ಉತ್ತರಾಖಂಡ್: 2027ರ ಉತ್ತರಾಖಂಡ್ ವಿಧಾನಸಭೆ ಚುನಾವಣೆಗೆ ಭರವಸೆಯ ತಯಾರಿ ಆರಂಭಿಸಿರುವ ಬಿಜೆಪಿ, ರಾಜ್ಯದಲ್ಲಿ ಯುವಕರನ್ನು ತಲುಪಲು ಹೊಸ ತಂತ್ರ ರೂಪಿಸಿದೆ. ಇದರ ಭಾಗವಾಗಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya), ಹರಿದ್ವಾರದಿಂದ ಋಷಿಕೇಶದವರೆಗೆ 26 ಕಿಲೋಮೀಟರ್ಗಳ ಕಂವಾರ್ ಯಾತ್ರೆ ನಡೆಸಿದರು. ಸಂಸ್ಕೃತಿ, ಶ್ರದ್ಧೆ ಹಾಗೂ ಸೇವೆಯ ಮೂಲಕ ಯುವಜನತೆಯನ್ನು ತಲುಪುವ ಪಕ್ಷದ ಯೋಜನೆಯಲ್ಲಿ ಈ ಯಾತ್ರೆ ಪ್ರಮುಖ ಘಟ್ಟವಾಗಿದೆ.
ಗಂಗಾ ಸ್ನಾನ ಮಾಡಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ತೇಜಸ್ವಿ ಸೂರ್ಯ
ಹರಿದ್ವಾರದಲ್ಲಿ ಮುಂಜಾನೆ ಗಂಗಾ ಸ್ನಾನ ಮಾಡಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ತೇಜಸ್ವಿ ಸೂರ್ಯ, ಪವಿತ್ರ ಗಂಗಾಜಲ ತುಂಬಿದ ಕಂವಾರ್ ಹಿಡಿದು ಪಾದಯಾತ್ರೆ ಆರಂಭಿಸಿದರು. ಉತ್ತರಾಖಂಡ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಯುವ ಮೋರ್ಚಾ ಕಾರ್ಯಕರ್ತರು, ಸಾಧು-ಸಂತರು ಹಾಗೂ ಭಕ್ತರು ಇವರೊಂದಿಗೆ ಶ್ರದ್ಧೆಯಿಂದ ಭಾಗವಹಿಸಿದ್ದರು. “ಹರ್ ಹರ್ ಮಹಾದೇವ್” ಮತ್ತು “ಬೋಲ್ ಬಮ್” ಘೋಷಣೆಗಳ ನಡುವೆ ಸಾಗಿದ ಈ ಯಾತ್ರೆಯು ಋಷಿಕೇಶದ ಸ್ವರ್ಗಾಶ್ರಮದ ಶಿವಗಂಗಾ ಘಾಟ್ನಲ್ಲಿ ಮುಕ್ತಾಯಗೊಂಡಿತು. ಬಳಿಕ ವೀರಭದ್ರ ಮಹಾದೇವ ದೇವಾಲಯದಲ್ಲಿ ಜಲಾಭಿಷೇಕ ನೆರವೇರಿಸಲಾಯಿತು.
Ganga to Gavi Gangadhara.
— Tejasvi Surya (@Tejasvi_Surya) August 10, 2026
I began my Kanwar Yatra in Haridwar on Friday, carrying the sacred Ganga Jal to Rishikesh and offering it to Mahadev at the Veerabhadra Temple.
The Yatra completes its cycle with the final offering back home, at the Gavi Gangadhareshwara Temple in… pic.twitter.com/SNG0smkcor
ಯಾತ್ರೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಕನ್ವರ್ ಯಾತ್ರೆಯು ಜಗತ್ತಿನಲ್ಲೇ ಅತಿ ದೊಡ್ಡ ಯುವಜನರ ಧಾರ್ಮಿಕ ಪಯಣ ಎಂದು ಬಣ್ಣಿಸಿದರು. ಯಾವುದೇ ನಿರ್ದಿಷ್ಟ ಸಂಸ್ಥೆಯ ಆಡಳಿತವಿಲ್ಲದೆ, ಜಾತಿ-ಮಾತೃಭಾಷೆಯ ಭೇದವಿಲ್ಲದೆ ಲಕ್ಷಾಂತರ ಯುವಕರು ಒಂದಾಗಿ ನಡೆಸುವ ಈ ಶ್ರದ್ಧೆಯ ಪಯಣ ತಮಗೆ ಸದಾ ಸ್ಫೂರ್ತಿ ನೀಡಿದೆ ಎಂದರು. ದಕ್ಷಿಣ ಭಾರತದವನಾದ ತಮಗೆ ಕಳೆದ ಕೆಲವು ವರ್ಷಗಳಿಂದ ಗಂಗಾಜಲ ಹೊತ್ತು ನಡೆಯುವ ಆಸೆ ಇತ್ತು, ಅದು ಈಗ ಶಿವನ ಕೃಪೆಯಿಂದ ಈ ಶ್ರಾವಣ ಮಾಸದಲ್ಲಿ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಾಮಾನ್ಯ ಶಿವಭಕ್ತನಾಗಿ ಬಂದಿದ್ದೇನೆ ಎಂದ ಸಂಸದ
ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ, ಒಬ್ಬ ಸಾಮಾನ್ಯ ಶಿವಭಕ್ತನಾಗಿ ತಾವು ಇಲ್ಲಿಗೆ ಬಂದಿರುವುದಾಗಿ ತಿಳಿಸಿದ ಅವರು, ದೇಶದ ಯುವಜನತೆ ಸನಾತನ ಧರ್ಮದ ಜೊತೆ ನಿರಂತರ ಸಂಪರ್ಕದಲ್ಲಿರಬೇಕು ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕೆಂದು ಕರೆ ನೀಡಿದರು. ಯಾತ್ರೆಯುದ್ದಕ್ಕೂ ಯುವ ಮೋರ್ಚಾ ಕಾರ್ಯಕರ್ತರು ಸ್ವಚ್ಛತಾ ಅಭಿಯಾನ ನಡೆಸಿದ್ದಲ್ಲದೆ, ಋಷಿಕೇಶದ ಗಂಗಾ ನದಿಯ ದಂಡೆಯಲ್ಲಿ ಭಜನೆ-ಕೀರ್ತನೆಗಳ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದರು.
ಈ ಯಾತ್ರೆಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡಲಾಗುತ್ತಿದ್ದರೂ, ರಾಜಕೀಯ ವಿಶ್ಲೇಷಕರು ಇದನ್ನು 2027ರ ಉತ್ತರಾಖಂಡ್ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ನಡೆ ಎಂದು ವಿಶ್ಲೇಷಿಸುತ್ತಿದ್ದಾರೆ. ಯುವ ಮತದಾರರನ್ನು ಸೆಳೆಯಲು ಬಿಜೆಪಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಾದಿಯನ್ನು ಆಯ್ಕೆ ಮಾಡಿಕೊಂಡಿದೆ. ಉತ್ತರಾಖಂಡ್ ಕ್ರೀಡಾ ಸಚಿವೆ ರೇಖಾ ಆರ್ಯ ಕೂಡ ಆಗಸ್ಟ್ 10 ರಂದು ಹರಿದ್ವಾರದಿಂದ ಕನ್ವರ್ ಯಾತ್ರೆ ಕೈಗೊಳ್ಳಲಿದ್ದು, ರಾಜ್ಯದಲ್ಲಿ ಕಾವಡ್ ಯಾತ್ರೆಯ ರಾಜಕೀಯ ಕಾವು ಜೋರಾಗಿದೆ.
ಇದನ್ನೂ ಓದಿ: ‘ಟರ್ಕಿ, ಪಾಕ್ ಜತೆಗಿನ ಕಾಗದದ ಒಪ್ಪಂದದಿಂದ ಸೌದಿಗೆ ಭದ್ರತೆ ಸಿಗಲ್ಲ’: ಇರಾನ್ ಸಂಸದ ತೀಕ್ಷ್ಣ ವಾಗ್ದಾಳಿ!
