ಶ್ರೀಕಾಕುಲಂ (ಆಂಧ್ರಪ್ರದೇಶ): ಆಂಧ್ರಪ್ರದೇಶದ (Andra Pradesh) ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ವೈಎಸ್ಆರ್ಸಿಪಿ ಎಂಎಲ್ಸಿ ದುವ್ವಾಡ ಶ್ರೀನಿವಾಸ್ ಅವರು ದಿಢೀರನೆ ನಾಪತ್ತೆಯಾಗಿದ್ದು, ಶ್ರೀಕಾಕುಲಂ ಜಿಲ್ಲೆಯಲ್ಲಿ ಭಾರಿ ರಾಜಕೀಯ ಉದ್ವಿಗ್ನತೆ ಸೃಷ್ಟಿಸಿದೆ. ವಿಚಾರಣೆಗೆ ಹಾಜರಾಗಲು ತೆಕ್ಕಲಿಯಿಂದ ಕೊತ್ತೂರು ಪೊಲೀಸ್ ಠಾಣೆಗೆ ಹೊರಟಿದ್ದ ಅವರು ನಿಗದಿತ ಸಮಯಕ್ಕೆ ಅಲ್ಲಿಗೆ ತಲುಪದೆ ಇದ್ದುದರಿಂದ ಹೈಡ್ರಾಮಾ ಶುರುವಾಗಿದೆ. ದುವ್ವಾಡ ಶ್ರೀನಿವಾಸ್ ಅವರು ತಮ್ಮ ನಿವಾಸದಿಂದ ಖಾಸಗಿ ವಾಹನದಲ್ಲಿ ಹೊರಟಿದ್ದರಾದರೂ ಮಾರ್ಗಮಧ್ಯೆ ಎಲ್ಲಿಗೆ ಹೋದರು ಎಂಬುದು ರಹಸ್ಯವಾಗಿಯೇ ಉಳಿದಿದೆ. ಅವರು ಸ್ವತಃ ತಾವೇ ವಾಹನವನ್ನು ಬದಲಾಯಿಸಿದ್ದಾರೆಯೇ, ಮಾರ್ಗ ಬದಲಿಸಿದ್ದಾರೆಯೇ ಅಥವಾ ಬೇರೆ ಕಡೆಗೆ ತೆರಳಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಪೊಲೀಸರಿಂದ ತನಿಖೆ ಆರಂಭ
ಈ ನಡುವೆ ಎಂಎಲ್ಸಿ ಅವರನ್ನು ಬಂಧಿಸಲಾಗಿದೆಯೇ ಅಥವಾ ವಶಕ್ಕೆ ಪಡೆಯಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ. ಸದ್ಯಕ್ಕೆ ಅವರ ಚಲನವಲನದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳನ್ನು ನಂಬಬಾರದು ಎಂದು ಕೊತ್ತೂರು ವೃತ್ತ ನಿರೀಕ್ಷಕ ಪ್ರಸಾದ್ ರಾವ್ ವಿನಂತಿಸಿದ್ದಾರೆ. ತನಿಖೆಯ ಆಧಾರದ ಮೇಲೆ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ತೆಕ್ಕಲಿಯಲ್ಲಿರುವ ಶ್ರೀನಿವಾಸ್ ಅವರ ನಿವಾಸದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಯಾವುದೇ ಕಾನೂನು ಸುವ್ಯವಸ್ಥೆ ಧಕ್ಕೆ ಬಾರದಂತೆ ನಿಗಾ ಇಡಲಾಗಿದೆ.
ರಾಜಕೀಯ ಪಿತೂರಿ ಆರೋಪ
ಮತ್ತೊಂದೆಡೆ, ಶ್ರೀನಿವಾಸ್ ಅವರ ಬೆಂಬಲಿಗರು ಮತ್ತು ಅವರ ಪತ್ನಿ ದಿವ್ವೆಲ ಮಾಧುರಿ ಅವರು ಈ ಇಡೀ ಬೆಳವಣಿಗೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ತಮ್ಮನ್ನು ಮನೆಯಿಂದ ಹೊರಗೆ ಹೋಗದಂತೆ ಕಟ್ಟಿಹಾಕಲಾಗಿದೆ ಎಂದು ಆಕ್ರೋಶ ಹೊರಹಾಕಿರುವ ಮಾಧುರಿ, ಶ್ರೀನಿವಾಸ್ ಅವರು ಎಲ್ಲಿದ್ದಾರೆ ಎಂಬುದನ್ನು ಪೊಲೀಸರು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನುಳಿದ ಮುಖ್ಯ ಸಮಸ್ಯೆಗಳನ್ನು ಬಿಟ್ಟು ತಮ್ಮ ಕುಟುಂಬವನ್ನೇ ಗುರಿಯಾಗಿಸಿಕೊಂಡು ಪದೇ ಪದೇ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಕೊತ್ತೂರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಮಾಧುರಿ ಮತ್ತು ಅವರ ಬೆಂಬಲಿಗರ ವಿರುದ್ಧ ಈಗಾಗಲೇ ಪ್ರತ್ಯೇಕ ಪ್ರಕರಣ ಕೂಡ ದಾಖಲಾಗಿದೆ.
ಪವನ್ ಕಲ್ಯಾಣ್ ವಿರುದ್ಧ ಅವಹೇಳನಕಾರಿ ಕಮೆಂಟ್ ಮಾಡಿದ ದೂರಿನ ಹಿನ್ನೆಲೆಯಲ್ಲಿ ಈ ಹಿಂದೆ ಪೊಲೀಸರು ಶ್ರೀನಿವಾಸ್ ಅವರಿಗೆ ನೋಟಿಸ್ ನೀಡಿದ್ದರಾದರೂ, ಅವರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ. ಇದೇ ಕಾರಣಕ್ಕೆ ಬುಧವಾರ ವಿಚಾರಣೆಗೆ ಬರುವಂತೆ ಮತ್ತೊಮ್ಮೆ ಹೊಸದಾಗಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ದುವ್ವಾಡ ಶ್ರೀನಿವಾಸ್, ತಾವು ಉಪ ಮುಖ್ಯಮಂತ್ರಿಗಳ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ತಮ್ಮ ತೇಜೋವಧೆ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ನಕಲಿ ವಿಡಿಯೋಗಳಾಗಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಎಂಎಲ್ಸಿ ಅವರ ದಿಢೀರ್ ನಾಪತ್ತೆ ಪ್ರಕರಣ ಆಂಧ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಯಾದಗಿರಿ ಸಹಕಾರಿ ಬ್ಯಾಂಕ್ ಹಗರಣಕ್ಕೆ ದುರಂತ ಅಂತ್ಯ: ಅಧ್ಯಕ್ಷ ಬಸನಗೌಡ ಆತ್ಮಹತ್ಯೆ!
