ನವ ದೆಹಲಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ (Rajpal Yadav) ಅವರಿಗೆ ಉನ್ನತ ನ್ಯಾಯಾಲಯದಿಂದ ಕೊನೆಯ ಅವಕಾಶ ಸಿಕ್ಕಿದೆ. ಖಾಸಗಿ ದೂರುದಾರರೊಬ್ಬರು ಹೂಡಿರುವ ಚೆಕ್ ಬೌನ್ಸ್ ಪ್ರಕರಣದಲ್ಲಿ ಕನಿಷ್ಠ 2 ಕೋಟಿ ರೂಪಾಯಿಗಳನ್ನು ಎರಡು ವಾರಗಳ ಒಳಗಾಗಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟ ನಿರ್ದೇಶನ ನೀಡಿದೆ. ಈ ಮೂಲಕ ನಟ ರಾಜ್‌ಪಾಲ್ ಯಾದವ್ ಅವರಿಗೆ ಎದುರಾಗಿದ್ದ ತಕ್ಷಣದ ಬಂಧನ ಭೀತಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಏನಿದು ರಾಜ್‌ಪಾಲ್ ಯಾದವ್ ಪ್ರಕರಣ?
ಮುರಳಿ ಪ್ರೊಡಕ್ಷನ್ಸ್ ಮಾಲೀಕರಿಗೆ ನಟ ರಾಜ್‌ಪಾಲ್ ಯಾದವ್ ಅವರು ಸುಮಾರು 5 ಕೋಟಿ ರೂಪಾಯಿ ಹಣವನ್ನು ಬಾಕಿ ನೀಡಬೇಕಿದೆ ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು, ನಟನ ಹಿಂದಿನ ನಡವಳಿಕೆ ಹಾಗೂ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, “ಅವರ ಹಿಂದಿನ ನಡೆಗಳನ್ನು ನೋಡಿದರೆ ಅವರನ್ನು ಹೇಗೆ ತಾನೆ ನಂಬಲು ಸಾಧ್ಯ? ಅವರು ಬಾಲಿವುಡ್ ಸಿನಿಮಾಗಳಲ್ಲಿ ಡ್ರಾಮಾ ಮತ್ತು ನಟನೆ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ, ಆದರೆ ಅದೇ ಕೆಲಸವನ್ನು ನ್ಯಾಯಾಲಯದ ಅಂಗಳದಲ್ಲೂ ಮುಂದುವರಿಸುತ್ತಿದ್ದಾರೆ” ಎಂದು ಖಾರವಾಗಿ ಟೀಕಿಸಿತು.
ನ್ಯಾಯಾಲಯದ ಕಠಿಣ ನಿಲುವಿನ ಹೊರತಾಗಿಯೂ, ರಾಜ್‌ಪಾಲ್ ಯಾದವ್ ಪರ ವಕೀಲರು ಕೋರ್ಟ್‌ಗೆ ವಿಶೇಷ ಮನವಿ ಸಲ್ಲಿಸಿದರು. ನಟ ಯಾದವ್ ಅವರು ನೀಡಲಾದ ಗಡುವಿನೊಳಗೆ ಕನಿಷ್ಠ 2 ಕೋಟಿ ರೂಪಾಯಿಗಳನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಜಮಾ ಮಾಡಲಿದ್ದಾರೆ ಮತ್ತು ಉಳಿದ ಬಾಕಿ ಮೊತ್ತಕ್ಕೆ ಸೂಕ್ತ ಜಾಮೀನು ಅಥವಾ ಭದ್ರತೆಯನ್ನು ಒದಗಿಸಲಿದ್ದಾರೆ ಎಂದು ವಕೀಲರು ಪೀಠಕ್ಕೆ ಭರವಸೆ ನೀಡಿದರು. ವಕೀಲರ ಈ ವಾದ ಹಾಗೂ ಭರವಸೆಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಅಂತಿಮ ಅವಕಾಶವಾಗಿ ಎರಡು ವಾರಗಳ ಕಾಲಾವಕಾಶ ನೀಡಲು ಒಪ್ಪಿಕೊಂಡಿತು.
ಬಂಧನ ರಕ್ಷಣೆ ಆದೇಶ ವಿಸ್ತರಣೆ
ಇದರ ಜೊತೆಗೆ, ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್ 5 ರವರೆಗೆ ರಾಜ್‌ಪಾಲ್ ಯಾದವ್ ಅವರಿಗೆ ನೀಡಲಾಗಿದ್ದ ಬಂಧನದಿಂದ ರಕ್ಷಣೆಯನ್ನು ಉನ್ನತ ನ್ಯಾಯಾಲಯವು ವಿಸ್ತರಿಸಿದೆ. ಆದರೆ, ಈ ರಕ್ಷಣೆಗೆ ಪ್ರತಿಯಾಗಿ ನಟ ಯಾದವ್ ಅವರು ತಕ್ಷಣವೇ ತಮ್ಮ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಶರತ್ತು ವಿಧಿಸಿದೆ. ನಿಗದಿತ ಸಮಯದೊಳಗೆ ಕೋರ್ಟ್‌ಗೆ ಹಣ ಜಮಾ ಮಾಡದಿದ್ದಲ್ಲಿ ನಟನಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಸೆಪ್ಟೆಂಬರ್ 18ಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಫೈಟ್: ಒಂದೇ ದಿನ 4 ಕನ್ನಡ ಸಿನಿಮಾಗಳು ತೆರೆಗೆ!
