ಅಮೆರಿಕ: ಅಧ್ಯಕ್ಷ ಡೊನಾಲ್ಡ್ (America) ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಪ್ರಮುಖ ಸಾರ್ವಜನಿಕ ಧ್ವನಿಯಾಗಿ ಹೊರಹೊಮ್ಮಿದ್ದ ವೈಟ್ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಈ ತಿಂಗಳಾಂತ್ಯಕ್ಕೆ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಉದ್ದೇಶ
ಅತ್ಯಂತ ಕಿರಿಯ ವಯಸ್ಸಿಗೆ ಈ ಹುದ್ದೆ ಅಲಂಕರಿಸಿದ್ದ 28 ವರ್ಷದ ಲೀವಿಟ್, ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ಈ ನಿರ್ಧಾರ ತಳೆದಿದ್ದಾರೆ ಎಂದು ಟ್ರಂಪ್ ಘೋಷಿಸಿದ್ದಾರೆ. ಹುದ್ದೆ ತೊರೆದರೂ ಲೀವಿಟ್ ಅವರು ಮುಂಬರುವ ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಪ್ರಮುಖ ಸಲಹೆಗಾರ್ತಿಯಾಗಿ ಮುಂದುವರಿಯಲಿದ್ದಾರೆ.
ವೈಟ್ಹೌಸ್ನಲ್ಲಿ ಪತ್ರಕರ್ತರನ್ನು ತೀಕ್ಷ್ಣ ಮಾತುಗಳಿಂದ ಎದುರಿಸಿ ಗಮನ ಸೆಳೆದಿದ್ದ ಲೀವಿಟ್, ಕಳೆದ ಮೇ ತಿಂಗಳಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಟ್ರಂಪ್ ಅವರ ಮೊದಲ ಅವಧಿಯಲ್ಲೂ ಪತ್ರಿಕಾ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಇವರು, ಎರಡನೇ ಅವಧಿಯಲ್ಲಿ ಯಾವುದೇ ನೀತಿ ನಿರೂಪಕಿಯಾಗದಿದ್ದರೂ ಟ್ರಂಪ್ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ಜಗತ್ತಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತಕ್ಕೆ ಸಂಬಂಧಿಸಿದ ಆಮದು ಸುಂಕ, ರಷ್ಯಾ ತೈಲ ಖರೀದಿ, ವಲಸೆ ಹಾಗೂ ಭಾರತ-ಪಾಕಿಸ್ತಾನ ಸಂಘರ್ಷದಂತಹ ಸೂಕ್ಷ್ಮ ವಿಚಾರಗಳಲ್ಲೂ ಅಮೆರಿಕ ಸರ್ಕಾರದ ಪರವಾಗಿ ಇವರೇ ಹೇಳಿಕೆಗಳನ್ನು ನೀಡುತ್ತಿದ್ದರು.
ಟ್ರಂಪ್ ನಿರ್ಧಾರಕ್ಕೆ ಯಾವಾಗಲೂ ಬೆಂಬಲ ನೀಡಿದ್ದ ಲೀವಿಟ್
ಫೆಬ್ರವರಿ 2026ರಲ್ಲಿ ಅಮೆರಿಕ ಸರ್ಕಾರವು ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಶೇಕಡಾ 25ರಿಂದ 18ಕ್ಕೆ ಇಳಿಸಿದಾಗ, ಲೀವಿಟ್ ಈ ನಿರ್ಧಾರವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಭಾರತವು ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಮತ್ತು ಬದಲಿಗೆ ಅಮೆರಿಕ ಅಥವಾ ವೆಜುವೆಲಾದಿಂದ ತೈಲ ಖರೀದಿಸಲು ಒಪ್ಪಿಕೊಂಡಿದೆ ಎಂದು ಅವರು ಪ್ರತಿಪಾದಿಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಇಂಧನ, ಸಾರಿಗೆ ಮತ್ತು ಕೃಷಿ ವಲಯಗಳಲ್ಲಿ 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಮ್ಮತಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಅಷ್ಟೇ ಅಲ್ಲದೆ, ಮೇ 2025ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಮಿಲಿಟರಿ ಸಂಘರ್ಷವನ್ನು ಶಮನಗೊಳಿಸುವಲ್ಲಿ ಟ್ರಂಪ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಲೀವಿಟ್ ತೀವ್ರವಾಗಿ ಪ್ರತಿಪಾದಿಸಿದ್ದರು. ಎರಡೂ ದೇಶಗಳ ನಡುವಿನ ಯುದ್ಧ ವಾತಾವರಣವನ್ನು ತಿಳಿಗೊಳಿಸಿ ಶಾಂತಿ ಸ್ಥಾಪಿಸಿದ್ದಕ್ಕಾಗಿ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದೂ ಅವರು ಪ್ರತಿಪಾದಿಸಿದ್ದರು. ಯುದ್ಧ ನಿಲ್ಲಿಸಿದರೆ ಹೆಚ್ಚಿನ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಾಗಿ ಅಮೆರಿಕ ಭರವಸೆ ನೀಡಿತ್ತು ಎಂಬುದು ಅವರ ವಾದವಾಗಿತ್ತು. ಆದರೆ, ಈ ಸಂಘರ್ಷ ಶಮನದಲ್ಲಿ ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಸಹಿಸುವುದಿಲ್ಲ ಮತ್ತು ಪಾಕಿಸ್ತಾನವೇ ಸ್ವತಃ ಕದನ ವಿರಾಮಕ್ಕೆ ಕೋರಿತ್ತು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸುವ ಮೂಲಕ ಅಮೆರಿಕದ ಈ ವಾದವನ್ನು ತಳ್ಳಿಹಾಕಿತ್ತು.
