ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು (Hanur Shootout) ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಆಂಥೋನಿ, ಪೀಟರ್ ಹಾಗೂ ಕುಮಾರ್ ಬಲಿಯಾದ ಭೀಕರ ಘಟನೆ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೂ ಪೊಲೀಸರು ಹಾಗೂ ಜಿಲ್ಲಾಡಳಿತ ಮೋಸದಿಂದ ಮರಣೋತ್ತರ ಪರೀಕ್ಷೆ (Post-Mortem) ಪೂರ್ಣಗೊಳಿಸಿವೆ ಎಂದು ಮೃತ ಪೀಟರ್ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರ ಮೇಲೆ ಗಂಭೀರ ಆರೋಪ
ಉನ್ನತ ಅಧಿಕಾರಿಗಳು ಹಾಗೂ ಸಚಿವರ ಭಾಗವಹಿಸುವಿಕೆಯೊಂದಿಗೆ ಸೂಕ್ತ ಪರಿಹಾರ ಘೋಷಣೆಯಾಗುವವರೆಗೆ ಮರಣೋತ್ತರ ಪರೀಕ್ಷೆಗೆ ಸಮ್ಮತಿಸುವುದಿಲ್ಲ ಎಂದು ಮೃತರ ಸಂಬಂಧಿಕರು ಪಟ್ಟು ಹಿಡಿದಿದ್ದರು. ಶವಗಳನ್ನು ವೈಜ್ಞಾನಿಕ ಸ್ಕ್ಯಾನಿಂಗ್‌ಗೆ ರವಾನಿಸಲು ಯತ್ನಿಸಿದಾಗ ಸಂಬಂಧಿಕರು ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಶವಗಳನ್ನು ಮತ್ತೆ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ವಾಪಸ್ ತರಲಾಗಿತ್ತು.
ಆದರೆ, ಕೇವಲ ಸ್ಥಳ ಮಹಜರು ಹಾಗೂ ಪಂಚನಾಮೆ ಪ್ರಕ್ರಿಯೆ ಎಂದು ಹೇಳಿ ಪೊಲೀಸರು ಮೃತರ ಕುಟುಂಬಸ್ಥರಿಂದ ಸಹಿ ಪಡೆದುಕೊಂಡಿದ್ದು, ಅವರ ಅರಿವಿಗೆ ಬರದಂತೆ ಮರಣೋತ್ತರ ಪರೀಕ್ಷೆ ಮುಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಶವಾಗಾರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಗರೇಟ್, “ನಾವು ಪೋಸ್ಟ್‌ಮಾರ್ಟಮ್‌ಗೆ ಯಾವುದೇ ಸಮ್ಮತಿ ನೀಡಿರಲಿಲ್ಲ. ಹನೂರಿನಿಂದ ಆಸ್ಪತ್ರೆಗೆ ಬಂದು ನೋಡಿದಾಗ ಈಗಾಗಲೇ ಎರಡು ಮೃತದೇಹಗಳ ಶವಪರೀಕ್ಷೆ ಪೂರ್ಣಗೊಂಡಿರುವುದು ಗೊತ್ತಾಯಿತು. ನಾನು ನರ್ಸ್ ಆಗಿರುವುದರಿಂದ ಶವಾಗಾರದ ಒಳಗಿನ ಸ್ಥಿತಿ ನೋಡಿ ಇದನ್ನು ಖಚಿತವಾಗಿ ಹೇಳಬಲ್ಲೆ. ಮೃತದೇಹಗಳನ್ನು ನಿಯಮದಂತೆ ಐಸ್ ಬಾಕ್ಸ್‌ನಲ್ಲಿ ಇಡದೆ ಬೇಜವಾಬ್ದಾರಿ ತೋರಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರ ಅನುಮತಿಯಿಲ್ಲದೆ ಪೋಸ್ಟ್‌ಮಾರ್ಟಮ್
ಕುಟುಂಬಸ್ಥರ ಅನುಮತಿಯಿಲ್ಲದೆ ಪೋಸ್ಟ್‌ಮಾರ್ಟಮ್ ನಡೆಸಿರುವ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮೃತರ ಸಂಬಂಧಿಕರ ಆಕ್ರೋಶ ಮುಗಿಲುಮುಟ್ಟಿದೆ. ಸೂಕ್ತ ನ್ಯಾಯ ಹಾಗೂ ಪರಿಹಾರ ಸಿಗುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಸಂಬಂಧಿಕರು ಪಟ್ಟು ಹಿಡಿದಿರುವುದರಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಉದ್ವಿಗ್ನತೆ ಮುಂದುವರಿದಿದೆ.
ಹನೂರು ಗುಂಡಿನ ದಾಳಿ: ಸರ್ಕಾರದ ವಿರುದ್ಧ ಆರ್. ಅಶೋಕ್ ಚಾಟಿಕೇಟು, ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಪಟ್ಟು!
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಫೈರಿಂಗ್‌ಗೆ ಮೂವರು ಬಲಿಯಾಗಿರುವ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಕಾವು ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪ್ರಕರಣದ ನೈಜ ಸತ್ಯಾಸತ್ಯತೆ ಹೊರಬರಲು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲೇ ‘ನ್ಯಾಯಾಂಗ ತನಿಖೆ’ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಅಧಿಕಾರಿಗಳ ಹೇಳಿಕೆಗಳಲ್ಲಿ ಯಾವುದೇ ತಾಳಮೇಳವಿಲ್ಲ ಎಂದು ಕಿಡಿಕಾರಿರುವ ಅವರು, ಅರಣ್ಯ ಇಲಾಖೆ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀಡುತ್ತಿರುವ ಭಿನ್ನ ಹೇಳಿಕೆಗಳು ಸಾರ್ವಜನಿಕರಲ್ಲಿ ದಟ್ಟ ಅನುಮಾನ ಮೂಡಿಸಿವೆ ಎಂದಿದ್ದಾರೆ.
ಘಟನೆಯ ಸುತ್ತ ಹೆಣೆದುಕೊಂಡಿರುವ ಹಲವಾರು ಸಂಶಯಾಸ್ಪದ ಸಂಗತಿಗಳನ್ನು ಅಶೋಕ್ ಅವರು ಬಹಿರಂಗವಾಗಿ ಪ್ರಸ್ತಾಪಿಸಿದ್ದಾರೆ:
- ಮಹಜರಿಗೂ ಮುನ್ನ ಶವಗಳ ಸ್ಥಳಾಂತರ: ಪೊಲೀಸರು ನಿಯಮಾನುಸಾರ ಸ್ಥಳ ಪರಿಶೀಲನೆ ಹಾಗೂ ಮಹಜರು ನಡೆಸುವ ಮೊದಲೇ ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕೊಂಡೊಯ್ದಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
- ನಕಲಿ ಎನ್‌ಕೌಂಟರ್ ಆರೋಪ: ಮೃತಪಟ್ಟವರು ವನ್ಯಜೀವಿ ಶಿಕಾರಿಗೆ ಬಂದಿದ್ದರೆಂದು ಇಲಾಖೆ ಹೇಳುತ್ತಿದ್ದರೆ, ಇದು ‘ಯೋಜಿತ ನಕಲಿ ಎನ್‌ಕೌಂಟರ್’ ಎಂದು ಮೃತರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
- ನಿಯಮಬಾಹಿರ ಫೈರಿಂಗ್: ಬೆದರಿಸುವ ಅಥವಾ ಆತ್ಮರಕ್ಷಣೆಯ ಸಂದರ್ಭದಲ್ಲಿ ಮೊದಲು ಕಾಲಿನ ಭಾಗಕ್ಕೆ ಗುಂಡು ಹಾರಿಸುವುದು ನಿಯಮ. ಆದರೆ, ಇಲ್ಲಿ ನೇರವಾಗಿ ಎದೆಗೆ ಗುಂಡಿಟ್ಟು ಮೂವರನ್ನು ಸಾಲಾಗಿ ಹೊಡೆದುರುಳಿಸಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
- ಸಿಬ್ಬಂದಿ ನಾಪತ್ತೆ: ಘಟನೆಗೆ ಕಾರಣರಾದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಪೋಲಿಸರಿಗೆ ಮಾಹಿತಿ ನೀಡಿ ಶರಣಾಗುವ ಬದಲು ತಲೆಮರೆಸಿಕೊಂಡಿರುವುದು ಕೃತ್ಯದ ಗಂಭೀರತೆಯನ್ನು ಹೆಚ್ಚಿಸಿದೆ.
- ಸಚಿವರ ಜವಾಬ್ದಾರಿ ವೈಫಲ್ಯ: ಅರಣ್ಯ ಸಚಿವರು ತಕ್ಷಣವೇ ಸ್ಥಳಕ್ಕೆ ತೆರಳಿ ಸಂತ್ರಸ್ತ ಕುಟುಂಬಗಳ ಅಳಲನ್ನು ಆಲಿಸಿ ಧೈರ್ಯ ತುಂಬಬೇಕಿತ್ತು. ಆದರೆ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ.
ಇನ್ನು ಸರ್ಕಾರ ಘೋಷಿಸಿರುವ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಯಿಂದ ನೈಜ ಸತ್ಯ ಹೊರಬರಲು ಸಾಧ್ಯವಿಲ್ಲ. ನಿಷ್ಪಕ್ಷಪಾತ ನ್ಯಾಯಕ್ಕಾಗಿ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಘಟನೆಯಲ್ಲಿ ಭಾಗಿಯಾದ ಅರಣ್ಯ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹನೂರು ಅರಣ್ಯ ಇಲಾಖೆ ಫೈರಿಂಗ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆರ್ ಅಶೋಕ್ ಪಟ್ಟು!
