TOP NEWS

Food Safety: ಹೋಟೆಲ್‌ಗಳ ಬೆನ್ನಲ್ಲೇ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳಿಗೂ ಶಾಕ್

Bengaluru Crackdown Food Safety Department to Storm Centralised Kitchens Screen Online Deliveries

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಹಾಗೂ ಐಷಾರಾಮಿ ಹೋಟೆಲ್‌ಗಳ ಅಡುಗೆಮನೆಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಕಳಪೆ ಗುಣಮಟ್ಟವನ್ನು ಬಯಲಿಗೆಳೆದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು, ಇದೀಗ ತಮ್ಮ ಮುಂದಿನ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ. ಹೋಟೆಲ್‌ಗಳ ಕರ್ಮಕಾಂಡದ ಬೆನ್ನಲ್ಲೇ, ಸಾರ್ವಜನಿಕರು ಪ್ರತಿದಿನ ಅವಲಂಬಿಸಿರುವ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳು ಹಾಗೂ (Food Safety) ಕ್ಲೌಡ್ ಕಿಚನ್‌ಗಳತ್ತ ಅಧಿಕಾರಿಗಳ ಬಾಣ ನೆಟ್ಟಿದೆ. ಆನ್‌ಲೈನ್ ಮೂಲಕ ಗ್ರಾಹಕರ ಮನೆಬಾಗಿಲಿಗೆ ಬರುವ ಊಟ-ತಿಂಡಿಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ಇಲಾಖೆ ನಿರ್ಧರಿಸಿದೆ.

ಹದ್ದಿನ ಕಣ್ಣಿಡಲಿದ್ದಾರೆ ಅಧಿಕಾರಿಗಳು

ಆನ್‌ಲೈನ್ ನೆಟ್‌ವರ್ಕ್‌ನಲ್ಲಿ ಆಹಾರವನ್ನು ಹೇಗೆ ತಯಾರಿಸಲಾಗುತ್ತಿದೆ, ಯಾವ ರೀತಿ ಪ್ಯಾಕ್ ಮಾಡಲಾಗುತ್ತಿದೆ ಮತ್ತು ಗ್ರಾಹಕರ ಕೈ ಸೇರುವ ತನಕ ಅದರ ತಾಜಾತನ ಹೇಗೆ ಕಾಯ್ದುಕೊಳ್ಳಲಾಗುತ್ತಿದೆ ಎಂಬುದರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಡಲಿದ್ದಾರೆ. ಇದರ ಜೊತೆಗೆ, ಮುಂದಿನ ವಾರದಿಂದ ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ‘ಸೆಂಟ್ರಲೈಜ್ಡ್ ಕಿಚನ್’ಗಳ (ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಸುವ ಕೇಂದ್ರಗಳು) ಮೇಲೆ ವಿಶೇಷ ದಾಳಿ ನಡೆಸಲು ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ.

ಮುಂದಿನ ವಾರದಿಂದಲೇ ತಪಾಸಣೆ ಆರಂಭ

ನಗರದಲ್ಲಿರುವ ಇಂತಹ ಸೆಂಟ್ರಲೈಜ್ಡ್ ಕಿಚನ್‌ಗಳಲ್ಲಿ ಒಂದೇ ಸೂರಿನಡಿ ಭಾರಿ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಿ, ಅಲ್ಲಿಂದ ಬೇರೆ ಬೇರೆ ರೆಸ್ಟೋರೆಂಟ್‌ಗಳಿಗೆ ಹಾಗೂ ಆನ್‌ಲೈನ್ ಆರ್ಡರ್‌ಗಳ ಮೂಲಕ ಇಡೀ ನಗರಕ್ಕೆ ಸಪ್ಲೈ ಮಾಡಲಾಗುತ್ತದೆ. ಒಂದೇ ಜಾಗದಿಂದ ಸಾವಿರಾರು ಜನರಿಗೆ ಆಹಾರ ಪೂರೈಕೆಯಾಗುವುದರಿಂದ, ಅಲ್ಲಿನ ಸ್ವಚ್ಛತೆ, ತರಕಾರಿ ಹಾಗೂ ದಿನಸಿಗಳ ಗುಣಮಟ್ಟ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮತ್ತು ಸುರಕ್ಷತಾ ನಿಯಮಗಳ ಪಾಲನೆಯನ್ನು ಪರಿಶೀಲಿಸುವುದು ಅನಿವಾರ್ಯವಾಗಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಶ್ರೀನಿವಾಸ್ ಅವರು, ಮುಂದಿನ ವಾರದಿಂದಲೇ ಇಂತಹ ಬೃಹತ್ ಕಿಚನ್‌ಗಳ ತಪಾಸಣೆ ಆರಂಭವಾಗಲಿದೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ, ಕಳಪೆ ಮತ್ತು ಅಶುದ್ಧ ಆಹಾರ ನೀಡಿ ಸಾರ್ವಜನಿಕರ ಆರೋಗ್ಯದ ಜೊತೆ ಆಟ ಆಡುವ ಆನ್‌ಲೈನ್ ಸಂಸ್ಥೆಗಳು ಹಾಗೂ ಕಿಚನ್ ಮಾಲೀಕರಿಗೆ ಬಿಸಿ ಮುಟ್ಟಿಸಲು ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ.

ಹೋಟೆಲ್‌ಗಳ ಕಳಪೆ ಕಿಚನ್‌ಗೆ ಆಹಾರ ಇಲಾಖೆ ಬ್ರೇಕ್: ಹಳಸಿದ ಊಟ, ಕೆಟ್ಟ ಮಾಂಸ ತಡೆಯಲು ಬರುತ್ತ್ ಫುಲ್ ಸ್ಟ್ರಿಕ್ಟ್ ಗೈಡ್‌ಲೈನ್ಸ್!

ಬೆಂಗಳೂರು: ರಾಜಧಾನಿಯ ಹೋಟೆಲ್‌ಗಳು, ಪಬ್‌ಗಳು, ಬಾರ್ ಹಾಗೂ ರೆಸ್ಟೋರೆಂಟ್‌ಗಳ ಅಡುಗೆಮನೆಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರದ ಸುರಕ್ಷತೆಗಾಗಿ ಆಹಾರ ಸುರಕ್ಷತಾ ಇಲಾಖೆ (FSSAI) ಅತ್ಯಂತ ಕಟ್ಟುನಿಟ್ಟಿನ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಭರದ ಸಿದ್ಧತೆ ನಡೆಸಿದೆ. ಇತ್ತೀಚೆಗೆ ನಗರದ 60ಕ್ಕೂ ಹೆಚ್ಚು ಪ್ರತಿಷ್ಠಿತ 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳ ಮೇಲೆ ಇಲಾಖೆ ನಡೆಸಿದ ಬಿರುಗಾಳಿ ದಾಳಿಯಲ್ಲಿ ಬರೋಬ್ಬರಿ 1,000 ಕೆಜಿಗಿಂತಲೂ ಹೆಚ್ಚು ಹಾಳಾದ ಆಹಾರ ಸಾಮಗ್ರಿ ಪತ್ತೆಯಾಗಿತ್ತು. ಫಂಗಸ್ ಹಿಡಿದ ತರಕಾರಿಗಳು, ಕೊಳೆತ ಮಾಂಸ ಹಾಗೂ ಅವಧಿ ಮೀರಿದ ಡೈರಿ ಉತ್ಪನ್ನಗಳನ್ನು ಬಳಸಿ ಅಡುಗೆ ಮಾಡುತ್ತಿದ್ದ ದೃಶ್ಯಗಳು ಬಯಲಿಗೆ ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಇನ್ನು ಮುಂದೆ ಹೋಟೆಲ್‌ಗಳಲ್ಲಿ ಆಹಾರವನ್ನು ಎಷ್ಟು ದಿನ ಇಟ್ಟುಕೊಳ್ಳಬೇಕು, ಫ್ರೋಜನ್ ಆಹಾರ ಮತ್ತು ಚೀಸ್, ಬೆಣ್ಣೆ, ಮೊಸರಿನಂತಹ ಹಾಲಿನ ಉತ್ಪನ್ನಗಳನ್ನು ಹೇಗೆ ಸಂಗ್ರಹಿಸಬೇಕು ಎಂಬುದಕ್ಕೆ ಖಚಿತ ನಿಯಮಗಳನ್ನು ರೂಪಿಸಲಾಗುತ್ತಿದೆ. ಮುಖ್ಯವಾಗಿ, ಒಮ್ಮೆ ಕರಗಿಸಿದ (Defrost) ಫ್ರೋಜನ್ ಆಹಾರವನ್ನು ಮತ್ತೆ ಫ್ರೀಜರ್‌ನಲ್ಲಿಟ್ಟು ಬಳಸುವುದು ಪತ್ತೆಯಾದರೆ ಅಂತಹ ಹೋಟೆಲ್‌ಗಳಿಗೆ ದೊಡ್ಡ ದಂಡ ಬೀಳಲಿದೆ. ಹಾಗೆಯೇ, ಕಚ್ಚಾ ಮಾಂಸ, ಅರೆಬೇಯಿಸಿದ ಆಹಾರ ಮತ್ತು ಸಂಪೂರ್ಣ ಸಿದ್ಧವಾದ ಊಟವನ್ನು ಪ್ರತ್ಯೇಕವಾಗಿಯೇ ಇಡಬೇಕು. ಸಸ್ಯಾಹಾರ ಮತ್ತು ಮಾಂಸಾಹಾರದ ನಿರ್ವಹಣೆಗೂ ಪ್ರತ್ಯೇಕ ವ್ಯವಸ್ಥೆ ಕಡ್ಡಾಯವಾಗುವ ಸಾಧ್ಯತೆಯಿದೆ.

ಅಡುಗೆ ಎಣ್ಣೆ ಮರುಬಳಕೆ ಮತ್ತು ತಾಪಮಾನಕ್ಕೆ ಹೊಸ ಗಡಿ:

ಹೋಟೆಲ್‌ಗಳಲ್ಲಿ ಒಂದೇ ಎಣ್ಣೆಯನ್ನು ಪದೇ ಪದೇ ಕಾಯಿಸಿ ಬಳಸುವುದಕ್ಕೂ ಅಧಿಕಾರಿಗಳು ಬ್ರೇಕ್ ಹಾಕುತ್ತಿದ್ದಾರೆ. ಬಳಸಿದ ಎಣ್ಣೆಯಲ್ಲಿನ ಟೋಟಲ್ ಪೋಲಾರ್ ಕಾಂಪೌಂಡ್ಸ್ (TPC) ಪ್ರಮಾಣ ಶೇಕಡಾ 25ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮವನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತದೆ. ಇದರೊಂದಿಗೆ ಆಹಾರವನ್ನು ನಿರ್ದಿಷ್ಟ ತಾಪಮಾನದಲ್ಲಿಡುವುದು ಕಡ್ಡಾಯವಾಗಲಿದೆ. ಬಿಸಿ ಆಹಾರವನ್ನು 65 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು, ನಾನ್‌ವೆಜ್ ಅನ್ನು 70 ಡಿಗ್ರಿ ಸೆಲ್ಸಿಯಸ್, ತಂಪು ಆಹಾರವನ್ನು 5 ಡಿಗ್ರಿ ಸೆಲ್ಸಿಯಸ್ ಹಾಗೂ ಫ್ರೋಜನ್ ಪದಾರ್ಥಗಳನ್ನು ಮೈನಸ್ 18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಇರಿಸಬೇಕಾಗುತ್ತದೆ. ಕಚ್ಚಾ ಮಾಂಸವನ್ನು 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬೇಕು ಮತ್ತು ಆಹಾರವನ್ನು ಮರುಬಿಸಿ ಮಾಡುವಾಗ ಅದು 75 ಡಿಗ್ರಿ ಸೆಲ್ಸಿಯಸ್ ತಲುಪಲೇಬೇಕು.

ಹಾಳಾದ ಅಥವಾ ಡೇಟ್ ಮುಗಿದ ಆಹಾರ ಪದಾರ್ಥಗಳನ್ನು ಕಿಚನ್‌ನಲ್ಲೇ ಇಟ್ಟುಕೊಂಡು ಗ್ರಾಹಕರಿಗೆ ಬಡಿಸುವುದನ್ನು ತಡೆಯಲು ಪ್ರತ್ಯೇಕ ಎಸ್‌ಒಪಿ (SOP) ಸಿದ್ಧವಾಗುತ್ತಿದೆ. ಹೋಟೆಲ್‌ಗೆ ದಿನಸಿ ಯಾವಾಗ ಬಂತು, ಅದನ್ನು ಹೇಗೆ ಇಡಲಾಗಿದೆ, ಯಾವಾಗ ಅಡುಗೆಗೆ ಬಳಸಲಾಯಿತು ಮತ್ತು ಹಾಳಾದದ್ದನ್ನು ಹೇಗೆ ವಿಲೇವಾರಿ ಮಾಡಲಾಯಿತು ಎಂಬುದಕ್ಕೆ ದಿನನಿತ್ಯದ ಲೇಬಲಿಂಗ್ ಹಾಗೂ ಶೆಲ್ಫ್ ಲೈಫ್ ದಾಖಲೆಗಳನ್ನು ಹೋಟೆಲ್‌ಗಳು ಕಡ್ಡಾಯವಾಗಿ ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ಹೊಸ ನಿಯಮಾವಳಿಗಳು ಜಾರಿಗೆ ಬಂದ ನಂತರವೂ ನಿಯಮ ಉಲ್ಲಂಘನೆ ಮುಂದುವರಿಸಿದರೆ ಅಂತಹ ಹೋಟೆಲ್‌ಗಳ ಲೈಸೆನ್ಸ್ ರದ್ದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಹಾರ ಸುರಕ್ಷತಾ ಇಲಾಖೆ ತೀರ್ಮಾನಿಸಿದೆ.

ಇದನ್ನೂ ಓದಿ: ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ

Leave a Reply

Your email address will not be published. Required fields are marked *