ಬಾಗಲಕೋಟೆ: ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆಯಲ್ಲೇ ಕೊಠಡಿಯ ಮೇಲ್ಛಾವಣಿಯ ಕಾಂಕ್ರೀಟ್ ಹಾಗೂ ಪ್ಲಾಸ್ಟರಿಂಗ್ ಕುಸಿದು ಬಿದ್ದು ವಿದ್ಯಾರ್ಥಿಗಳು ಗಾಯಗೊಂಡ (Bagalkot) ಘಟನೆಗೆ ಸಂಬಂಧಿಸಿದಂತೆ, ಕರ್ತವ್ಯ ಲೋಪ ಎಸಗಿದ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಹಾಗೂ ಇಬ್ಬರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ದುರಂತ ತಪ್ಪಿದರೂ ಮಕ್ಕಳಿಗೆ ಗಾಯ
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ 2ರಂದು ದಿನನಿತ್ಯದಂತೆ ತರಗತಿಗಳು ನಡೆಯುತ್ತಿದ್ದವು. ಈ ವೇಳೆ ಏಕಾಏಕಿ ಶಾಲಾ ಕೊಠಡಿಯ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರಿಂಗ್ ಹಾಗೂ ಕಾಂಕ್ರೀಟ್ ಚೂರುಗಳು ಪಾಠ ಕೇಳುತ್ತಿದ್ದ ಮಕ್ಕಳ ಮೇಲೆ ಕುಸಿದು ಬಿದ್ದಿವೆ. ಈ ದುರ್ಘಟನೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೇ ಗಂಭೀರ ಅನಾಹುತವೊಂದು ತಪ್ಪಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಪೋಷಕರ ಆಕ್ರೋಶ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ
ಶಾಲಾ ಕಟ್ಟಡವು ತೀವ್ರ ದುಸ್ಥಿತಿಯಲ್ಲಿದ್ದರೂ ಹಾಗೂ ರಿಪೇರಿ ಹಂತದಲ್ಲಿದ್ದರೂ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯ ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದ್ದರೂ ಮಕ್ಕಳನ್ನು ಅದೇ ಅಪಾಯಕಾರಿ ಕೊಠಡಿಯಲ್ಲಿ ಕುಳ್ಳಿರಿಸಿ ಪಾಠ ಮಾಡುತ್ತಿದ್ದುದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಮೂವರ ಅಮಾನತು: ಸಿಸಿಎ ನಿಯಮದಡಿ ಕ್ರಮ
ಸ್ಥಳೀಯರ ಆಕ್ರೋಶ ಹಾಗೂ ಘಟನೆಯ ತೀವ್ರತೆಯನ್ನು ಪರಿಗಣಿಸಿ ಅಧಿಕಾರಿಗಳು ತಕ್ಷಣವೇ ಶಿಸ್ತುಕ್ರಮ ಜಾರಿಗೆ ತಂದಿದ್ದಾರೆ:
- ಪ್ರಭಾರಿ ಮುಖ್ಯಶಿಕ್ಷಕ ಅಮಾನತು: ಮೇಲ್ಛಾವಣಿ ದುರಸ್ತಿ ಹಂತದಲ್ಲಿದ್ದರೂ ನಿರ್ಲಕ್ಷ್ಯ ವಹಿಸಿ, ಮೇಲಾಧಿಕಾರಿಗಳ ಗಮನಕ್ಕೆ ತರದೆ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಶಾಲೆಯ ಪ್ರಭಾರಿ ಹೆಚ್‌ಎಂ ಸಿ.ಬಿ. ಹೆಳವರ ಅವರನ್ನು ಕರ್ನಾಟಕ ನಾಗರಿಕ ಸೇವೆ (ಸಿಸಿಎ) 1957ರ ನಿಯಮ 10(1) ರಡಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಆರ್.ಎಸ್. ಸೀತಾರಾಮು ಅಮಾನತುಗೊಳಿಸಿದ್ದಾರೆ.
- ಇಬ್ಬರು ಇಂಜಿನಿಯರ್‌ಗಳ ಅಮಾನತು: ಶಾಲಾ ಕಟ್ಟಡದ ಸುರಕ್ಷತೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರ ನೀಡುವಲ್ಲಿ ವಿಫಲರಾದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ (PRED) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ. ರೇವಡಿ ಹಾಗೂ ಜೂನಿಯರ್ ಇಂಜಿನಿಯರ್ ಎಸ್.ಎಂ. ಸಂಗನಾಳ ಅವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಜಾನನ ಬಾಲೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮಕ್ಕಳ ಜೀವದ ಜೊತೆ ಆಟವಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸಿಎಂ ಬದಲಾವಣೆ, ಹೊಸ ವರ್ಷಕ್ಕೆ ಹೊಸ ಮುಖ: ಬಿಜೆಪಿ ನಾಯಕ ಸುನೀಲ್ ಕುಮಾರ್ ಅಚ್ಚರಿಯ ಹೇಳಿಕೆ
