ನವದೆಹಲಿ: ಸ್ವಿಗ್ಗಿ ಸಂಸ್ಥೆಯ ಕ್ವಿಕ್ ಕಾಮರ್ಸ್ ವಿಭಾಗವಾದ ‘ಇನ್‌ಸ್ಟಾಮಾರ್ಟ್’ನ (Swiggy) ಆಡಳಿತ ಮಂಡಳಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಪ್ರಸ್ತುತ ಸಿಇಒ ಆಗಿರುವ ಅಮಿತೇಶ್ ಕುಮಾರ್ ಝಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಕಂಪನಿಯಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಅವರ ಜಾಗಕ್ಕೆ ಮಿಂಟ್ರಾ ಸಂಸ್ಥೆಯ ಮಾಜಿ ಸಿಇಒ ನಂದಿತಾ ಸಿನ್ಹಾ ಅವರನ್ನು ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಸ್ವಿಗ್ಗಿ ನೇಮಕ ಮಾಡಿದೆ. ಆಸಕ್ತಿದಾಯಕ ವಿಚಾರವೆಂದರೆ, ಜುಲೈ 28 ರಂದು ಅಮಿತೇಶ್ ತಮ್ಮ ರಾಜೀನಾಮೆ ಸಲ್ಲಿಸಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ಜವಾಬ್ದಾರಿಗಳಿಂದ ನಿರ್ಗಮಿಸಿದ್ದಾರೆ. ನಂದಿತಾ ಸಿನ್ಹಾ ಅವರು ಆಗಸ್ಟ್ 3, 2026 ರಿಂದ ಅಧಿಕೃತವಾಗಿ ಇನ್‌ಸ್ಟಾಮಾರ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಎರಡು ದಶಕಗಳ ಅನುಭವ ಇರುವ ಹೊಸ ಸಿಇಓ
ಹೊಸ ಸಿಇಒ ಆಗಿ ಆಯ್ಕೆಯಾಗಿರುವ ನಂದಿತಾ ಸಿನ್ಹಾ ಅವರಿಗೆ ಇ ಕಾಮರ್ಸ್ ಮತ್ತು ಎಫ್‌ಎಮ್‌ಸಿಜಿ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಅನುಭವವಿದೆ. ಮಿಂಟ್ರಾ, ಫ್ಲಿಪ್‌ಕಾರ್ಟ್, ಬ್ರಿಟಾನಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ಪ್ರಮುಖ ಕಂಪನಿಗಳಲ್ಲಿ ಅವರು ಹಿರಿಯ ನಾಯಕತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸ್ವಗ್ಗಿ ಗ್ರೂಪ್ ಸಿಇಒ ಶ್ರೀಹರ್ಷ ಮೆಜೆಟಿ ನಂದಿತಾ ಅವರ ಅನುಭವವನ್ನು ಶ್ಲಾಘಿಸಿದ್ದು, ಇನ್‌ಸ್ಟಾಮಾರ್ಟ್ ಬೆಳವಣಿಗೆಗೆ ಅವರ ನಾಯಕತ್ವ ಹೊಸ ವೇಗ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಿರ್ಗಮಿತ ಸಿಇಒ ಅಮಿತೇಶ್ ಝಾ ಅವರ ಕೊಡುಗೆಯನ್ನೂ ಸ್ಮರಿಸಿರುವ ಕಂಪನಿಯು ಅವರಿಗೆ ಧನ್ಯವಾದ ತಿಳಿಸಿದೆ.
ಸ್ವಿಗ್ಗಿಯಿಂದ ಅನೇಕರು ಔಟ್?
ಇತ್ತೀಚಿನ ದಿನಗಳಲ್ಲಿ ಸ್ವಗ್ಗಿ ಸಂಸ್ಥೆಯಿಂದ ಅನೇಕ ಹಿರಿಯ ಅಧಿಕಾರಿಗಳು ಹೊರನಡೆದಿದ್ದು, ಈ ರಾಜೀನಾಮೆ ಸರಣಿಗೆ ಅಮಿತೇಶ್ ಅವರ ನಿರ್ಗಮನ ಹೊಸ ಸೇರ್ಪಡೆಯಾಗಿದೆ. ಈ ಮೊದಲು ಕಂಪನಿಯ ಕಾರ್ಯದರ್ಶಿ ಎಂ. ಶ್ರೀಧರ್, ಸ್ವತಂತ್ರ ನಿರ್ದೇಶಕ ಸಾಹಿಲ್ ಬರುವಾ, ಸಹ-ಸಂಸ್ಥಾಪಕ ಲಕ್ಷ್ಮೀ ನಂದನ್ ರೆಡ್ಡಿ ಸೇರಿದಂತೆ ಹಲವು ಪ್ರಮುಖ ನಾಯಕರು ರಾಜೀನಾಮೆ ನೀಡಿದ್ದರು. ಈ ಎಲ್ಲ ಸವಾಲುಗಳ ನಡುವೆಯೂ ಹೊಸ ಸಿಇಒ ನಂದಿತಾ ಸಿನ್ಹಾ ಅವರ ಆಗಮನದಿಂದ ಇನ್‌ಸ್ಟಾಮಾರ್ಟ್ ಕಿರಾಣಿ ಹಾಗೂ ಶೀಘ್ರ ತಲುಪಿಸುವ ವ್ಯಾಪಾರ ಕ್ಷೇತ್ರದಲ್ಲಿ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.
ಇದನ್ನೂ ಓದಿ: ಕೇವಲ ₹5,600 ಹೂಡಿಕೆಯಿಂದ ₹420 ಕೋಟಿ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಕನಿಕಾ ಟೇಕ್ರಿವಾಲ್
