ಮುಂಬೈ: ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಅಮೀಷಾ ಪಟೇಲ್ (Ameesha Patel) ಹಾಗೂ ಭಾರತೀಯ ಕ್ರಿಕೆಟ್ ತಂಡದ ತಾರೆ ಹಾರ್ದಿಕ್ ಪಾಂಡ್ಯ ನಡುವೆ ಪ್ರೇಮಾಂಕುರವಾಗಿದೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಈ ಇಬ್ಬರೂ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡ ವಿಡಿಯೋವೊಂದನ್ನು ಇಟ್ಟುಕೊಂಡು ಹಲವರು ಹೊಸ ಕಥೆಗಳನ್ನು ಹೆಣೆಯಲು ಶುರು ಮಾಡಿದ್ದರು. ಆದರೆ ತಮ್ಮ ಮತ್ತು ಹಾರ್ದಿಕ್ ನಡುವಿನ ಸಾಮಾನ್ಯ ಬಾಂಧವ್ಯಕ್ಕೆ ಶೃಂಗಾರ ಹಾಗೂ ಪ್ರೇಮದ ಬಣ್ಣ ಬಳೆಯಲು ಯತ್ನಿಸಿದ ಜಾಲತಾಣ ಬಳಕೆದಾರನೊಬ್ಬನಿಗೆ ನಟಿ ಅಮೀಷಾ ಪಟೇಲ್ ತಮ್ಮದೇ ಶೈಲಿಯಲ್ಲಿ ಸಾರಾಸಗಟಾಗಿ ಚಾಟಿ ಬೀಸಿದ್ದಾರೆ.
ಏನಿದು ವೈರಲ್ ಲವ್ ಕಹಾನಿ?
ಮುಂಬೈನ ಪ್ರಸಿದ್ಧ ‘ತಾಜ್ ಮಹಲ್ ಪ್ಯಾಲೇಸ್’ ಹೋಟೆಲ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟಿ ಅಮೀಷಾ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಒಟ್ಟಿಗೆ ಭಾಗವಹಿಸಿದ್ದರು. ಈ ವೇಳೆ ಅಮೀಷಾ ಅವರು ಹಾರ್ದಿಕ್ ಅವರನ್ನು ತಮ್ಮ ಆತ್ಮೀಯ ಸ್ನೇಹಿತರಿಗೆ ಪರಿಚಯಿಸುತ್ತಿದ್ದರು. ಸಂಭಾಷಣೆಯ ಮಧ್ಯೆ ಅಮೀಷಾ ಅವರು ಹಾರ್ದಿಕ್ ಹೆಗಲ ಮೇಲೆ ಅತ್ಯಂತ ಸಹಜವಾಗಿ ಕೈಹಾಕಿ ಮಾತನಾಡಿದ್ದರು. ಈ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ‘ಎಕ್ಸ್’ (ಟ್ವಿಟರ್) ಬಳಕೆದಾರನೊಬ್ಬ ಈ ವಿಡಿಯೋ ತುಣುಕನ್ನು ಹಂಚಿಕೊಂಡು “ಆಕೆಯ ಕೈ ಹಾರ್ದಿಕ್ ಹೆಗಲ ಮೇಲಿದ್ದ ರೀತಿಯನ್ನು ನೋಡಿದರೆ ರೆಡ್ಡಿಟ್‌ನಲ್ಲಿ ಹರಿದಾಡುತ್ತಿದ್ದ ಇವರ ಪ್ರೇಮ ಪುಕಾರುಗಳು ನಿಜವಾಗುತ್ತಿರುವಂತೆ ತೋರುತ್ತಿದೆ” ಎಂದು ಬರೆದುಕೊಂಡಿದ್ದನು.

ನೆಟ್ಟಿಗರಿಗೆ ಟಾಂಗ್ ನೀಡಿದ ನಟಿ
ಈ ವದಂತಿಯನ್ನು ಸುಮ್ಮನೆ ಬಿಡದ ಅಮೀಷಾ ಪಟೇಲ್, ಆ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಕೌಂಟರ್ ಕೊಟ್ಟಿದ್ದಾರೆ. ಅತ್ಯಂತ ವ್ಯಂಗ್ಯಾತ್ಮಕ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ನಟಿ, “ಹೌದು, ನೀವು ಹೇಳುತ್ತಿರುವುದು ಎಷ್ಟು ನಿಜ! ಅಯ್ಯೋ ದೇವರೆ, ನಿವೇ ಸರಿಯಾಗಿ ಹೇಳಿದ್ದೀರಿ… ನನ್ನ ಕೈ ಅವರ ಹೆಗಲ ಮೇಲಿದ್ದ ರೀತಿ ನಿಜಕ್ಕೂ ಭಾರಿ ರೋಮ್ಯಾಂಟಿಕ್ ಆಗಿತ್ತಲ್ವಾ?” ಎಂದು ಟಾಂಗ್ ನೀಡಿದ್ದಾರೆ.
ಅಷ್ಟಕ್ಕೇ ನಿಲ್ಲಿಸದ ಅಮೀಷಾ, ಇಬ್ಬರು ಸ್ನೇಹಿತರ ನಡುವಿನ ತೀರಾ ಸಾಮಾನ್ಯ ಹಾಗೂ ಸಹಜ ನಡವಳಿಕೆಯನ್ನು ಪ್ರೇಮದ ದೃಷ್ಟಿಕೋನದಿಂದಷ್ಟೇ ನೋಡುವ ಜನರ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. “ನನಗೆ ನೀವು ಯಾರೆಂದು ಗೊತ್ತಿಲ್ಲ, ಆದರೆ ಖಂಡಿತವಾಗಿಯೂ ನಿಮಗೆ ಒಬ್ಬ ಹೆಣ್ಣು ಮಗಳಾಗಲಿ ಅಥವಾ ಹುಡುಗಿಯಾಗಲಿ ಸ್ನೇಹಿತೆಯಾಗಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಇನ್ಮುಂದೆ ಇಂತಹ ವಿಷಯಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೊದಲು ನಿಮಗೊಬ್ಬ ಹೆಣ್ಣು ಸ್ನೇಹಿತೆಯನ್ನು ಮಾಡಿಕೊಳ್ಳಿ” ಎಂದು ಖಾರವಾಗಿ ಸಲಹೆ ನೀಡಿದ್ದಾರೆ.
ಇನ್ನು ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ಹಾರ್ದಿಕ್ ಪಾಂಡ್ಯ ಅವರು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ನಂತರ, ಮಾಡೆಲ್ ಮಹಿಕಾ ಶರ್ಮಾ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ. 2025ರಲ್ಲೇ ಹಾರ್ದಿಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಿಹಿಕಾ ಜೊತೆಗಿನ ಬಾಂಧವ್ಯವನ್ನು ಅಧಿಕೃತವಾಗಿ ಘೋಷಿಸಿದ್ದರು. ಹೀಗಿದ್ದರೂ, ಸ್ನೇಹಿತರ ನಡುವಿನ ಸಣ್ಣ ಸಂಪರ್ಕಕ್ಕೂ ಪ್ರೇಮದ ಮುದ್ರೆ ಒತ್ತಲು ಹೊರಟ ನೆಟ್ಟಿಗರಿಗೆ ಅಮೀಷಾ ಪಟೇಲ್ ನೀಡಿದ ಖಡಕ್ ಉತ್ತರ ಈಗ ವೈರಲ್ ಆಗಿದೆ.
ಇದನ್ನೂ ಓದಿ: ಭಾರತ-ಶ್ರೀಲಂಕಾ ಟೆಸ್ಟ್ ಸರಣಿ: ಗೌತಮ್ ಗಂಭೀರ್ ಪಡೆಗೆ ಗಾಲ್‌ನಲ್ಲಿ ಸಪಿನ್ ಸವಾಲು
