ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ’ನಮ್ಮ ಮೆಟ್ರೋ’ (Namma Metro) ಬಹುದೊಡ್ಡ ವರವಾಗಿದೆ. ಸಂಚಾರ ದಟ್ಟಣೆ ಹಾಗೂ ರಸ್ತೆ ಕಿರಿಕಿರಿಯಿಂದ ತಪ್ಪಿಸಿಕೊಂಡು ವೇಗವಾಗಿ ತಲುಪಲು ಮೆಟ್ರೋ ರೈಲುಗಳು ಬೆಂಗಳೂರಿಗರ ಪಾಲಿಗೆ ನಿತ್ಯ ಜೀವನಾಡಿಯಾಗಿ ಮಾರ್ಪಟ್ಟಿವೆ. ಪ್ರಸ್ತುತ ಹಸಿರು, ನೇರಳೆ ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ದಿನಂಪ್ರತಿ ಸುಮಾರು 11 ರಿಂದ 12 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ ಸೇವೆಯ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆಯ ನಡುವೆಯೂ ನಗರದ ಸುಮಾರು 20 ಮೆಟ್ರೋ ನಿಲ್ದಾಣಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಕಂಡುಬರುತ್ತಿಲ್ಲ ಎಂಬ ಕುತೂಹಲಕಾರಿ ವರದಿಯೊಂದು ಬಹಿರಂಗಗೊಂಡಿದೆ.
ಯಾವೆಲ್ಲಾ ನಿಲ್ದಾಣಗಳಲ್ಲಿ ಕಮ್ಮಿ ಇದೆ ಜನರ ಸಂಚಾರ?
ಬಿಎಂಆರ್ಸಿಎಲ್ (BMRCL) ಮಾಹಿತಿಯ ಪ್ರಕಾರ, ಕಡಿಮೆ ಪ್ರಯಾಣಿಕರ ಸಾಂದ್ರತೆ ಹೊಂದಿರುವ ಈ 20 ನಿಲ್ದಾಣಗಳ ಪೈಕಿ ಹಳದಿ ಮಾರ್ಗದ 9, ಹಸಿರು ಮಾರ್ಗದ 7 ಹಾಗೂ ನೇರಳೆ ಮಾರ್ಗದ 4 ನಿಲ್ದಾಣಗಳು ಸೇರಿವೆ. ಹಳದಿ ಮಾರ್ಗದಲ್ಲಿ ಬೆರಟೆನ ಅಗ್ರಹಾರ ನಿಲ್ದಾಣವು ಅತ್ಯಂತ ಕಡಿಮೆ ಅಂದರೆ ದಿನಕ್ಕೆ ಕೇವಲ 1,243 ಪ್ರಯಾಣಿಕರನ್ನು ಮಾತ್ರ ಹೊಂದಿದ್ದರೆ, ಸಿಂಗಸಂದ್ರದಲ್ಲಿ 2,539, ಹೆಬ್ಬಗೋಡಿಯಲ್ಲಿ 2,739 ಹಾಗೂ ಹುಸ್ಕೂರು ರಸ್ತೆಯಲ್ಲಿ 3,169 ಮಂದಿ ಸಂಚರಿಸುತ್ತಿದ್ದಾರೆ. ಇದಲ್ಲದೆ ರಾಗಿಗುಡ್ಡ (4,652), ಹೊಸ ರಸ್ತೆ (5,324), ಹೊಂಗಸಂದ್ರ (5,378), ಎಲೆಕ್ಟ್ರಾನಿಕ್ ಸಿಟಿ (5,546) ಹಾಗೂ ಕೂಡ್ಲು ಗೇಟ್ (5,615) ನಿಲ್ದಾಣಗಳಲ್ಲೂ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಿದೆ.
ಇನ್ನು ಹಸಿರು ಮಾರ್ಗದ ವಿಷಯಕ್ಕೆ ಬಂದರೆ, ಮಂಜುನಾಥನಗರ ನಿಲ್ದಾಣದಿಂದ ದಿನಕ್ಕೆ ಕೇವಲ 1,411 ಪ್ರಯಾಣಿಕರು ಸಂಚರಿಸುತ್ತಿದ್ದರೆ, ಪೀಣ್ಯ ಇಂಡಸ್ಟ್ರಿಯಲ್ಲಿ 2,676 ಹಾಗೂ ತಲಘಟ್ಟಪುರದಲ್ಲಿ 3,349 ಮಂದಿ ಮೆಟ್ರೋ ಹತ್ತುತ್ತಿದ್ದಾರೆ. ಚಿಕ್ಕಬಿದರಕಲ್ಲು (4,519), ಪೀಣ್ಯ (4,956), ದೊಡ್ಡಕಲ್ಲಸಂದ್ರ (5,827) ಮತ್ತು ಮಹಾಕವಿ ಕುವೆಂಪು ರಸ್ತೆ (5,869) ನಿಲ್ದಾಣಗಳಲ್ಲೂ ಸಾರ್ವಜನಿಕರ ಬಳಕೆಯ ಮಟ್ಟ ನಿರೀಕ್ಷೆಗಿಂತ ಕಡಿಮೆಯಿರುವುದು ಕಂಡುಬಂದಿದೆ.
ಸಾರಿಗೆ ಕೊರತೆ ಹಿನ್ನೆಲೆ ಕ್ಷೀಣಿಸಿದ ಸಂಖ್ಯೆ
ಅದೇ ರೀತಿ ಜನನಿಬಿಡ ನೇರಳೆ ಮಾರ್ಗದಲ್ಲೂ ನಾಲ್ಕು ನಿಲ್ದಾಣಗಳಲ್ಲಿ ಇದೇ ಪರಿಸ್ಥಿತಿಯಿದೆ. ನಾಯಂಡಹಳ್ಳಿ ನಿಲ್ದಾಣದಿಂದ ನಿತ್ಯ 2,645 ಪ್ರಯಾಣಿಕರು, ಹೋಪ್ ಫಾರ್ಮ್ನಿಂದ 3,192, ದೀಪಾಂಜಲಿ ನಗರದಿಂದ 4,610 ಹಾಗೂ ಜ್ಞಾನಭಾರತಿ ನಿಲ್ದಾಣದಿಂದ 5,218 ಮಂದಿ ಪ್ರಯಾಣಿಸುತ್ತಿದ್ದಾರೆ. ಮೆಟ್ರೋ ಜಾಲ ವಿಸ್ತಾರಗೊಳ್ಳುತ್ತಿದ್ದರೂ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕೊನೆಯ ಹಂತದ ಸಂಪರ್ಕ (Last-mile connectivity) ಕೊರತೆ ಹಾಗೂ ಸಮೀಪದ ಸಾರಿಗೆ ಸೌಲಭ್ಯಗಳ ಕೊರತೆಯಿಂದಾಗಿ ಈ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ಮತ್ತೆ ಇಡಿ ಶಾಕ್
