TOP NEWS

Indira Canteen: ಸ್ಟಾರ್ ಹೋಟೆಲ್ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ಗಳಿಗೂ ಶಾಕ್: ಅಡುಗೆ ಮನೆಯಲ್ಲೇ ಹೆಗ್ಗಣ ಪತ್ತೆ, ಗೊಟ್ಟಿಗೆರೆ ಕ್ಯಾಂಟೀನ್ ಸೀಜ್!

Bengaluru Crackdown Gottigere Indira Canteen Snagged and Sealed After Rats Prowl in Dirty Kitchen

ಬೆಂಗಳೂರು: ಐಷಾರಾಮಿ ಪಂಚತಾರಾ ಹೋಟೆಲ್‌ಗಳಿಗೆ ಶಾಕ್ ನೀಡಿದ್ದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು, ಇದೀಗ ಬಡವರ ಹಸಿವು ನೀಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್’ಗಳ (Indira Canteen) ಅಡುಗೆಮನೆಗಳ ಮೇಲೆಯೂ ಗದಾಪ್ರಹಾರ ನಡೆಸಿದ್ದಾರೆ. ರಾಜಧಾನಿಯ ಹಲವೆಡೆ ಏಕಾಏಕಿ ದಾಳಿ ನಡೆಸಿ ತಪಾಸಣೆ ನಡೆಸಿದ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಸಿಗುವ ಆಹಾರದ ತಯಾರಿಕಾ ಸ್ಥಳಗಳ ಭೀಕರ ದುರಾವಸ್ಥೆ ಕಂಡು ಬೆಚ್ಚಿಬೀಳುವಂತಾಗಿದೆ.

ಹೆಗ್ಗಣ, ಇಲಿಗಳ ಕಾಟ: ಗೊಟ್ಟಿಗೆರೆ ಕ್ಯಾಂಟೀನ್ ಸೀಜ್! ನಗರದ ಗೊಟ್ಟಿಗೆರೆ, ಲಿಂಗರಾಜಪುರ ಸೇರಿದಂತೆ ವಿವಿಧ ಭಾಗಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಕೋಣೆಗಳಿಗೆ ಅಧಿಕಾರಿಗಳ ತಂಡ ಲಗ್ಗೆ ಇಟ್ಟಿತ್ತು. ಆಹಾರ ತಯಾರಿಸುವ ವಿಧಾನ, ಸಂಗ್ರಹಣಾ ವ್ಯವಸ್ಥೆ, ಬಳಸಲಾಗುತ್ತಿರುವ ತರಕಾರಿ, ಅಕ್ಕಿ, ಬೇಳೆ ಹಾಗೂ ಎಣ್ಣೆಯ ಗುಣಮಟ್ಟವನ್ನು ತೀವ್ರವಾಗಿ ಪರೀಕ್ಷಿಸಲಾಯಿತು. ಈ ವೇಳೆ ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಯಲ್ಲಿ ದೃಶ್ಯಾವಳಿಗಳು ಅತ್ಯಂತ ದಾರುಣವಾಗಿದ್ದವು. ಆಹಾರ ಪದಾರ್ಥಗಳ ನಡುವೆಯೇ ಇಲಿ ಮತ್ತು ಹೆಗ್ಗಣಗಳು ಓಡಾಡುತ್ತಿದ್ದುದು ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆ ಕ್ಯಾಂಟೀನ್ ಅನ್ನು ಲಾಕ್ ಮಾಡಿ ಸೀಜ್ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು, “ಕ್ಯಾಂಟೀನ್‌ನ ಅಡುಗೆ ಕೋಣೆಯಲ್ಲಿ ಕನಿಷ್ಠ ಸ್ವಚ್ಛತೆಯನ್ನೂ ಕಾಯ್ದುಕೊಂಡಿರಲಿಲ್ಲ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಕ್ಯಾಂಟೀನ್ ನಡೆಸುವ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ.

ಸ್ಟಾರ್ ಹೋಟೆಲ್‌ಗಳ ಬೆನ್ನಲ್ಲೇ ಕ್ಯಾಂಟೀನ್‌ಗಳಿಗೂ ಬಿಸಿ: ಕೆಲವೇ ದಿನಗಳ ಹಿಂದೆ ನಗರದ ಖ್ಯಾತ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ಮಾಡಿದ್ದ ಇಲಾಖೆಯು, ಅವಧಿ ಮುಗಿದ ಆಹಾರ ಸಾಮಗ್ರಿಗಳು, ಸರಿಯಾಗಿ ಸಂಸ್ಕರಿಸದ ಮಾಂಸ ಹಾಗೂ ಶಿಲೀಂಧ್ರ (Fungus) ತಗುಲಿದ್ದ ತರಕಾರಿಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಸ್‌ಎಐ (FSSAI) ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಿತ್ತು. ಶ್ರೀಮಂತರು ಉಣ್ಣುವ ಹೋಟೆಲ್‌ಗಳ ಬೆನ್ನಲ್ಲೇ, ಈಗ ಬಡವರಿಗಾಗಿ ಇರುವ ಇಂದಿರಾ ಕ್ಯಾಂಟೀನ್‌ಗಳ ಗುಣಮಟ್ಟದ ಮೇಲೆಯೂ ಅಧಿಕಾರಿಗಳು ಕಣ್ಣಿಟ್ಟಿರುವುದು ಗುತ್ತಿಗೆದಾರರಲ್ಲಿ ನಡುಕ ಹುಟ್ಟಿಸಿದೆ.

ಹೋಟೆಲ್‌ಗಳ ಬೆನ್ನಲ್ಲೇ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳಿಗೂ ಶಾಕ್

 ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಹಾಗೂ ಐಷಾರಾಮಿ ಹೋಟೆಲ್‌ಗಳ ಅಡುಗೆಮನೆಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಕಳಪೆ ಗುಣಮಟ್ಟವನ್ನು ಬಯಲಿಗೆಳೆದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು, ಇದೀಗ ತಮ್ಮ ಮುಂದಿನ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ. ಹೋಟೆಲ್‌ಗಳ ಕರ್ಮಕಾಂಡದ ಬೆನ್ನಲ್ಲೇ, ಸಾರ್ವಜನಿಕರು ಪ್ರತಿದಿನ ಅವಲಂಬಿಸಿರುವ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳು ಹಾಗೂ (Food Safety) ಕ್ಲೌಡ್ ಕಿಚನ್‌ಗಳತ್ತ ಅಧಿಕಾರಿಗಳ ಬಾಣ ನೆಟ್ಟಿದೆ. ಆನ್‌ಲೈನ್ ಮೂಲಕ ಗ್ರಾಹಕರ ಮನೆಬಾಗಿಲಿಗೆ ಬರುವ ಊಟ-ತಿಂಡಿಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ಇಲಾಖೆ ನಿರ್ಧರಿಸಿದೆ.

ಹದ್ದಿನ ಕಣ್ಣಿಡಲಿದ್ದಾರೆ ಅಧಿಕಾರಿಗಳು

ಆನ್‌ಲೈನ್ ನೆಟ್‌ವರ್ಕ್‌ನಲ್ಲಿ ಆಹಾರವನ್ನು ಹೇಗೆ ತಯಾರಿಸಲಾಗುತ್ತಿದೆ, ಯಾವ ರೀತಿ ಪ್ಯಾಕ್ ಮಾಡಲಾಗುತ್ತಿದೆ ಮತ್ತು ಗ್ರಾಹಕರ ಕೈ ಸೇರುವ ತನಕ ಅದರ ತಾಜಾತನ ಹೇಗೆ ಕಾಯ್ದುಕೊಳ್ಳಲಾಗುತ್ತಿದೆ ಎಂಬುದರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಡಲಿದ್ದಾರೆ. ಇದರ ಜೊತೆಗೆ, ಮುಂದಿನ ವಾರದಿಂದ ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ‘ಸೆಂಟ್ರಲೈಜ್ಡ್ ಕಿಚನ್’ಗಳ (ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಸುವ ಕೇಂದ್ರಗಳು) ಮೇಲೆ ವಿಶೇಷ ದಾಳಿ ನಡೆಸಲು ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ.

ಮುಂದಿನ ವಾರದಿಂದಲೇ ತಪಾಸಣೆ ಆರಂಭ

ನಗರದಲ್ಲಿರುವ ಇಂತಹ ಸೆಂಟ್ರಲೈಜ್ಡ್ ಕಿಚನ್‌ಗಳಲ್ಲಿ ಒಂದೇ ಸೂರಿನಡಿ ಭಾರಿ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಿ, ಅಲ್ಲಿಂದ ಬೇರೆ ಬೇರೆ ರೆಸ್ಟೋರೆಂಟ್‌ಗಳಿಗೆ ಹಾಗೂ ಆನ್‌ಲೈನ್ ಆರ್ಡರ್‌ಗಳ ಮೂಲಕ ಇಡೀ ನಗರಕ್ಕೆ ಸಪ್ಲೈ ಮಾಡಲಾಗುತ್ತದೆ. ಒಂದೇ ಜಾಗದಿಂದ ಸಾವಿರಾರು ಜನರಿಗೆ ಆಹಾರ ಪೂರೈಕೆಯಾಗುವುದರಿಂದ, ಅಲ್ಲಿನ ಸ್ವಚ್ಛತೆ, ತರಕಾರಿ ಹಾಗೂ ದಿನಸಿಗಳ ಗುಣಮಟ್ಟ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮತ್ತು ಸುರಕ್ಷತಾ ನಿಯಮಗಳ ಪಾಲನೆಯನ್ನು ಪರಿಶೀಲಿಸುವುದು ಅನಿವಾರ್ಯವಾಗಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಶ್ರೀನಿವಾಸ್ ಅವರು, ಮುಂದಿನ ವಾರದಿಂದಲೇ ಇಂತಹ ಬೃಹತ್ ಕಿಚನ್‌ಗಳ ತಪಾಸಣೆ ಆರಂಭವಾಗಲಿದೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ, ಕಳಪೆ ಮತ್ತು ಅಶುದ್ಧ ಆಹಾರ ನೀಡಿ ಸಾರ್ವಜನಿಕರ ಆರೋಗ್ಯದ ಜೊತೆ ಆಟ ಆಡುವ ಆನ್‌ಲೈನ್ ಸಂಸ್ಥೆಗಳು ಹಾಗೂ ಕಿಚನ್ ಮಾಲೀಕರಿಗೆ ಬಿಸಿ ಮುಟ್ಟಿಸಲು ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ.

ಇದನ್ನೂ ಓದಿ: ಆಗಸ್ಟ್ 13ರ ಕರ್ನಾಟಕ ಬಂದ್‌ಗೆ ಸಂಘಟನೆಗಳಲ್ಲೇ ಬಿರುಕು; ಆಟೋ ಚಾಲಕರ ತೀವ್ರ ವಿರೋಧದ ನಡುವೆಯೂ ವಾಟಾಳ್ ಹಠ!

Leave a Reply

Your email address will not be published. Required fields are marked *