ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ತಮ್ಮ ನಿವಾಸದಲ್ಲಿ ನಡೆದ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಚಿತ್ರಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ. ಪ್ರಸ್ತುತ ವಿದೇಶದಲ್ಲಿದ್ದು ಹಬ್ಬಕ್ಕೆ ಮನೆಗೆ ಬರಲಾಗದ ಕಾರಣ ತಮ್ಮ ಕುಟುಂಬಸ್ಥರು ಪ್ರತಿಷ್ಠಾಪಿಸಿದ್ದ ಗಣಪತಿಯ ಪೂಜಾ ಕ್ಷಣಗಳನ್ನು ಅವರು ಹಂಚಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
ಲಂಡನ್ನಲ್ಲಿ ಹಬ್ಬ ಆಚರಿಸಿದ ನಟಿ
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿರುವ ತ್ರಿಶಾ, ಹಬ್ಬದ ಸಂಭ್ರಮದ ವಾತಾವರಣ, ಪೂಜಾ ಅಲಂಕಾರ ಮತ್ತು ಗಣೇಶ ಮೂರ್ತಿಯ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ನಿಮಿತ್ತ ಮನೆಯಿಂದ ದೂರವಿರುವ ಅವರು, “ಇಂದು ನನ್ನ ಮನೆ ಹಾಗೂ ಕುಟುಂಬದವರನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಹಬ್ಬದ ದಿನದಂದು ಮನೆಯಲ್ಲಿ ಇರಲಾಗದಿರುವುದಕ್ಕೆ ಅವರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಇನ್ನು ನಟಿ ಹಂಚಿಕೊಂಡಿರುವ ಈ ಗಣೇಶೋತ್ಸವದ ಫೋಟೋಗಳಲ್ಲಿ ಅಭಿಮಾನಿಗಳ ಕಣ್ಣು ಒಂದು ವಿಶೇಷ ವಿಚಾರದ ಮೇಲೆ ಬಿದ್ದಿದೆ. ಗಣಪತಿಯ ಪೂಜಾ ಸಿದ್ಧತೆಯ ನಡುವೆ, ಹಿನ್ನೆಲೆಯಲ್ಲಿ ಮದರ್ ಮೇರಿ ಅಥವಾ ಅನ್ನೈ ವೇಲಾಂಕಣ್ಣಿಯ ಚಿತ್ರವಿರುವುದನ್ನು ಜಾಗರೂಕತೆಯಿಂದ ಗಮನಿಸಿರುವ ಕೆಲ ನೆಟ್ಟಿಗರು, ಅದರ ಸ್ಕ್ರೀನ್ಶಾಟ್ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
ಕುತೂಹಲ ಸೃಷ್ಟಿ ಮಾಡಿದ ಈ ಫೋಟೋ
ಅಭಿಮಾನಿಯೊಬ್ಬರು ಈ ಫೋಟೋವನ್ನು ಮರುಹಂಚಿಕೊಂಡು, “ತ್ರಿಶಾ ಅವರ ಗಣಪತಿ ಪೂಜೆಯ ಫೋಟೋದಲ್ಲಿ ಮದರ್ ಮೇರಿ ಅಥವಾ ಅನ್ನೈ ವೇಲಾಂಕಣ್ಣಿ ಇರುವುದನ್ನು ಎಷ್ಟು ಜನ ಗಮನಿಸಿದ್ದೀರಿ? ಇದೆಲ್ಲವೂ ಸಿಎಂ ಜೋಸೆಫ್ ವಿಜಯ್ ಅವರ ಪ್ರಭಾವ ಇರಬಹುದು” ಎಂದು ಕಮೆಂಟ್ ಮಾಡುವ ಮೂಲಕ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ. ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಈ ಚಿತ್ರವೂ ಕಾಣಿಸಿಕೊಂಡಿರುವುದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ತ್ರಿಶಾ ಪ್ರಸ್ತುತ ತಮ್ಮ ಮುಂಬರುವ ಪ್ರಮುಖ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಲಂಡನ್ನಲ್ಲಿದ್ದಾರೆ. ಲಂಡನ್ ಶೂಟಿಂಗ್ ಹಂತದಲ್ಲಿದ್ದರೂ ತಮ್ಮ ಮನೆಯ ಹಬ್ಬದ ವಾತಾವರಣವನ್ನು ಸೋಷಿಯಲ್ ಮೀಡಿಯಾ ಮೂಲಕ ನೆನಪಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟ ಅಜಿತ್ ಕುಮಾರ್ ಭಾಗವಹಿಸಿದ್ದ ಸಿಲ್ವರ್ಸ್ಟೋನ್ ರೇಸ್ ಕಾರ್ಯಕ್ರಮದಲ್ಲೂ ತ್ರಿಶಾ ಕಾಣಿಸಿಕೊಂಡಿದ್ದರು. ಇದೀಗ ಲಂಡನ್ನಿಂದಲೇ ಅವರು ಹಂಚಿಕೊಂಡಿರುವ ಈ ಗಣೇಶೋತ್ಸವದ ಫೋಟೋಗಳು ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿವೆ.
ಇದನ್ನೂ ಓದಿ: ದಳಪತಿ ವಿಜಯ್ಗೆ ಪರೋಕ್ಷ ಟಾಂಗ್? ವಿಜಯ್ ಸೇತುಪತಿ ಕಾಮೆಂಟ್ಗೆ ರಾಜಕೀಯ ಬಣ್ಣ
