ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರ ಮತದಾರರ ದಾಖಲೆಗೆ ಸಂಬಂಧಿಸಿದಂತೆ ಹಬ್ಬಿರುವ ತಪ್ಪು ಮಾಹಿತಿಗೆ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಪ್ರತಿಷ್ಠಿತ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಹೆಸರಿನ ವ್ಯತ್ಯಾಸದ ಕಾರಣಕ್ಕೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ ಎಂದು ವರದಿ ಪ್ರಕಟವಾಗಿತ್ತು. ಆದರೆ ಈ ವರದಿಯು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಪ್ರೊ. ಸಿ.ಎನ್.ಆರ್. ರಾವ್ ಅವರು ಪ್ರಸ್ತುತ ಕರಡು ಮತದಾರರ ಪಟ್ಟಿಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ 59ನೇ ಭಾಗದಲ್ಲಿ ಅಧಿಕೃತ ಮತದಾರರಾಗಿದ್ದಾರೆ ಎಂದು ತಿಳಿಸಲಾಗಿದೆ.
ಏನಿದು ಪ್ರಕರಣ?
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಅಭಿಯಾನದ ಭಾಗವಾಗಿ, ರಾಜ್ಯ ಸ್ವೀಪ್ ನೋಡೆಲ್ ಅಧಿಕಾರಿ, ಬೆಂಗಳೂರು ಪಶ್ಚಿಮ ವಲಯದ ಆಯುಕ್ತರು, ಮಲ್ಲೇಶ್ವರಂ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ ಹಾಗೂ 59ನೇ ಭಾಗದ ಮತದಾರರ ನೋಂದಣಿ ಅಧಿಕಾರಿಯವರು (ಬಿಎಲ್ಒ) ಸ್ವತಃ ಪ್ರೊ. ಸಿ.ಎನ್.ಆರ್. ರಾವ್ ಅವರ ನಿವಾಸಕ್ಕೆ ತೆರಳಿ ಗೌರವಪೂರ್ವಕವಾಗಿ ಗಣತಿ ನಮೂನೆಯನ್ನು ಹಸ್ತಾಂತರಿಸಿದ್ದರು. ಈ ಪರಿಶೀಲನೆಯ ವೇಳೆ ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ‘ಪ್ರೊಫ್ ಸಿ.ಎನ್.ಆರ್. ರಾವ್’ ಎಂದಿದ್ದು, 2002ರ ಹಳೆಯ ಮತದಾರರ ಪಟ್ಟಿಯಲ್ಲಿ ‘ರಾಮ ಎಸ್/ಒ ಎಚ್. ನಾಗೇಶ್’ ಎಂದು ಹೆಸರಿನಲ್ಲಿ ವ್ಯತ್ಯಾಸವಿರುವುದು ಕಂಡುಬಂದಿತ್ತು.
📢 Clarification on Voter Record of Bharat Ratna Awardee Prof. C.N.R. Rao
— Greater Bengaluru Authority (@GBA_office) September 9, 2026
Respected Bharat Ratna awardee Prof. C.N.R. Rao is a voter in Part No. 59 of the 157-Malleswaram Assembly Constituency, as per the current draft electoral roll.
During the SIR process, the enumeration… pic.twitter.com/OKC1vdaz1C
ನೋಟೀಸ್ ಜಾರಿ ಮಾಡಿಲ್ಲ ಎಂದ ಜಿಬಿಎ
ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರ ಮಹಾನ್ ಕೊಡುಗೆ ಹಾಗೂ ಅವರ ಅತಿಥ್ಯದ ಗೌರವವನ್ನು ಪರಿಗಣಿಸಿ, ಅವರಿಗೆ ಅಥವಾ ಅವರ ಕುಟುಂಬದ ಯಾರಿಗೂ ಯಾವುದೇ ರೀತಿಯ ನೋಟಿಸ್ ಜಾರಿ ಮಾಡಿಲ್ಲ ಎಂದು ಜಿಬಿಎ ಸ್ಪಷ್ಟಪಡಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಿಎಲ್ಒ ಅವರು, ಈ ದಾಖಲೆಯನ್ನು ಅಂತಿಮ ಅನುಮೋದನೆಗಾಗಿ ನೇಮಕಗೊಂಡಿರುವ ಹೆಚ್ಚುವರಿ ಚುನಾವಣಾ ನೋಂದಣಾಧಿಕಾರಿಗೆ (ಎಇಆರ್ಒ) ಶಿಫಾರಸು ಮಾಡಿದ್ದರು. ಅದರಂತೆ, ಸೆಪ್ಟೆಂಬರ್ 8, 2026ರಂದೇ ಎಇಆರ್ಒ ಅವರು ಅಂತಿಮ ಮತದಾರರ ಪಟ್ಟಿಯಲ್ಲಿ ಈ ಹೆಸರನ್ನು ಸೇರ್ಪಡೆಗೊಳಿಸಲು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ.
ಈ ಎಲ್ಲಾ ಸ್ಪಷ್ಟ ಸಂಗತಿಗಳು ಕಣ್ಣೆದುರೇ ಇದ್ದರೂ ಸಹ, ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯು ಸತ್ಯಕ್ಕೆ ದೂರವಾಗಿದೆ ಎಂದು ಜಿಬಿಎ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಮಲ್ಲೇಶ್ವರಂ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿಯವರ ಅಧಿಕೃತ ಹೇಳಿಕೆ ಹಾಗೂ 59ನೇ ಭಾಗದ ಬಿಎಲ್ಒ ಅವರ ವಿಡಿಯೋ ಸಂದರ್ಶನವನ್ನು ಸತ್ಯಾಸತ್ಯತೆ ತಿಳಿಯಲು ಲಭ್ಯವಿಡಲಾಗಿದೆ. ತಾಂತ್ರಿಕ ಪ್ರಕ್ರಿಯೆಯನ್ನು ಸೌಹಾರ್ದಯುತವಾಗಿ ಹಾಗೂ ಗೌರವಯುತವಾಗಿ ಬಗೆಹರಿಸಲಾಗಿದ್ದರೂ, ನೋಟಿಸ್ ನೀಡಲಾಗಿದೆ ಎಂದು ಬಿಂಬಿಸಿರುವುದು ಸರಿಯಲ್ಲ ಎಂದು ಪ್ರಾಧಿಕಾರ ಮತ್ತೊಮ್ಮೆ ಖಚಿತಪಡಿಸಿದೆ.
ಇದನ್ನೂ ಓದಿ: ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್?
