ನವದೆಹಲಿ: ಓಲಾ, ಉಬರ್ ಸೇರಿದಂತೆ ವಿವಿಧ ಆ್ಯಪ್ಗಳ ಮೂಲಕ ಕ್ಯಾಬ್ ಮತ್ತು ಆಟೋ ಬುಕ್ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಭಾರಿ ರಿಲೀಫ್ (Cab Service) ನೀಡಿದೆ. ಇನ್ಮುಂದೆ ಪ್ರಯಾಣಿಕರು ತಮ್ಸ್ ಜರ್ನಿ ಶುರುವಾಗುವ ಮುನ್ನವೇ ಯಾವುದೇ ರೀತಿಯ ಹೆಚ್ಚುವರಿ ಹಣ ಅಥವಾ ಟಿಪ್ಸ್ (ಬಕ್ಷೀಸು) ನೀಡುವ ಅಗತ್ಯವಿಲ್ಲ. ಬುಕಿಂಗ್ ಸಮಯದಲ್ಲಿ ಆಪ್ಗಳು ತೋರಿಸುತ್ತಿದ್ದ ‘ಪ್ರಿ-ರೈಡ್ ಟಿಪ್ಪಿಂಗ್’ ಅಂದರೆ ಮುಂಗಡ ಟಿಪ್ಸ್ ನೀಡುವ ಆಯ್ಕೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದುಹಾಕಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲಾ ಮೋಟಾರ್ ವಾಹನ ಅಗ್ರಿಗೇಟರ್ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಹೆಚ್ಚು ಹಣ ಕೊಟ್ಟರೆ ಮಾತ್ರ ಬೇಗ ಕ್ಯಾಬ್ ಸಿಗುತ್ತದೆ ಎನ್ನುವ ಜಾಲಕ್ಕೆ ಬ್ರೇಕ್ ಹಾಕಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಕ್ಯಾಬ್ ಬುಕಿಂಗ್ ಮಾಡುವಾಗ ಆಪ್ಗಳು ಗ್ರಾಹಕರನ್ನು ದಿಕ್ಕು ತಪ್ಪಿಸುವಂತಹ ಸಂದೇಶಗಳನ್ನು ಪ್ರದರ್ಶಿಸುತ್ತಿದ್ದವು. ಬುಕಿಂಗ್ ಪ್ರಕ್ರಿಯೆಯಲ್ಲೇ ‘ಅಡ್ವಾನ್ಸ್ ಟಿಪ್’, ‘ಚೂಸ್ ಆನ್ ಆಡ್-ಆನ್’ ಹಾಗೂ ‘ನಿಮಗೆ ಬೇಗನೆ ಕ್ಯಾಬ್ ಸಿಗಬೇಕಾದರೆ ಹೆಚ್ಚುವರಿ ಹಣ ನೀಡಿ’ ಎಂಬಂತಹ ಆಯ್ಕೆಗಳನ್ನು ನೀಡಿ ಗ್ರಾಹಕರನ್ನು ಒತ್ತಾಯಿಸಲಾಗುತ್ತಿತ್ತು. ಹೆಚ್ಚುವರಿ ಹಣ ನೀಡದಿದ್ದರೆ ಚಾಲಕರು ರೈಡ್ ಒಪ್ಪಿಕೊಳ್ಳುವುದಿಲ್ಲವೇನೋ ಅಥವಾ ನಮಗೆ ಕ್ಯಾಬ್ ಸಿಗುವುದು ತಡವಾಗಬಹುದು ಎಂಬ ಆತಂಕವನ್ನು ಇವು ಪ್ರಯಾಣಿಕರಲ್ಲಿ ಸೃಷ್ಟಿಸುತ್ತಿದ್ದವು. ಈ ಬಗ್ಗೆ ಸಾರ್ವಜನಿಕರಿಂದ ಭಾರಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಈಗ ಸಾರಿಗೆ ಸಚಿವಾಲಯವು ಅಧಿಕೃತ ಆದೇಶದ ಮೂಲಕ ಇಂತಹ ವಂಚನೆಗೆ ಪೂರ್ಣವಿರಾಮ ಇಟ್ಟಿದೆ.
ಬೇಗ ಕ್ಯಾಬ್ ಸಿಗಲು ಟಿಪ್ಸ್ ಕೊಡುವ ತಂತ್ರ ಇನ್ಮುಂದೆ ನಡೆಯಲ್ಲ: ಮೋಟಾರ್ ವಾಹನ ಅಗ್ರಿಗೇಟರ್ ನಿಯಮಾವಳಿಗಳು 2025ರ ಅನ್ವಯ, ಯಾವುದೇ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಪ್ರಯಾಣ ಮುಗಿಯುವ ಮುನ್ನ ಟಿಪ್ಸ್ ಕೇಳುವಂತಿಲ್ಲ. ಹೆಚ್ಚುವರಿ ಹಣ ಪಾವತಿಸುವುದರಿಂದ ಸೇವೆಯ ಲಭ್ಯತೆ ಅಥವಾ ಗುಣಮಟ್ಟ ಬದಲಾಗುತ್ತದೆ ಎಂಬ ಭ್ರಮೆಯನ್ನು ಆಪ್ಗಳು ಮೂಡಿಸಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಚಾಲಕನು ರೈಡ್ ಒಪ್ಪಿಕೊಳ್ಳುವುದು, ಬುಕಿಂಗ್ ಖಚಿತವಾಗುವುದು, ಯಾವ ಚಾಲಕ ಸಿಗಬೇಕು ಅಥವಾ ಪ್ರಯಾಣಿಕರು ಎಷ್ಟು ಸಮಯ ಕಾಯಬೇಕು ಎಂಬ ವಿಷಯಗಳು ಗ್ರಾಹಕರು ನೀಡುವ ಮುಂಗಡ ಹಣದ ಮೇಲೆ ನಿರ್ಧಾರವಾಗಬಾರದು. ಈ ಹಿನ್ನೆಲೆಯಲ್ಲಿ ತಕ್ಷಣವೇ ತಮ್ಮ ಮೊಬೈಲ್ ಅಪ್ಲಿಕೇಶನ್ಗಳನ್ನು ಮರುಪರಿಶೀಲಿಸಿ, ನಿಯಮಬಾಹಿರ ಫೀಚರ್ಗಳನ್ನು ತೆಗೆದುಹಾಕಲು ಕಂಪನಿಗಳಿಗೆ ಸೂಚಿಸಲಾಗಿದೆ.
ಪ್ರಯಾಣ ಮುಗಿದ ನಂತರ ಟಿಪ್ಸ್ ನೀಡಲು ಮುಕ್ತ ಅವಕಾಶ: ಹಾಗಾದರೆ ಚಾಲಕರಿಗೆ ಟಿಪ್ಸ್ ನೀಡಲು ಸರ್ಕಾರ ಸಂಪೂರ್ಣ ನಿಷೇಧ ಹೇರಿದೆಯೇ ಎಂದರೆ ಖಂಡಿತ ಇಲ್ಲ. ಮೋಟಾರ್ ವಾಹನ ನಿಯಮಾವಳಿಗಳ ಕ್ಲಾಸ್ 14.15 ರ ಅಡಿಯಲ್ಲಿ ಪ್ರಯಾಣಿಕರು ತಮ್ಮ ಇಷ್ಟದಂತೆ ಚಾಲಕರಿಗೆ ಬಕ್ಷೀಸು ನೀಡಬಹುದು. ಆದರೆ ಈ ಆಯ್ಕೆಯನ್ನು ಪ್ರಯಾಣ ಸಂಪೂರ್ಣವಾಗಿ ಮುಗಿದ ನಂತರವಷ್ಟೇ ಆಪ್ಗಳಲ್ಲಿ ತೋರಿಸಬೇಕು. ಅಷ್ಟೇ ಅಲ್ಲದೆ, ಗ್ರಾಹಕರು ನೀಡುವ ಪೂರ್ತಿ ಟಿಪ್ಸ್ ಹಣವನ್ನು ಚಾಲಕನಿಗೇ ನೀಡಬೇಕು, ಅದರಲ್ಲಿ ಕಂಪನಿಗಳು ಯಾವುದೇ ಕಮಿಷನ್ ಕಡಿತಗೊಳಿಸುವಂತಿಲ್ಲ. ಒಟ್ಟಾರೆಯಾಗಿ, ಪ್ರಯಾಣ ಮುಗಿದ ನಂತರ ಚಾಲಕನ ಉತ್ತಮ ಸೇವೆಗೆ ಪ್ರೀತಿಯಿಂದ ಬಹುಮಾನ ನೀಡಬಹುದೇ ವಿನಃ, ಬೇಗ ಕ್ಯಾಬ್ ಪಡೆಯಲು ಬುಕಿಂಗ್ ವೇಳೆ ಮುಂಗಡವಾಗಿ ಲಂಚದ ರೂಪದಲ್ಲಿ ಹಣ ಪೀಕುವ ದಂದೆಗೆ ಸರ್ಕಾರ ಈಗ ಕಡಕ್ ಬ್ರೇಕ್ ಹಾಕಿದೆ.
ಇದನ್ನೂ ಓದಿ: ತಮ್ಮನ್ನು ಜಿರಳೆ ಎನ್ನುವವರು ಗಟಾರದಲ್ಲೇ ಇರಬೇಕು: ಸಂಸದೆ ಕಂಗನಾ ರಣಾವತ್!
