ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಗ್ಧ (Crime) ಸಾರ್ವಜನಿಕರನ್ನು ವಂಚಿಸಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಲು ಖದೀಮರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ವಿಶೇಷವಾಗಿ ಬಿಎಂಟಿಸಿ ಬಸ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೈಚಳಕ ತೋರುತ್ತಿರುವ ‘ವಾಂತಿ ಗ್ಯಾಂಗ್’ ಮತ್ತು ಮಧ್ಯರಾತ್ರಿ ವಸತಿ ಪ್ರದೇಶಗಳಲ್ಲಿ ದರೋಡೆಗೆ ಇಳಿಯುತ್ತಿರುವ ‘ಮುಸುಕುಧಾರಿ ಕಳ್ಳರ’ ಹಾವಳಿ ನಗರದಲ್ಲಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ದಂದೆಗಳ ವಿರುದ್ಧ ಅಲರ್ಟ್ ಆಗಿರುವ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಕಟಕಟೆಗೆ ತಳ್ಳಿದ್ದಾರೆ.
ಏನಿದು ‘ವಾಂತಿ ಗ್ಯಾಂಗ್’ ತಂತ್ರ?: ಬಸ್ಸುಗಳಲ್ಲಿ ಕಿಟಕಿ ಬದಿಯ ಸೀಟುಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರೇ ಈ ಜಾಲದ ಪ್ರಮುಖ ಟಾರ್ಗೆಟ್. ಬಸ್ ಹತ್ತಿ ಪ್ರಯಾಣಿಕರ ಬಳಿ ಬರುವ ಈ ಖದೀಮರು, ತಮಗೆ ವಾಂತಿ ಬರುತ್ತಿದೆ ಎಂದು ನಾಟಕವಾಡಿ ಸೀಟು ಬಿಟ್ಟುಕೊಡುವಂತೆ ವಿನಂತಿಸುತ್ತಾರೆ. ಗಾಬರಿಯಿಂದ ಪ್ರಯಾಣಿಕರು ಎದ್ದು ಜಾಗ ಬಿಡುವಾಗ, ಬಸ್ಸಿನ ರಶ್ ಬಳಸಿಕೊಂಡು ತಂಡದ ಇತರ ಸದಸ್ಯರು ಮುಗಿಬೀಳುತ್ತಾರೆ. ಈ ತಳ್ಳಾಟದ ಗೊಂದಲದಲ್ಲೇ ಪ್ರಯಾಣಿಕರ ಜೇಬಿನಲ್ಲಿದ್ದ ಪರ್ಸ್, ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ಅತ್ಯಂತ ಜಾಣ್ಮೆಯಿಂದ ಎಗರಿಸಿ, ಮುಂದಿನ ನಿಲ್ದಾಣದಲ್ಲೇ ಯಾರಿಗೂ ಅನುಮಾನ ಬಾರದಂತೆ ಜಾರಿಕೊಳ್ಳುತ್ತಾರೆ.
ಇಬ್ಬರು ಕಳ್ಳರು ಅರೆಸ್ಟ್, ತನಿಖೆ ತೀವ್ರ: ಈ ವಿಶಿಷ್ಟ ಮಾದರಿಯ ಕಳ್ಳತನದ ಕುರಿತು ನಗರದ ಸೆಂಟ್ರಲ್ ಡಿವಿಷನ್ ಸೇರಿದಂತೆ ಪ್ರಮುಖ ವಲಯಗಳಲ್ಲಿ ದೂರುಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮುಬಾರಕ್ ಪಾಶಾ ಮತ್ತು ಅನ್ವರ್ ಪಾಶಾ ಎಂಬ ಇಬ್ಬರು ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಬೇರೆ ಬೇರೆ ಠಾಣೆಗಳಲ್ಲಿದ್ದ ಇವರ ಮೇಲಿನ ಪ್ರಕರಣಗಳನ್ನು ಸದ್ಯ ಹೆಚ್ಚಿನ ತನಿಖೆಗಾಗಿ ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತಲೆಮರೆಸಿಕೊಂಡಿರುವ ಗ್ಯಾಂಗ್‌ನ ಉಳಿದ ಮೂವರು ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಡ್‌ಶೀಟ್ ಹೊದ್ದು ಬಂದ ಮುಸುಕುಧಾರಿಗಳು: ಬಸ್ ಕಳ್ಳರ ಅಬ್ಬರದ ನಡುವೆಯೇ ನಗರದ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಬೇಗೂರು ಕೊಪ್ಪ ಹಾಗೂ ಮೈಲಸಂದ್ರ ಭಾಗದಲ್ಲಿ ಮನೆಗಳ ಕಳ್ಳತನ ಪ್ರಕರಣಗಳೂ ವರದಿಯಾಗಿವೆ. ಇಲ್ಲಿನ ‘ಗ್ರೀನ್ ವ್ಯಾಲಿ ಲೇಔಟ್’ನಲ್ಲಿ ಮಧ್ಯರಾತ್ರಿ ಮೈ ತುಂಬಾ ಬೆಡ್‌ಶೀಟ್ ಹಾಗೂ ಟವೆಲ್ ಹೊದ್ದುಕೊಂಡು ಬಂದ ಒಟ್ಟು 8 ಮಂದಿ ಮುಸುಕುಧಾರಿ ಕಳ್ಳರು ಮನೆಗಳ ಬೀಗ ಮುರಿಯಲು ಯತ್ನಿಸಿದ್ದಾರೆ. ಖದೀಮರ ಈ ಸಂಶಯಾಸ್ಪದ ಓಡಾಟದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಠಾತ್ ದಾಳಿ: ಕೃಷಿ ತಜ್ಞನ ಸೋಗಿನಲ್ಲಿ ನಕಲಿ ಕೀಟನಾಶಕ ಮಾರುತಿದ್ದ ಖದೀಮ ವಶಕ್ಕೆ!
