TOP NEWS

Sagara: ಮುಪ್ಪಾನೆ ಲಾಂಚ್ ಸೇವೆ ಸಂಪೂರ್ಣ ಬಂದ್: ಹೊಸ ಲಾಂಚ್ ಆರಂಭಿಸುವಂತೆ ಆಗ್ರಹ!

Sagara Muppane Launch Service Completely Suspended Public Urges MLA to Intervene Immediately and Restore Water Transport

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಿಗಂದೂರು ಹಾಗೂ ವಡನ್‌ಬೈಲು ನಡುವಿನ ಸಾರಿಗೆ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಮುಪ್ಪಾನೆ ಲಾಂಚ್ ಸೇವೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಈ ಭಾಗದ ಸಾರ್ವಜನಿಕರು ಮತ್ತು ಪ್ರವಾಸಿಗರು ತೀವ್ರ ಪರದಾಡುವಂತಾಗಿದೆ. ಲಾಂಚ್ ಸೇವೆ (Sagara) ನಿಂತುಹೋಗಿರುವುದರಿಂದ ದ್ವೀಪ ಹಾಗೂ ನದಿ ತೀರದ ಗ್ರಾಮಗಳ ಜನರ ದೈನಂದಿನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಸ್ಥಳೀಯರು ತಕ್ಷಣವೇ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.

ಹೊಳೆಬಾಗಿಲು ಲಾಂಚ್‌ ಬಳಕೆಗೆ ಆಗ್ರಹ

ಪ್ರಸ್ತುತ ಹೊಳೆಬಾಗಿಲಿನಲ್ಲಿ ಲಾಂಚ್ ಸೇವೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಅದೇ ಲಾಂಚ್ ಅನ್ನು ಮುಪ್ಪಾನೆ-ಹೆಸಿಗೆ ಮಾರ್ಗಕ್ಕೆ ತಕ್ಷಣವೇ ಬಿಡಬೇಕು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಮನವಿ ಮಾಡಿದ್ದಾರೆ. ಮಡೇನೂರು ಮುಖಾಂತರ ಲಾಂಚ್ ಅನ್ನು ಈ ಮಾರ್ಗಕ್ಕೆ ಸ್ಥಳಾಂತರಿಸಿ ಸಂಚಾರ ಆರಂಭಿಸಲು ಇದುವೇ ಸರಿಯಾದ ಸಮಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾನ್ಯ ಶಾಸಕರು ಕೂಡಲೇ ಗಮನಹರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಅಪಾಯ ಉಂಟಾಗುವ ಭೀತಿಯಲ್ಲಿ ಲಾಂಚ್

ಈ ಜಲಮಾರ್ಗವಾಗಿ ಜೋಗ ಜಲಪಾತ ಹಾಗೂ ವಡನಬೈಲ್ ಕಡೆಗೆ ಸಂಚರಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲಂತೂ ನೂರಾರು ಮಂದಿ ಪ್ರವಾಸಿಗರು ಈ ಭಾಗಕ್ಕೆ ಭೇಟಿ ನೀಡುತ್ತಾರೆ. ಆದರೆ, ಈಗಿರುವ ಹಳೆಯ ಲಾಂಚ್ ಸಾಕಷ್ಟು ಹಾಳಾಗಿದ್ದು, ಯಾವುದೇ ಸಮಯದಲ್ಲಿ ದೊಡ್ಡ ಅಪಾಯ ಸಂಭವಿಸುವ ಆತಂಕವಿದೆ. ಹೀಗಾಗಿ, ಪ್ರವಾಸಿಗರ ಸುರಕ್ಷತೆ ಹಾಗೂ ಜನರ ಅನುಕೂಲಕ್ಕಾಗಿ ಈಗಿರುವ ಹಳೆಯ ಲಾಂಚ್ ಬದಲಿಗೆ ಸುಸಜ್ಜಿತವಾದ ದೊಡ್ಡ ಲಾಂಚ್ ಸೇವೆಯನ್ನು ನಮ್ಮ ಭಾಗಕ್ಕೆ ಒದಗಿಸಬೇಕು ಎಂದು ಸಾರ್ವಜನಿಕರು ಬಲವಾಗಿ ಒತ್ತಾಯಿಸಿದ್ದಾರೆ.

ವರದಿ: ಪ್ರಶಾಂತ್‌ ಭಟ್

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಹೆಚ್ಚಿದ ಸಂಕಷ್ಟ; ಮೊಬೈಲ್ ಬಳಕೆ ಪ್ರಕರಣದಲ್ಲಿ ಎರಡು ದಿನ ಪೊಲೀಸ್ ಕಸ್ಟಡಿಗೆ ಆದೇಶ!

Leave a Reply

Your email address will not be published. Required fields are marked *