ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯವನ್ನು ವ್ಯಾಪಾರೀಕರಣಗೊಳಿಸಲು ಯತ್ನಿಸಿದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಡೆ ಈಗ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ತಿರುಪತಿ ಹೆದ್ದಾರಿಯ ಬಳಿ ಇರುವ ತಮ್ಮ ಲೇಔಟ್‌ನಲ್ಲಿ ಸೈಟ್ ಖರೀದಿಸುವ ಗ್ರಾಹಕರಿಗೆ ಆಜೀವ ಪರ್ಯಂತ ‘ಶ್ರೀವಾರಿ ವಿಐಪಿ ಬ್ರೇಕ್ ದರ್ಶನ’ ಕೊಡಿಸುವುದಾಗಿ ಎಸ್‌ಸಿಪಿ ಡೆವಲಪರ್ಸ್ (SCP Developers) ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ದೇವರ ದರ್ಶನವನ್ನೇ ಆಮಿಷವನ್ನಾಗಿ ಬಳಸಿಕೊಂಡ ಈ ವಂಚನೆಯ ಜಾಹೀರಾತು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆಯೇ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಏನಿತ್ತು ಜಾಹೀರಾತಿನಲ್ಲಿ?
ಖಾಸಗಿ ಸಂಸ್ಥೆಯು ಬಿಡುಗಡೆ ಮಾಡಿದ್ದ ರೀಲ್ಸ್ ಹಾಗೂ ಜಾಹೀರಾತುಗಳಲ್ಲಿ, ನಿವೇಶನ ಕಾಯ್ದಿರಿಸುವ ಭಕ್ತರಿಗೆ ಲೈಫ್‌ಟೈಮ್ ವಿಐಪಿ ದರ್ಶನದ ಗ್ಯಾರಂಟಿ ನೀಡಲಾಗುವುದು ಎಂದು ಬಿಂಬಿಸಲಾಗಿತ್ತು. ಅಲ್ಲದೆ ಈ ಆಫರ್ ಪಡೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ತಿಳಿಯಲು ತಮ್ಮನ್ನು ಸಂಪರ್ಕಿಸುವಂತೆ ಕಂಪನಿಯು ಕೋರಿತ್ತು. ಪವಿತ್ರ ದೇವಸ್ಥಾನದ ಹೆಸರನ್ನು ಇಟ್ಟುಕೊಂಡು ಗ್ರಾಹಕರನ್ನು ಸೆಳೆಯಲು ಉದ್ಯಮ ಸಂಸ್ಥೆಯು ನಡೆಸಿದ ಈ ಗಿಮಿಕ್ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಖಡಕ್ ಸ್ಪಷ್ಟನೆ ನೀಡಿದ ಟಿಟಿಡಿ
ಈ ದಾರಿತಪ್ಪಿಸುವ ಜಾಹೀರಾತು ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಟಿಟಿಡಿ, ಸದರಿ ರಿಯಲ್ ಎಸ್ಟೇಟ್ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದೆ. ಅಲ್ಲದೆ, ತಿರುಮಲ ಬೆಟ್ಟದಲ್ಲಿ ವಿಐಪಿ ದರ್ಶನ ಕಲ್ಪಿಸುವ ಅಧಿಕಾರ ಯಾರಿಗೂ ಇಲ್ಲ ಮತ್ತು ಇಂತಹ ಯಾವುದೇ ಖಾಸಗಿ ಸಂಸ್ಥೆಗಳೊಂದಿಗೆ ದೇವಸ್ಥಾನ ಮಂಡಳಿಗೆ ಯಾವುದೇ ರೀತಿಯ ಒಪ್ಪಂದ ಅಥವಾ ನಂಟು ಇಲ್ಲ ಎಂದು ಖಡಕ್ ಆಗಿ ಸ್ಪಷ್ಟಪಡಿಸಿದೆ.
ತಿರುಪತಿ ತಿಮ್ಮಪ್ಪನ ದರ್ಶನ ವ್ಯವಸ್ಥೆ, ವಿಶೇಷ ಸೇವೆಗಳು ಹಾಗೂ ಟಿಕೆಟ್ ವಿತರಣೆಗಳು ಸಂಪೂರ್ಣವಾಗಿ ಟಿಟಿಡಿಯ ಅಧಿಕೃತ ನಿಯಮಾವಳಿ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳ ಅಡಿಯಲ್ಲೇ ನಡೆಯುತ್ತವೆ. ಯಾವುದೇ ಮಧ್ಯವರ್ತಿಗಳಾಗಲಿ ಅಥವಾ ಖಾಸಗಿ ಕಂಪನಿಗಳಾಗಲಿ ದರ್ಶನದ ಭರವಸೆ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಹೀಗಾಗಿ, ದೇವರ ಹೆಸರಿನಲ್ಲಿ ಬರುವ ಇಂತಹ ಯಾವುದೇ ಸುಳ್ಳು ಆಫರ್‌ಗಳು ಅಥವಾ ಆಮಿಷಗಳನ್ನು ನಂಬಿ ಸಾರ್ವಜನಿಕರು ಹಾಗೂ ಭಕ್ತರು ಹಣ ಕಳೆದುಕೊಂಡು ಮೋಸ ಹೋಗಬಾರದು ಎಂದು ಟಿಟಿಡಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.
ಇದನ್ನೂ ಓದಿ: ಆಷಾಢದ ಮೊದಲ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಸಡಗರ, ವಿಶೇಷ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ನಾಡ ಅಧಿದೇವತೆ!
