TOP NEWS

Bangladesh: ರಾಜತಾಂತ್ರಿಕ ಬಿಕ್ಕಟ್ಟಿದ್ದರೂ ತಪ್ಪದ ಭಾರತದ ಮೇಲಿನ ಅವಲಂಬನೆ; ವೀಸಾ ಕೇಂದ್ರಗಳ ಮುಂದೆ ಬಾಂಗ್ಲಾ ಜನರ ಕಿಲೋಮೀಟರ್ ಉದ್ದದ ಕ್ಯೂ

India open visa for Bangladesh people many people standing in q

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶಗಳ (Bangladesh) ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಎಷ್ಟೇ ಏರುಪೇರಾಗಿದ್ದರೂ, ಅಲ್ಲಿನ ಸಾಮಾನ್ಯ ಜನರಿಗೆ ಭಾರತದ ಮೇಲಿರುವ ಅವಲಂಬನೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರದ ಮುಂದೆ ನಿಂತಿರುವ ನೂರಾರು ಮೀಟರ್ ಉದ್ದದ ಕ್ಯೂ ಸಾಕ್ಷಿಯಾಗಿದೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಭಾರತ ಸರ್ಕಾರವು ಬಾಂಗ್ಲಾ ನಾಗರಿಕರಿಗೆ ಪ್ರವಾಸಿ ವೀಸಾ (ಟೂರಿಸ್ಟ್ ವೀಸಾ) ಸೇವೆಗಳನ್ನು ಪುನಾರಂಭಿಸಿದ್ದು, ವೀಸಾ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ವೀಸಾ ಸೇವೆ ಶುರುವಾದ ಕೇವಲ 24 ಗಂಟೆಗಳಲ್ಲಿ 1.40 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಉಭಯ ದೇಶಗಳ ನಡುವಿನ ಸಾಮಾಜಿಕ ಮತ್ತು ಆರ್ಥಿಕ ಬಾಂಧವ್ಯಕ್ಕೆ ಕನ್ನಡಿ ಹಿಡಿದಿದೆ.

ಭಾರತವೇ ಮೊದಲ ಆಯ್ಕೆ ಏಕೆ?

ರಾಜಕೀಯವಾಗಿ ಎಷ್ಟೇ ಬಿಕ್ಕಟ್ಟುಗಳಿದ್ದರೂ ಬಾಂಗ್ಲಾದೇಶಕ್ಕೆ ಭಾರತದೊಂದಿಗಿನ ಭೌಗೋಳಿಕ ಸಾಮೀಪ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶವು ಭಾರತದೊಂದಿಗೆ 4,000 ಕಿಲೋಮೀಟರ್‌ಗಿಂತಲೂ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇನ್ನು ಬಾಂಗ್ಲಾದೇಶದ ಕೆಲವು ಒಳಗಿನ ಜಿಲ್ಲೆಗಳಿಂದ ಅಲ್ಲಿನ ರಾಜಧಾನಿ ಢಾಕಾಗೆ ಹೋಗುವುದಕ್ಕಿಂತ, ಭಾರತದ ಕೋಲ್ಕತ್ತಾ ನಗರವೇ ಅವರಿಗೆ ಹತ್ತಿರವಾಗುತ್ತದೆ. ಹೀಗಾಗಿ ಬಾಂಗ್ಲಾದೇಶದ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು, ಮದುವೆ ಶಾಪಿಂಗ್ ಮಾಡಲು ಅಥವಾ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿರುವ ತಮ್ಮ ರಕ್ತಸಂಬಂಧಿಗಳನ್ನು ಭೇಟಿ ಮಾಡಲು ಭಾರತವೇ ಮೊದಲ ಆಯ್ಕೆಯಾಗಿದೆ.

ಕಳೆದ 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ದಂಗೆ ಮತ್ತು ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧ ತಳಮಟ್ಟಕ್ಕೆ ಕುಸಿದಿತ್ತು. ಆ ಸಮಯದಲ್ಲಿ ಅಲ್ಲಿನ ಭಾರತೀಯ ವೀಸಾ ಕೇಂದ್ರಗಳ ಮೇಲೆ ದಾಳಿ ನಡೆಸಿ, ನೌಕರರಿಗೆ ಬೆದರಿಕೆ ಹಾಕಲಾಗಿತ್ತು. ಈ ಕಾರಣದಿಂದಾಗಿ ಭಾರತವು ಪ್ರವಾಸಿ ವೀಸಾಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಕೇವಲ ತುರ್ತು ವೈದ್ಯಕೀಯ ವೀಸಾಗಳನ್ನು ಮಾತ್ರ ಸೀಮಿತವಾಗಿ ನೀಡಲಾಗುತ್ತಿತ್ತು. ಆ ಬಳಿಕ ಬಂದ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಪಾಕಿಸ್ತಾನದತ್ತ ಒಲವು ತೋರಿದ್ದರಿಂದ ಭಾರತ ವಿರೋಧಿ ಅಲೆ ತಾರಕಕ್ಕೇರಿತ್ತು. ಕಳೆದ ಡಿಸೆಂಬರ್‌ನಲ್ಲಿ ಭಾರತ ವಿರೋಧಿ ನಾಯಕನೊಬ್ಬನ ಕೊಲೆಯಾದಾಗ ದೊಡ್ಡ ಜನಸಮೂಹವೇ ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತ್ತು. ಸದ್ಯ ಹೊಸ ಪ್ರಧಾನಿ ತಾರಿಕ್ ರೆಹಮಾನ್ ಅಧಿಕಾರಕ್ಕೆ ಬಂದ ಮೇಲೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ, ಅಕ್ರಮ ವಲಸೆ ಮತ್ತು ನದಿ ನೀರು ಹಂಚಿಕೆಯಂತಹ ವಿಷಯಗಳಲ್ಲಿ ಇನ್ನೂ ಶೀತಲ ಸಮರ ಮುಂದುವರಿದಿದೆ.

5 ವೀಸಾ ಕೇಂದ್ರಗಳಲ್ಲಿ ಜನದಟ್ಟಣೆ

ಈ ಎಲ್ಲ ಕಹಿ ಘಟನೆಗಳ ನಡುವೆಯೂ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ಅವರು ಜೂನ್ 28 ರಂದು ವೀಸಾ ಸೇವೆ ಪುನಾರಂಭಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ, ಢಾಕಾ, ರಾಜ್‌ಶಾಹಿ, ಚಿತ್ತಗಾಂಗ್ ಸೇರಿದಂತೆ ಐದು ಪ್ರಮುಖ ಕೇಂದ್ರಗಳ ಮುಂದೆ ಒಂದು ಕಿಲೋಮೀಟರ್‌ಗೂ ಉದ್ದದ ಹಾವಿನಂತಹ ಕ್ಯೂ ಕಾಣಿಸಿಕೊಂಡಿದೆ. ಈ ಹಿಂದೆ ಬಾಂಗ್ಲಾದಲ್ಲಿ 16 ವೀಸಾ ಕೇಂದ್ರಗಳಿದ್ದವು, ಸದ್ಯಕ್ಕೆ ಕೇವಲ 5 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ವೈದ್ಯಕೀಯ ವೀಸಾ ಸಿಗುವುದು ತಡವಾಗುತ್ತಿರುವುದರಿಂದ, ತುರ್ತು ಚಿಕಿತ್ಸೆಗಾಗಿ ಕಾಯುತ್ತಿರುವ ನೂರಾರು ರೋಗಿಗಳ ಕುಟುಂಬಗಳು ಈಗ ಪ್ರವಾಸಿ ವೀಸಾ ಮೂಲಕ ಭಾರತಕ್ಕೆ ಬರಲು ಕಾಯುತ್ತಿದ್ದಾರೆ. ಚೀನಾ, ಥೈಲ್ಯಾಂಡ್ ಅಥವಾ ಸಿಂಗಾಪುರಕ್ಕೆ ಹೋಗಲು ಬಾಂಗ್ಲಾದ ಮಧ್ಯಮ ವರ್ಗದವರಿಗೆ ಆರ್ಥಿಕ ಶಕ್ತಿ ಇಲ್ಲದಿರುವುದರಿಂದ ಭಾರತವೇ ಅವರಿಗೆ ಸಂಜೀವಿನಿಯಾಗಿದೆ. ಭಾಷೆ ಮತ್ತು ಆಹಾರದ ಸಮಸ್ಯೆಯಿಲ್ಲದ ಕಾರಣ ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ದೆಹಲಿಯ ಆಸ್ಪತ್ರೆಗಳು ಇವರ ಮೊದಲ ಆದ್ಯತೆಯಾಗಿವೆ.

ಬಾಂಗ್ಲಾ ಜನರ ಈ ದಿಢೀರ್ ಭಾರತದ ಮೋಹವನ್ನು ಅಲ್ಲಿಂದ ಬಹಿಷ್ಕೃತರಾಗಿರುವ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ತೀವ್ರವಾಗಿ ಟೀಕಿಸಿದ್ದಾರೆ. ಭಾರತದ ವಿರುದ್ಧ ಘೋಷಣೆ ಕೂಗಿದವರು, ಭಾರತದ ಧ್ವಜವನ್ನು ಕಾಲಲ್ಲಿ ತುಳಿದವರು ಮತ್ತು ಹಿಂದೂಗಳನ್ನು ದ್ವೇಷಿಸುವವರಲ್ಲಿ ಎಷ್ಟು ಜನ ಇಂದು ವೀಸಾಕ್ಕಾಗಿ ಕ್ಯೂ ನಿಂತಿದ್ದಾರೆ ಎಂದು ಅವರು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ, ಭಾರತೀಯ ವೀಸಾ ಸೇವೆ ಆರಂಭವಾಗಿರುವುದು ಪಶ್ಚಿಮ ಬಂಗಾಳದ ವ್ಯಾಪಾರಿಗಳಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ದೊಡ್ಡ ಹಬ್ಬ ತಂದಿದೆ. ಕಳೆದ ಎರಡು ವರ್ಷಗಳಿಂದ ಬಾಂಗ್ಲಾ ಪ್ರವಾಸಿಗರಿಲ್ಲದೆ ಕೋಲ್ಕತ್ತಾದ ಪ್ರಸಿದ್ಧ ‘ನ್ಯೂ ಮಾರ್ಕೆಟ್’ ಮತ್ತು ಸುತ್ತಮುತ್ತಲಿನ ಉದ್ಯಮಗಳು ಭಾರಿ ನಷ್ಟ ಅನುಭವಿಸಿದ್ದವು. ಸುಮಾರು 1,000 ಕೋಟಿ ರೂಪಾಯಿಗಳಿಗೂ ಅಧಿಕ ಬಿಸಿನೆಸ್ ನಷ್ಟವಾಗಿತ್ತು. ಈಗ ಮತ್ತೆ ಬಾಂಗ್ಲಾ ಪ್ರವಾಸಿಗರು ಭಾರತಕ್ಕೆ ಲಗ್ಗೆ ಇಡುತ್ತಿರುವುದರಿಂದ ಅಲ್ಲಿನ ಹೋಟೆಲ್‌ಗಳು, ಟ್ರಾವೆಲ್ ಏಜೆನ್ಸಿಗಳು ಮತ್ತು ಬಟ್ಟೆ ಅಂಗಡಿಗಳಲ್ಲಿ ಹೊಸ ಕಳೆ ಬರಲಾರಂಭಿಸಿದೆ. ರಾಜಕೀಯ ಏನೇ ಇದ್ದರೂ, ಬಾಂಗ್ಲಾದೇಶಕ್ಕೆ ಭಾರತದ ಅಗತ್ಯ ಎಷ್ಟು ಮುಖ್ಯ ಎಂಬುದನ್ನು ಈ ವೀಸಾ ಬಿಕ್ಕಟ್ಟು ಸಾಬೀತುಪಡಿಸಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ ಈ ಮೆಟ್ರೋ ವಿಡಿಯೋ; ಆಕೆ ಕೈಲಿದ್ದ ಪುಸ್ತಕದ ಹಿಂದಿನ ರಹಸ್ಯವೇನು?

Leave a Reply

Your email address will not be published. Required fields are marked *