Pradeep Eshwar: ಎಐಸಿಸಿ ಅಧ್ಯಕ್ಷ ಖರ್ಗೆಗೆ ಏಕವಚನ ಬಳಕೆ: ಬಿ.ಎಲ್. ಸಂತೋಷ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಕಿಡಿ

Congress MLA Pradeep Eshwar Hits Out at BL Santhosh Over Remarks Against Kharge

ಬೆಂಗಳೂರು,: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬಳಸಿರುವ ಪದಬಳಕೆ ಹಾಗೂ ಏಕವಚನದ ಮಾತುಗಳನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೀವ್ರವಾಗಿ ಖಂಡಿಸಿದ್ದಾರೆ. ಹಿರಿಯ ರಾಜಕಾರಣಿಗೆ ನೀಡಬೇಕಾದ ಕನಿಷ್ಠ ಗೌರವ ನೀಡದಿರುವುದು ಅವರ ನಡವಳಿಕೆಯನ್ನು ತೋರಿಸುತ್ತದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭ್ಯತೆ ಹಾಗೂ ಸಂಸ್ಕಾರದ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲ

ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಆರ್‌ಎಸ್‌ಎಸ್ ಸಂಘಟನೆಯ ಮೂಲಕ ಉನ್ನತ ಮಟ್ಟಕ್ಕೇರಿರುವ ಬಿ.ಎಲ್. ಸಂತೋಷ್ ಅವರಿಗೆ ಸುಮಾರು 59 ವರ್ಷ ವಯಸ್ಸಾಗಿದೆ. ಆದರೆ, ಇತ್ತೀಚೆಗೆ ಸಾರ್ವಜನಿಕ ಭಾಷಣ ಮಾಡುವ ವೇಳೆ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಮಹಾತ್ಮ ಗಾಂಧೀಜಿಯವರು ಅಲಂಕರಿಸಿದ್ದ ಗೌರವಾನ್ವಿತ ಹುದ್ದೆಯಲ್ಲಿ ಇಂದು ಖರ್ಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸೌಜನ್ಯಯುತ ಮತ್ತು ಅನುಭವೀ ನಾಯಕನ ಬಗ್ಗೆ ಮಾತನಾಡುವಾಗ ನೀಡಬೇಕಾದ ಸಭ್ಯತೆ ಹಾಗೂ ಸಂಸ್ಕಾರದ ಕನಿಷ್ಠ ಸಾಮಾನ್ಯ ಜ್ಞಾನ ಸಂತೋಷ್ ಅವರಿಗೆ ಇರಬೇಕಿತ್ತು ಎಂದು ಟೀಕಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪಿಸುವಾಗ ‘ಅವನು’, ‘ಅವನ ಅಪ್ಪ’ ಎಂಬ ರೀತಿಯಲ್ಲಿ ಏಕವಚನ ಬಳಸಿ ಮಾತನಾಡಿರುವುದು ಅತ್ಯಂತ ಶೋಚನೀಯ. ವಯಸ್ಸಿನಲ್ಲಿ ಹಾಗೂ ಅನುಭವದಲ್ಲಿ ನಿಮಗಿಂತ ಹಿರಿಯರಾದ ನಾಯಕರನ್ನು ಗೌರವಿಸುವುದನ್ನು ಕಲಿಯಬೇಕು. ನಾನು ಬಿ.ಎಲ್. ಸಂತೋಷ್ ಅವರಿಗಿಂತ ಕಿರಿಯವನಾಗಿದ್ದರೂ, ಅವರನ್ನು ‘ಸರ್‌’ ಎಂದೇ ಗೌರವದಿಂದ ಸಂಬೋಧಿಸುತ್ತಿದ್ದೇನೆ. ಹಿರಿಯರನ್ನು ಸತ್ಕರಿಸುವುದು ಮತ್ತು ಗೌರವಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ನೆನಪಿಸಿದರು.

‘ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ

ಇದೇ ವೇಳೆ ಆರ್‌ಎಸ್‌ಎಸ್ ನೊಂದಣಿ ವಿಚಾರವನ್ನೂ ಪ್ರಸ್ತಾಪಿಸಿದ ಶಾಸಕರು, ನಂಬಿಕೆಯಿಂದ ಸಂಸ್ಥೆ ನಡೆಸುತ್ತಿದ್ದೇವೆ, ನಮಗೆ ನೋಂದಣಿಯ ಅಗತ್ಯವಿಲ್ಲ ಎಂದು ಬಿ.ಎಲ್. ಸಂತೋಷ್ ಹೇಳಿರುವುದು ಆಶ್ಚರ್ಯ ತಂದಿದೆ. ದೇಶದ ಕಾನೂನು, ನಿಯಮಗಳು ಮತ್ತು ಆದಾಯ ತೆರಿಗೆ ಕಾಯ್ದೆಯ ಬಗ್ಗೆ ಅವರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರ ಈ ರೀತಿಯ ನಡೆಗಳು ‘ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ’ ಎಂಬ ಗಾದೆ ಮಾತಿಗೆ ಸೂಕ್ತ ಉದಾಹರಣೆಯಾಗಿದೆ ಎಂದು ವ್ಯಂಗ್ಯವಾಡಿದರು.

ಇನ್ನೊಂದೆಡೆ, ಬಿಜೆಪಿ ಮುಖಂಡ ಸಿ.ಟಿ. ರವಿ ಅವರ ವಿರುದ್ಧವೂ ಹರಿದಾಯ್ದ ಪ್ರದೀಪ್ ಈಶ್ವರ್, ಗೂಗಲ್‌ನಲ್ಲಿ ‘ಸಿ.ಟಿ. ರವಿ’ ಎಂಬ ಹೆಸರಿನ ವಿರುದ್ಧಾರ್ಥಕ ಪದ ಹುಡುಕಿದರೆ ‘ಒಳ್ಳೆಯತನ’ ಎಂಬ ಉತ್ತರ ಸಿಗುತ್ತದೆ ಎಂದು ಕಾಲೆಳೆದರು. ಸಿ.ಟಿ. ರವಿ ಅವರು ಬೇಜವಾಬ್ದಾರಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಅವರ ಮಾತು ಮತ್ತು ವರ್ತನೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:  ಜೈಲಿನಲ್ಲೇ ದೇವರ ಫೋಟೋ ಹಿಂದೆ ಮೊಬೈಲ್ ಸೀಕ್ರೆಟ್! ಪ್ರಜ್ವಲ್ ರೇವಣ್ಣ ಬಳಿ ಎರಡನೇ ಫೋನ್ ಪತ್ತೆ

Leave a Reply

Your email address will not be published. Required fields are marked *