ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಮುಖ್ಯ ಆರೋಪಿ ಬಸವರಾಜ್ ಕನ್ನಾಳೆಯನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದು, ಕನ್ನಾಳೆ ಹೊಂದಿದ್ದ ದೈತ್ಯ ರಾಜಕೀಯ ಸಂಪರ್ಕ ಜಾಲ ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಉಜ್ಬೇಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾದ ಈತನ ಮೊಬೈಲ್ ಮತ್ತು ಸಿಡಿಆರ್ (ಕರೆ ವಿವರ) ಪರಿಶೀಲಿಸಿದಾಗ, ರಾಜ್ಯದ ಸಚಿವರು, ಸಂಸದರು ಹಾಗೂ ಶಾಸಕರು (KPSC) ಸೇರಿದಂತೆ 50ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳ ನೇರ ಸಂಪರ್ಕವಿರುವುದು ಬಹಿರಂಗವಾಗಿದೆ.
ಸಿಂಡಿಕೇಟ್ ಸದಸ್ಯತ್ವ ಮತ್ತು ವಿಲ್ಲಾಗಳಲ್ಲಿ ಪರೀಕ್ಷೆ ಅಕ್ರಮ ತುಮಕೂರಿನ ಪ್ರಭಾವಿ ನಾಯಕರೊಬ್ಬರ ಕೃಪಾಕಟಾಕ್ಷದಿಂದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನ ಗಿಟ್ಟಿಸಿಕೊಂಡಿದ್ದ ಕನ್ನಾಳೆ, ವಿಚಾರಣೆ ವೇಳೆ ತಾನು ಬಾಲ್ಕಿಯಿಂದ ದೆಹಲಿವರೆಗೆ ಉದ್ಯಮ ಜಾಲ ಹೊಂದಿರುವ ಬಿಸಿನೆಸ್‌ಮ್ಯಾನ್ ಎಂದು ಹೇಳಿಕೊಂಡಿದ್ದಾನೆ. ಕನ್ನಾಳೆ ಬಂಧನದಿಂದಾಗಿ ಆತನ ಸಂಪರ್ಕದಲ್ಲಿದ್ದ ರಾಜಕಾರಣಿಗಳು ಹಾಗೂ ಅಕ್ರಮದ ಫಲಾನುಭವಿಗಳಲ್ಲಿ ತೀವ್ರ ಆತಂಕ ಶುರುವಾಗಿದೆ. ಇಷ್ಟೇ ಅಲ್ಲದೆ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲೂ ಈತನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಕನ್ನಾಳೆ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡ ಡಿವಿಆರ್, ಸಿಸಿಟಿವಿ ದೃಶ್ಯಾವಳಿ ಹಾಗೂ ಹಲವು ಅಕ್ರಮ ದಾಖಲೆಗಳನ್ನು ಜಪ್ತಿ ಮಾಡಿದೆ.
ಪ್ರಕರಣದಲ್ಲಿ ಅಕ್ರಮವಾಗಿ ಹಣ ನೀಡಿರುವುದಾಗಿ ಒಪ್ಪಿಕೊಂಡಿರುವ ನಾಲ್ವರು ಅಭ್ಯರ್ಥಿಗಳು ಸಿಐಡಿ ಮುಂದೆ ಸಾಕ್ಷಿಗಳಾಗಲು ಒಪ್ಪಿಕೊಂಡಿದ್ದಾರೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಮತ್ತು ಅಭ್ಯರ್ಥಿಗಳಿಗೆ ಬೆಂಗಳೂರಿನ ಹೊರವಲಯದ ಖಾಸಗಿ ವಿಲ್ಲಾಗಳಲ್ಲಿ ಕೂರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಹೊರಬಿದ್ದಿದೆ.
ಮಾಜಿ ಕೆಪಿಎಸ್‌ಸಿ ಅಧ್ಯಕ್ಷರಿಗೆ ಸಂಕಷ್ಟ ಈ ಅಕ್ರಮದ ತನಿಖೆಯ ಕಾವು ಈಗ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಸ್.ಶಿವಶಂಕರಪ್ಪ ಸಾಹುಕಾರ್ ಅವರಿಗೂ ತಟ್ಟಿದೆ. ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಈ ಭಾರೀ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆದಿತ್ತು. ಸಾಹುಕಾರ್ ಸಲ್ಲಿಸಿದ್ದ ಮುಂಗಡ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ಶಿಫಾರಸಿನಂತೆ ರಾಜ್ಯಪಾಲರು ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿದ್ದರು. ಸಾಹುಕಾರ್ ಕುಟುಂಬಸ್ಥರು ಹಾಗೂ ಕೆಪಿಎಸ್‌ಸಿಯ ಉನ್ನತ ಅಧಿಕಾರಿಗಳ ನಿಕಟವರ್ತಿಗಳೇ ನೇಮಕಾತಿ ಪಟ್ಟಿಯಲ್ಲಿ ಉನ್ನತ ರ್ಯಾಂಕ್ ಪಡೆದಿದ್ದಾರೆ ಎಂಬ ಆರೋಪ ಸಾಬೀತಾಗುತ್ತಿದ್ದು, ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ: ₹20 ಸಾವಿರ ಲಂಚ ಪಡೆಯುತ್ತಿದ್ದ ಕಾನ್‌ಸ್ಟೇಬಲ್ ರೆಡ್‌ಹ್ಯಾಂಡ್ ಲಾಕ್
