ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ (CNR Rao) ಅವರಿಗೆ ಚುನಾವಣಾ ಆಯೋಗದಿಂದ ಆಘಾತಕಾರಿ ನೋಟಿಸ್ (SIR) ಜಾರಿಯಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಲ್ಲಿ ಹೆಸರಿನಲ್ಲಿದ್ದ ಸಣ್ಣ ಕಾಗುಣಿತ ದೋಷ ಅಥವಾ ‘ಸ್ವಯಂ-ಹೆಸರು ವ್ಯತ್ಯಾಸ’ದ ಕಾರಣಕ್ಕಾಗಿ ಈ ನೋಟಿಸ್ ನೀಡಲಾಗಿದೆ. ಹಳೆಯ ಮತದಾರರ ಪಟ್ಟಿಯಲ್ಲಿ ಇವರ ಹೆಸರು ‘ಪ್ರೊ. ಸಿ.ಎನ್.ಆರ್. ರಾವ್’ ಎಂದು ನಮೂದಾಗಿದ್ದರೆ, ಪ್ರಸ್ತುತ ಪಟ್ಟಿಯಲ್ಲಿ ಹೆಚ್ಚುವರಿ ‘ಎಫ್’ ಅಕ್ಷರ ಸೇರಿಕೊಂಡು ‘ಪ್ರೊಫ್ ಸಿ.ಎನ್.ಆರ್. ರಾವ್’ ಎಂದು ತಪ್ಪಾಗಿ ಮುದ್ರಿತಗೊಂಡಿದೆ. ಈ ಕಾಗುಣಿತ ದೋಷವೇ ಈಗ ನೋಟಿಸ್ಗೆ ಕಾರಣವಾಗಿದೆ.
ಯಾವುದೇ ನೋಟೀಸ್ ಸಿಕ್ಕಿಲ್ಲ ಎಂದ ರಾವ್ ಕಚೇರಿ
ಆದಾಗ್ಯೂ, ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರೊ. ಸಿ.ಎನ್.ಆರ್. ರಾವ್ ಅವರ ಕಾರ್ಯಾಲಯದ ಪ್ರತಿನಿಧಿಯೊಬ್ಬರು, ತಮಗೆ ಇದುವರೆಗೆ ಯಾವುದೇ ಅಧಿಕೃತ ಭೌತಿಕ ನೋಟಿಸ್ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಕಚೇರಿಯ ದಾಖಲೆಗಳು ಮತ್ತು ಇಮೇಲ್ ಪರಿಶೀಲಿಸಿದಾಗ ಯಾವುದೇ ನೋಟಿಸ್ ಬಂದಿಲ್ಲ. ಬಹುಶಃ ಇದು ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿರಬಹುದು. ಆದರೆ ನಮಗೆ ಯಾವುದೇ ನೇರ ಪತ್ರ ತಲುಪಿಲ್ಲ ಎಂದು ಅವರು ತಿಳಿಸಿದ್ದಾರೆ. ಹೆಸರಿನಲ್ಲಿರುವ ಆ ಹೆಚ್ಚುವರಿ ‘ಎಫ್’ ಅಕ್ಷರದ ವ್ಯತ್ಯಾಸವನ್ನು ಹೊರತುಪಡಿಸಿ ಬೇರೆ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಈ ಸಣ್ಣ ದೋಷವನ್ನು ಸರಿಪಡಿಸಿಕೊಳ್ಳಲು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಹತ್ತಿರವಿರುವ ಕಚೇರಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಹರೇಕಳ ಹಾಜಬ್ಬ ಅವರಿಗೂ ನೋಟೀಸ್ ಜಾರಿ
ಮತದಾರರ ಪಟ್ಟಿ ಪರಿಷ್ಕರಣೆಯ ಈ ವಿಶೇಷ ಅಭಿಯಾನದ ವೇಳೆ ಕೇವಲ ಸಾಮಾನ್ಯ ಜನSಮಾನ್ಯರಷ್ಟೇ ಅಲ್ಲದೆ, ರಾಜ್ಯದ ಹಲವಾರು ಗಣ್ಯರಿಗೂ ಇಂತಹ ನೋಟಿಸ್ಗಳು ಬಂದಿರುವುದು ವರದಿಯಾಗಿದೆ. ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ವಿಜೇತ, ಮಂಗಳೂರಿನ ಹಸಿರು ಹೋರಾಟಗಾರ ಹಾಗೂ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ ಅವರಿಗೂ ಇದೇ ರೀತಿಯ ಹೆಸರಿನ ವ್ಯತ್ಯಾಸದ ಕಾರಣಕ್ಕೆ ನೋಟಿಸ್ ಜಾರಿಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಂತರ ಚುನಾವಣಾ ಆಧಿಕಾರಿಗಳು ಸ್ಪಷ್ಟನೆ ನೀಡಿ ಆ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಯವರ ಕಚೇರಿಯ ಮಾಹಿತಿಯ ಪ್ರಕಾರ, ಈ ವಿಶೇಷ ಪರಿಷ್ಕರಣಾ ಅಭಿಯಾನದಲ್ಲಿ ಇದುವರೆಗೆ ಒಟ್ಟು 43.81 ಲಕ್ಷಕ್ಕೂ ಅಧಿಕ ನೋಟಿಸ್ಗಳನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ 7.31 ಲಕ್ಷ ನೋಟಿಸ್ಗಳನ್ನು ಮತದಾರರಿಗೆ ತಲುಪಿಸಲಾಗಿದೆ. ಸೆಪ್ಟೆಂಬರ್ 4ರ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 4,46,38,124 ಮತದಾರರಿದ್ದು, ಇದರಲ್ಲಿ ಅಮಾಪಿಂಗ್ ಮತ್ತು ವಿವಿಧ ಸಂಗತಿಗಳ ದೋಷವಿರುವವರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಪತಾಕೆ ಹಾರಿಸಿರುವ, 1,600ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿರುವ 90ರ ಹರೆಯದ ಮೇರು ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಾಂತ್ರಿಕ ದೋಷದಿಂದ ನೋಟಿಸ್ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ಮುಪ್ಪಾನೆ ಲಾಂಚ್ ಸೇವೆ ಸಂಪೂರ್ಣ ಬಂದ್: ಹೊಸ ಲಾಂಚ್ ಆರಂಭಿಸುವಂತೆ ಆಗ್ರಹ!
