TOP NEWS

Big News: ಬೆಂಗಳೂರಿನ ಖ್ಯಾತ ರೆಸ್ಟೋರೆಂಟ್‌ಗಳ ಅಸಲಿ ಬಣ್ಣ ಬಯಲು: ಕಳಪೆ ಸ್ವಚ್ಛತೆ, ಅವಧಿ ಮುಗಿದ ಎಣ್ಣೆ ಪತ್ತೆ

Big news Food Safety Crackdown in Bengaluru 6 Popular Food Joints Penalized Over Massive Sanitation Issues

ಬೆಂಗಳೂರು: ಸಿಲಿಕಾನ್ ಸಿಟಿಯ ಗ್ರಾಹಕರಿಗೆ ಬಣ್ಣಬಣ್ಣದ ಲೈಟಿಂಗ್ಸ್ ಹಾಗೂ ದುಬಾರಿ ಬೆಲೆಯಲ್ಲಿ ಊಟ ನೀಡುವ ಪ್ರಮುಖ ಹೋಟೆಲ್‌ಗಳು ಕನಿಷ್ಠ ಸ್ವಚ್ಛತೆಯನ್ನೂ (Big News) ಕಾಯ್ದುಕೊಳ್ಳದೆ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಬ್ಯಾಟರಾಯನಪುರ ಮತ್ತು ಯಲಹಂಕ ವಿಭಾಗದ ಜಂಟಿ ಆರೋಗ್ಯ ಅಧಿಕಾರಿಗಳ ತಂಡವು ಇಂದು (ಆಗಸ್ಟ್ 13) ಹಠಾತ್ ದಾಳಿ ನಡೆಸಿದೆ. ಅಮೃತಹಳ್ಳಿ ಮುಖ್ಯ ರಸ್ತೆಯ ಆರೋಗ್ಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಮಾರ್ಷಲ್‌ಗಳು ಹಾಗೂ ಹಿರಿಯ ಪರಿವೀಕ್ಷಕರನ್ನೊಳಗೊಂಡ ವಿಶೇಷ ದಳವು ಬ್ಯಾಟರಾಯನಪುರ ವಲಯದ ಜನಪ್ರಿಯ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್‌ಗಳ ಕಿಚನ್‌ಗಳಿಗೆ ನುಗ್ಗಿ ಪರಿಶೀಲನೆ ನಡೆಸಿದೆ.

ಈ ಮಿಂಚಿನ ಕಾರ್ಯಾಚರಣೆಯ ವೇಳೆ ಹಯಾತ್ ಸೆಂಟ್ರಿಕ್, ಪೀಪಾಯಿ ಬ್ರೂವರಿ, ತಲಶ್ಶೇರಿ ರೆಸ್ಟೋರೆಂಟ್, ನಂದನ ಪ್ಯಾಲೇಸ್, ಸ್ವಾತಿ ಹೋಟೆಲ್ ಹಾಗೂ ಚಿಕ್ಕಪೇಟೆ ಡೋಣ್ಣೆ ಬಿರಿಯಾನಿ ಕೇಂದ್ರಗಳಲ್ಲಿ ಆಹಾರ ಸುರಕ್ಷತೆ ಹಾಗೂ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗಂಭೀರ ಲೋಪದೋಷಗಳು ಪತ್ತೆಯಾಗಿವೆ. ಗ್ರಾಹಕರಿಗೆ ಕಾಣಿಸದ ಒಳಭಾಗದ ಸ್ಟೋರ್ ರೂಮ್ ಹಾಗೂ ಅಡುಗೆ ಮನೆಗಳ ಅಶುಚಿತ್ವವನ್ನು ಕಂಡ ತನಿಖಾ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೋಲ್ಡ್ ಸ್ಟೋರೇಜ್‌ನಲ್ಲಿ ರಹಸ್ಯ, ಅಡುಗೆ ಕೋಣೆಯಲ್ಲಿ ನೊಣಗಳ ಕಾಟ: ಎಲ್ಲಕ್ಕಿಂತ ಗಂಭೀರವಾಗಿ ‘ಪೀಪಾಯಿ ಬ್ರೂವರಿ ಆ್ಯಂಡ್ ಕಿಚನ್’ನಲ್ಲಿ ಬಳಕೆದಾರರ ಆರೋಗ್ಯಕ್ಕೆ ಕಂಟಕವಾಗಬಲ್ಲ ಅವಧಿ ಮುಗಿದ ಅಡುಗೆ ಎಣ್ಣೆಯನ್ನು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಅಲ್ಲಿನ ಫ್ರೀಜರ್‌ನಲ್ಲಿ ಇಟ್ಟಿದ್ದ ಮಾಂಸಕ್ಕೆ ಯಾವುದೇ ಮುಚ್ಚಳವಾಗಲಿ ಅಥವಾ ಕನಿಷ್ಠ ಲೇಬಲ್ ಕೂಡ ಇರಲಿಲ್ಲ. ಈ ಮಾಂಸವನ್ನು ಯಾವತ್ತು ಖರೀದಿಸಲಾಗಿತ್ತು ಎಂಬ ಬಿಲ್ ಕೂಡ ಹೋಟೆಲ್‌ನಲ್ಲಿ ಸಿಕ್ಕಿಲ್ಲ. ಇದು ಎಫ್‌ಎಸ್‌ಎಸ್‌ಎಐ (FSSAI) ಸುರಕ್ಷತಾ ನೀತಿಯ ಸಂಪೂರ್ಣ ಉಲ್ಲಂಘನೆಯಾಗಿದೆ. ಇನ್ನು ಹಯಾತ್ ಸೆಂಟ್ರಿಕ್ ಮತ್ತು ತಲಶ್ಶೇರಿ ಹೋಟೆಲ್‌ಗಳಲ್ಲಿ ಹಸಿ ಹಾಗೂ ಒಣ ತ್ಯಾಜ್ಯವನ್ನು ಒಟ್ಟಿಗೆ ಸುರಿಯಲಾಗಿತ್ತು ಮತ್ತು ಆಹಾರ ಸಿದ್ಧಪಡಿಸುವ ಜಾಗದಲ್ಲೇ ನೊಣಗಳು ಮುತ್ತಿಕೊಂಡಿದ್ದವು. ನಂದನ ಪ್ಯಾಲೇಸ್ ಮತ್ತು ಚಿಕ್ಕಪೇಟೆ ಡೋಣ್ಣೆ ಬಿರಿಯಾನಿ ಹೋಟೆಲ್‌ಗಳಲ್ಲಿ ಸರ್ಕಾರ ನಿಷೇಧಿಸಿರುವ ಏಕಬಳಕೆಯ ಪ್ಲಾಸ್ಟಿಕ್ ಕವರ್‌ಗಳನ್ನು ರಾಜಾರೋಷವಾಗಿ ಬಳಸಲಾಗುತ್ತಿತ್ತು ಹಾಗೂ ಅಡುಗೆ ಮನೆಗಳು ಕಸದ ತೊಟ್ಟಿಯಂತಾಗಿದ್ದವು. ಕನಿಷ್ಠ ಶಿಸ್ತು ಕಾಪಾಡದ ಸ್ವಾತಿ ಹೋಟೆಲ್‌ನ ಅಶುಚಿತ್ವವೂ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ

ಯಾವ ಹೋಟೆಲ್‌ಗೆ ಎಷ್ಟು ದಂಡ ಹಾಕಲಾಗಿದೆ?

ನಿಯಮಗಳನ್ನು ಗಾಳಿಗೆ ತೂರಿದ ಈ ಆರೂ ಹೋಟೆಲ್‌ಗಳಿಗೆ ಜಂಟಿ ತಂಡವು ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದ್ದು, ಒಟ್ಟು 1,60,000 ರೂಪಾಯಿ ದಂಡದ ಬರೆ ಎಳೆದಿದೆ. ಇದರಲ್ಲಿ ಗರಿಷ್ಠ ಮೊತ್ತವಾಗಿ ಪೀಪಾಯಿ ಬ್ರೂವರಿಗೆ 80 ಸಾವಿರ ರೂ. ಹಾಗೂ ಹಯಾತ್ ಸೆಂಟ್ರಿಕ್‌ಗೆ 40 ಸಾವಿರ ರೂ. ದಂಡ ವಿಧಿಸಲಾಗಿದೆ. ಉಳಿದಂತೆ ತಲಶ್ಶೇರಿ ರೆಸ್ಟೋರೆಂಟ್‌ಗೆ 20 ಸಾವಿರ ರೂ., ನಂದನ ಪ್ಯಾಲೇಸ್‌ಗೆ 15 ಸಾವಿರ ರೂ. ಮತ್ತು ಚಿಕ್ಕಪೇಟೆ ಡೋಣ್ಣೆ ಬಿರಿಯಾನಿಗೆ 5 ಸಾವಿರ ರೂ. ಪೆನಾಲ್ಟಿ ಹಾಕಲಾಗಿದ್ದು, ಸ್ವಾತಿ ಹೋಟೆಲ್‌ಗೆ ಸುಧಾರಿಸಿಕೊಳ್ಳಲು ಅಂತಿಮ ನೋಟಿಸ್ ನೀಡಲಾಗಿದೆ. ಈ ಕಾರ್ಯಾಚರಣೆಯ ವರದಿಯನ್ನು ಪಾಲಿಕೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷ್ಯ ಮುಂದುವರಿದರೆ ಉದ್ಯಮದ ಪರವಾನಗಿಯನ್ನೇ ರದ್ದು ಮಾಡುವುದಾಗಿ ಆರೋಗ್ಯ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ.

ಇದನ್ನೂ ಓದಿ: ಮೈಸೂರು ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಯತೀಂದ್ರ ನೇಮಕ: ಸಿದ್ದರಾಮಯ್ಯ ವಿರುದ್ಧ ಹಿರಿಯ ನಾಯಕ ಎಚ್. ವಿಶ್ವನಾಥ್ ಕೆಂಡಾಮಂಡಲ!

Leave a Reply

Your email address will not be published. Required fields are marked *