TOP NEWS

Satish Jarkiholi: ಸಿದ್ದರಾಮಯ್ಯ ಸೈಡ್‌ಲೈನ್ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ವಿಶ್ಲೇಷಣೆ!

Satish jarkiholi reaction about sidelining Siddaramaiah in congress

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗುತ್ತಿದ್ದಾರೆಯೇ ಎಂಬ ಚರ್ಚೆಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ವಿಶಿಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ರಾಜಕೀಯದ ವೇಗವನ್ನು ಓಡುತ್ತಿರುವ ರೈಲಿಗೆ ಹೋಲಿಸಿರುವ ಅವರು, ರಾಜಕಾರಣದಲ್ಲಿ ಸದಾ ಸಕ್ರಿಯರಾಗಿರದಿದ್ದರೆ ಜನರೇ ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ.

ವೇಗವಾಗಿ ಓಡದಿದ್ದರೆ ಟ್ರೈನ್ ಮಿಸ್ ಆಗುತ್ತೆ!

ಸಿದ್ದರಾಮಯ್ಯ ಅವರ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, “ಇವತ್ತಿನ ದಿನಗಳಲ್ಲಿ ರಾಜಕೀಯ ಅತ್ಯಂತ ವೇಗವಾಗಿ ಸಾಗುತ್ತಿದೆ. ಆ ಸ್ಪೀಡ್‌ಗೆ ತಕ್ಕಂತೆ ನಾವೂ ಓಡಬೇಕಾಗುತ್ತದೆ. ಸ್ವಲ್ಪ ನಿಧಾನವಾದ್ರೂ ಟ್ರೈನ್ ಕೈತಪ್ಪಿ ಹೋಗುತ್ತದೆ. ಒಮ್ಮೆ ರೈಲು ಮಿಸ್ ಆದ್ರೆ ಸುಮ್ಮನೆ ಕೂರಲು ಆಗಲ್ಲ; ಮುಂದಿನ ಸ್ಟೇಷನ್ ಆದ ತುಮಕೂರು ಅಥವಾ ಅರಸೀಕೆರೆಗಾದರೂ ಮುಂಚಿತವಾಗಿ ಓಡಿ ಹೋಗಿ ಆ ರೈಲನ್ನು ಹಿಡಿಯಬೇಕು. ರಾಜಕೀಯದಲ್ಲಿ ಪ್ರಯತ್ನ ನಿರಂತರವಾಗಿರಬೇಕು, ಇಲ್ಲದಿದ್ದರೆ ಜನ ನಮ್ಮನ್ನು ಮರೆತು ಹೊಸ ನಾಯಕರನ್ನು ಹುಡುಕಿಕೊಳ್ಳುತ್ತಾರೆ. ನಾನು ಲೀಡರ್ ಅಂತ ಮನೆಯಲ್ಲಿ ಕೂತಿದ್ದರೆ ನಡೆಯಲ್ಲ,” ಎಂದು ಕಟುವಾಗಿ ವಿಶ್ಲೇಷಿಸಿದರು.

ಸಿದ್ದರಾಮಯ್ಯ ಅವರದ್ದೇ ಆದ ಶೈಲಿ ಇದೆ

ಮಾಜಿ ಸಿಎಂಗಳ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ಕಳೆದ ಎರಡು ದಶಕಗಳಿಂದ ಪಕ್ಷದಲ್ಲಿದ್ದಾರೆ. ಅವರು ಮೈಸೂರಿನಲ್ಲೇ ಇದ್ದು ರಾಜಕೀಯ ಮಾಡಬಹುದು, ಅದರಲ್ಲಿ ತಪ್ಪಿಲ್ಲ. ಆದರೆ ಜನರೊಂದಿಗೆ ಸಂಪರ್ಕ ಇರುವವರೆಗಷ್ಟೇ ನಾಯಕತ್ವ ಉಳಿಯುತ್ತದೆ. ರಾಜಕಾರಣದಲ್ಲಿ ಒಬ್ಬೊಬ್ಬರದ್ದು ಒಂದೊಂದು ಸ್ಟೈಲ್. ಬಿ.ಎಸ್. ಯಡಿಯೂರಪ್ಪ ಅವರ ಶೈಲಿ ಬೇರೆ, ಸಿದ್ದರಾಮಯ್ಯ ಅವರ ಶೈಲಿ ಬೇರೆ. ಕೆಲವರು ಸದಾ ಓಡಾಡಿಕೊಂಡಿರುತ್ತಾರೆ, ಇನ್ನು ಕೆಲವರು ಒಂದೇ ಕಡೆ ಕೂತು ರಾಜಕೀಯ ಮಾಡುತ್ತಾರೆ. ಆದರೆ, ಸಿದ್ದರಾಮಯ್ಯ ಅವರು ಎಲ್ಲಿ ಎಡವಿದರು ಎಂಬ ಪ್ರಶ್ನೆಯನ್ನು ಹೈಕಮಾಂಡ್ ನಾಯಕರನ್ನೇ ಕೇಳಬೇಕು, ಏಕೆಂದರೆ ಆ ನಿರ್ಧಾರಗಳು ದಿಲ್ಲಿ ಮಟ್ಟದಲ್ಲಿ ಆಗಿರುತ್ತವೆ,” ಎಂದರು.

ಇಡಿ ದಾಳಿ ಮತ್ತು ಫೋಟೋ ವಿವಾದಕ್ಕೆ ಪ್ರತಿಕ್ರಿಯೆ

ಇದೇ ವೇಳೆ ಕಾಂಗ್ರೆಸ್ ಮುಖಂಡರ ಮೇಲಿನ ಇಡಿ (ED) ದಾಳಿಗಳ ಬಗ್ಗೆ ಮಾತನಾಡಿದ ಅವರು, ಈ ಕ್ರಮಗಳು ರಾಜಕೀಯ ದ್ವೇಷದಿಂದ ನಡೆಯುತ್ತಿವೆಯೇ ಅಥವಾ ಸಹಜವಾಗಿ ನಡೆಯುತ್ತಿವೆಯೇ ಎಂದು ಸ್ಪಷ್ಟವಾಗಲು ಇನ್ನು ಸ್ವಲ್ಪ ಸಮಯ ಬೇಕು. ಒಂದು ವೇಳೆ ಇದು ರಾಜಕೀಯ ಪ್ರೇರಿತ ದಾಳಿ ಎಂದು ಗೊತ್ತಾದರೆ ಕಾನೂನಿನ ಮೂಲಕವೇ ಎದುರಿಸುತ್ತೇವೆ ಎಂದರು. ಇನ್ನು ಕೆಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಿರಿಯ ನಾಯಕರ ಫೋಟೋ ಕೈಬಿಟ್ಟಿರುವ ವಿವಾದದ ಬಗ್ಗೆ ಕೇಳಿದಾಗ, “ಸರ್ಕಾರಿ ಕಾರ್ಯಕ್ರಮಗಳಲ್ಲಿ ಎಲ್ಲರ ಫೋಟೋಗಳನ್ನು ಹಾಕಲು ನಿಯಮಗಳಿರುತ್ತವೆ. ಇದನ್ನು ಉತ್ಸವ ಸಮಿತಿಯವರು ಮಾಡಿದ್ದಾರೋ ಅಥವಾ ಯಾರು ಮಾಡಿದ್ದಾರೋ ಅವರೇ ಉತ್ತರಿಸಬೇಕು,” ಎಂದು ಹೇಳಿ ಸಚಿವರು ಜಾರಿಕೊಂಡರು.

ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಶಿಸ್ತು ಕ್ರಮದ ಚಾಟಿ: ವಕ್ತಾರ ಎಂ.ಜಿ. ಮಹೇಶ್ 6 ವರ್ಷ ಪಕ್ಷದಿಂದ ಉಚ್ಚಾಟನೆ!

Leave a Reply

Your email address will not be published. Required fields are marked *