವಾ ಶಿರವಸ್ತ್ರ ಧರಿಸದೆ ಪಾಲ್ಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ತೀವ್ರ ಗಮನ ಸೆಳೆದಿದ್ದಾರೆ. ಟೆಹ್ರಾನ್‌ನ ವೆಲಾಯತ್ ಬ್ಲಾಕ್‌ನಲ್ಲಿ ನಡೆದ ‘ಟೆಹ್ರಾನ್ ೧೦-ಕೆ’ ಓಟದ ಸ್ಪರ್ಧೆಯಲ್ಲಿ ಹಲವು ಮಹಿಳೆಯರು ತಮ್ಮ ತಲೆಗೂದಲನ್ನು ಮುಚ್ಚಿಕೊಳ್ಳದೆ ಮುಕ್ತವಾಗಿ ಓಡುತ್ತಿರುವ ದೃಶ್ಯಗಳು ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ನಿಯಮಗಳು ಇಂದಿಗೂ ಜಾರಿಯಲ್ಲಿದ್ದಾಗ್ಯೂ, ಮಹಿಳೆಯರು ಬಹಿರಂಗವಾಗಿ ನಿಯಮ ಮೀರಿ ಭಾಗವಹಿಸಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸಂಘಟಕರು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಓಟದ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮಹಿಳೆಯರ ವಿಭಾಗದಲ್ಲಿ ಎರಡು ಲ್ಯಾಪ್‌ಗಳ ೧೦ ಕಿಲೋಮೀಟರ್ ಕೋರ್ಸ್ ಸೇರಿತ್ತು.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸಾಮಾಜಿಕ ಹಾಗೂ ರಾಜಕೀಯವಾಗಿ ಈ ಓಟದ ಸ್ಪರ್ಧೆಯು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ೨೦೨೨ ರಲ್ಲಿ ಶಿರವಸ್ತ್ರವನ್ನು ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಮೊರಾಲಿಟಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಹ್ಸಾ ‘ಜಿನಾ’ ಅಮಿನ್ ಅವರ ಸಾವಿನ ನಂತರ ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಅಂದಿನಿಂದ ಅನೇಕ ಇರಾನಿ ಮಹಿಳೆಯರು ಬಹಿರಂಗವಾಗಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರಿ ಯಂತ್ರದ ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ. ಇತ್ತೀಚೆಗೆ ಕಿಶ್ ದ್ವೀಪದಲ್ಲಿ ನಡೆದ ಮಹಿಳಾ ರೋಡ್ ರೇಸ್‌ನಲ್ಲೂ ಸ್ಪರ್ಧಿಗಳು ಹಿಜಾಬ್ ಇಲ್ಲದೆ ಭಾಗವಹಿಸಿ ಸುದ್ದಿಯಾಗಿದ್ದರು, ಈಗ ಟೆಹ್ರಾನ್ ರೇಸ್ ಅದನ್ನು ಮತ್ತೆ ನೆನಪಿಸಿದೆ.
ವಿಶೇಷವೆಂದರೆ, ಈ ಓಟದ ಸ್ಪರ್ಧೆ ನಡೆದ ದಿನವೇ ಟೆಹ್ರಾನ್‌ನ ಮತ್ತೊಂದೆಡೆ ಸರ್ಕಾರಿ ಪ್ರಾಯೋಜಿತ ಬೃಹತ್ ‘ಜನ್‌ಫದಾ-ಯೇ ಇರಾನ್’ ರ‍್ಯಾಲಿ ಕೂಡ ಆಯೋಜನೆಗೊಂಡಿತ್ತು. ಫೆಬ್ರವರಿಯಲ್ಲಿ ಯುಎಸ್-ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ರಾಜಧಾನಿಯಲ್ಲಿ ನಡೆದ ಅತ್ಯಂತ ದೊಡ್ಡ ರ‍್ಯಾಲಿ ಇದಾಗಿದ್ದು, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಟಾಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಇಮಾಮ್ ಹುಸೇನ್ ಚೌಕದಿಂದ ಇಂಗೆಲಾಬ್ ಚೌಕದವರೆಗೆ ಬೃಹತ್ ಪರೇಡ್ ನಡೆದಿದ್ದು, ದೇಶಾದ್ಯಂತ ಏಕಕಾಲದಲ್ಲಿ ಇಂತಹ ಸಭೆಗಳು ಜರುಗಿದ್ದವು.
ಏನೆಲ್ಲಾ ನಡೆಯಿತು ಈ ಕಾರ್ಯಕ್ರಮದಲ್ಲಿ?
ಈ ರ‍್ಯಾಲಿಯಲ್ಲಿ ಇರಾನ್‌ನ ಸುಧಾರಿತ ಡ್ರೋನ್‌ಗಳ ಪ್ರದರ್ಶನ, ಯುದ್ಧದ ಹಿರಿಯ ಯೋಧರ ಪಥಸಂಚಲನ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧವೆಂಬ ಸಂಕೇತವಾಗಿ ಮರಣ ವಸ್ತ್ರ ಧರಿಸಿದ ಜನರ ಮೆರವಣಿಗೆಯನ್ನು ಕಾಣಬಹುದಾಗಿತ್ತು. ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಮಹಿಳೆಯರು ಕೈಯಲ್ಲಿ ರೈಫಲ್‌ಗಳನ್ನು ಹಿಡಿದು ಸಾಗಿದರು. ಈ ಬೃಹತ್ ಜಾಗೃತಿ ಅಭಿಯಾನದಲ್ಲಿ ಜನಸಾಮಾನ್ಯರು ಮತ್ತು ವಿವಿಧ ವರ್ಗಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಝೆಶ್ಕಿಯನ್ ಮುಕ್ತಕಂಠದಿಂದ ಶ್ಲಾಘಿಸಿದ್ದು, ಇದು ದೇಶದ ಘನತೆ, ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಶಕ್ತಿಯನ್ನು ಎತ್ತಿಹಿಡಿಯುವ ಸಾಮೂಹಿಕ ಸಂಕಲ್ಪ ಎಂದು ಬಣ್ಣಿಸಿದ್ದಾರೆ. ಹಿಜಾಬ್ ನಿಷೇಧದ ಪ್ರತಿಭಟನಾ ರೂಪದ ಓಟ ಮತ್ತು ಸರ್ಕಾರದ ಬೃಹತ್ ಮಿಲಿಟರಿ ಶಕ್ತಿ ಪ್ರದರ್ಶನ ಒಂದೇ ದಿನ ನಡೆದಿರುವುದು ಇರಾನ್‌ನ ಇಂದಿನ ವೈರುಧ್ಯಮಯ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ: 16 ಸಾವು!
