TOP NEWS

Allu Arjun: ಅಭಿಮಾನಿಗಳಿಗೆ ವಿಮೆ ಗಿಫ್ಟ್ ನೀಡಿದ ಅಲ್ಲು ಅರ್ಜುನ್: ನೆಗೆಟಿವಿಟಿ, ಟ್ರೋಲ್‌ಗಳಿಂದ ದೂರವಿರಿ ಎಂದು ಐಕಾನ್ ಸ್ಟಾರ್ ಕಿವಿಮಾತು!

Allu Arjun Gifts Insurance to Fans Urges Them to Stay Away From Negativity and Trolls

ಹೈದರಾಬಾದ್:‌ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ತಮ್ಮ ಅಖಿಲ ಭಾರತ ಅಭಿಮಾನಿ ಸಂಘದ (AAFA) ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ, ತಮಗೆ ಪ್ರಾಣಪ್ರಿಯರಾಗಿರುವ ಅಭಿಮಾನಿಗಳಿಗೆ ವಿಶೇಷ ವಿಮಾ ಸೌಲಭ್ಯವನ್ನು ಘೋಷಿಸಿದ್ದಾರೆ. ಇದೇ ವೇಳೆ ನೆರೆದಿದ್ದ ಬೃಹತ್ ಅಭಿಮಾನಿ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ಸಮಯ ಮತ್ತು ಶಕ್ತಿಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬ ಬಗ್ಗೆ ಅತ್ಯಮೂಲ್ಯ ಸಂದೇಶ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿರುವ ನೆಗೆಟಿವಿಟಿ, ದ್ವೇಷ ಸಾಧನೆ ಮತ್ತು ಟ್ರೋಲಿಂಗ್‌ಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ನಟ, ಇಂತಹ ಅನಗತ್ಯ ವಿಷಯಗಳಿಗಾಗಿ ತಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ ಎಂದು ಕರೆ ನೀಡಿದ್ದಾರೆ.

ಅಭಿಮಾನದ ಕಿಚ್ಚು ಹೀಗೆಯೇ ಸದಾ ಜೀವಂತವಾಗಿರಲಿ

‘ಎಎಫ್‌ಎ ವಾರ್ಷಿಕ ಶೃಂಗಸಭೆ 2026’ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ದೇಶದ ಹಲವು ರಾಜ್ಯಗಳ ಅಭಿಮಾನಿ ಸಂಘದ ನಾಯಕರು ಹಾಗೂ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳ ಪ್ರೀತಿಯನ್ನು ಕಂಡು ಭಾವುಕರಾದ ಅಲ್ಲು ಅರ್ಜುನ್, “ನಿಮ್ಮನ್ನೆಲ್ಲಾ ಇಲ್ಲಿ ಒಟ್ಟಿಗೆ ನೋಡುತ್ತಿದ್ದರೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಇಲ್ಲಿಗೆ ಬಂದಿರುವ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನಿಮ್ಮೊಳಗಿನ ಈ ಅಭಿಮಾನದ ಕಿಚ್ಚು ಹೀಗೆಯೇ ಸದಾ ಜೀವಂತವಾಗಿರಲಿ” ಎಂದು ಹುರಿದುಂಬಿಸಿದರು.

ಇದೇ ಸಂದರ್ಭದಲ್ಲಿ ಮನುಷ್ಯನ ಸಮಯ ಮತ್ತು ಶಕ್ತಿಯನ್ನು ಮೊಬೈಲ್ ಬ್ಯಾಟರಿಗೆ ಹೋಲಿಸಿ ಮಾತನಾಡಿದ ಅವರು, “ಪ್ರತಿಯೊಬ್ಬ ವ್ಯಕ್ತಿಗೂ ಸೀಮಿತ ಸಮಯ ಮತ್ತು ಶಕ್ತಿ ಮಾತ್ರ ಇರುತ್ತದೆ. ನಮ್ಮ ಜೀವನವನ್ನು ಒಂದು ಬ್ಯಾಟರಿಯಂತೆ ಯೋಚಿಸಿ. ಪ್ರತಿದಿನ ಮುಂಜಾನೆ ನಾವು ಎದ್ದಾಗ ನಮ್ಮ ಬ್ಯಾಟರಿ 100 ಪ್ರತಿಶತ ಚಾರ್ಜ್ ಆಗಿರುತ್ತದೆ. ದಿನ ಕಳೆದಂತೆ ಆ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಈ ನೂರು ಪ್ರತಿಶತ ಎನ್ನುವುದನ್ನು ನೀವು ಸಮಯ, ಶಕ್ತಿ, ವಿದ್ಯಾಭ್ಯಾಸದ ಅಂಕಗಳು ಅಥವಾ ಹಣ ಎಂದು ಭಾವಿಸಬಹುದು. ಆದರೆ ಇಷ್ಟೊಂದು ಅಮೂಲ್ಯವಾದ ಶಕ್ತಿಯನ್ನು ನಾವು ಎಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂಬುದು ಮುಖ್ಯ” ಎಂದು ವಿವರಿಸಿದರು.

ಮುಂದುವರಿದು ಮಾತನಾಡಿದ ಅಲ್ಲು ಅರ್ಜುನ್, “ನಿಮಗೆ ಯಾರಾದರೂ ಇಷ್ಟವಾಗದಿದ್ದರೆ, ಅವರ ಬಗ್ಗೆ ದ್ವೇಷ ಸಾಧಿಸುವುದು, ಅವರನ್ನು ಟ್ರೋಲ್ ಮಾಡುವುದು ಅಥವಾ ಅವರ ಬಗ್ಗೆ ಮಾತನಾಡುವುದರಲ್ಲಿ ನಿಮ್ಮ ಸಮಯವನ್ನು ಹಾಳು ಮಾಡಬೇಡಿ. ನಿಮಗೆ ಇಷ್ಟವಿಲ್ಲದ ವಿಷಯಕ್ಕಾಗಿ ನಿಮ್ಮ ಶಕ್ತಿಯ ಕೇವಲ ಒಂದು ಪ್ರತಿಶತವನ್ನೂ ವ್ಯರ್ಥ ಮಾಡಬೇಡಿ. ನಿಮ್ಮ ಜೇಬಿನಲ್ಲಿ 100 ರೂಪಾಯಿ ಇದ್ದರೆ, ಅದನ್ನು ನಿಮಗೆ ಬೇಡದ ವಸ್ತುವಿನ ಮೇಲೆ ಖರ್ಚು ಮಾಡುತ್ತೀರಾ? ಖಂಡಿತ ಇಲ್ಲ. ಹಾಗಿರುವಾಗ ನಿಮಗೆ ಸಂತೋಷ ನೀಡದ ವಿಷಯಗಳಿಗಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಏಕೆ ವ್ಯರ್ಥ ಮಾಡುತ್ತೀರಿ? ಅದರ ಬದಲು ನಿಮಗೆ ಖುಷಿ ಕೊಡುವ, ನೀವು ಪ್ರೀತಿಸುವ ಕೆಲಸಗಳ ಮೇಲೆ ಆ ಶಕ್ತಿಯನ್ನು ವಿನಿಯೋಗಿಸಿ” ಎಂದು ಕಿವಿಮಾತು ಹೇಳಿದರು.

ವಿಶೇಷ ವಿಮಾ ಯೋಜನೆ ಜಾರಿಗೆ

ಇನ್ನು ಈ ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಅಭಿಮಾನಿ ಸಂಘದ ಸದಸ್ಯರ ಸುರಕ್ಷತೆಗಾಗಿ ವಿಶೇಷ ವಿಮಾ ಯೋಜನೆಯನ್ನು ಜಾರಿಗೆ ತರಲಾಯಿತು. ಇದು ಕಷ್ಟಕಾಲದಲ್ಲಿ ಅಭಿಮಾನಿಗಳ ಕುಟುಂಬಕ್ಕೆ ಆಸರೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾಗಳ ವಿಷಯಕ್ಕೆ ಬಂದರೆ, ಅಲ್ಲು ಅರ್ಜುನ್ ಸದ್ಯ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಾಕಾ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ: ರಾವಣನಾಗಿ ಅಬ್ಬರಿಸಿದ ಯಶ್‌, ಪತಿಯ ಹೊಸ ಅವತಾರ ಕಿಚಾಯಿಸಿದ ರಾಧಿಕಾ ಪಂಡಿತ್!

Leave a Reply

Your email address will not be published. Required fields are marked *