TOP NEWS

Shocking: ಯೂಟ್ಯೂಬ್ ನೋಡಿ ಮನೆಯಲ್ಲೇ ಹೆರಿಗೆ; ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವು

shocking tamil nadu woman made delivery by seeing youtube video lost life

ತಿರುಪುರ್: ಯೂಟ್ಯೂಬ್ (YouTube) ವಿಡಿಯೋ ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿರುವ (Shocking) ಧೃತಿಗೆಡಿಸುವ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ನಡೆದಿದೆ. ಹಿಂದಿನ ಹೆರಿಗೆಯ ವೇಳೆ ಆದ ಸಿಜೇರಿಯನ್ (C-Section) ಕಹಿ ನೆನಪಿನಿಂದಾಗಿ ಆಕೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಏನಿದು ಪ್ರಕರಣ?

ತಿರುಪುರ್ ಜಿಲ್ಲೆಯ ಉತ್ತಕುಳಿ ಸಮೀಪದ ಪುಂಜೈ ತಲವಾಯಿಪಾಳ್ಯಂ ನಿವಾಸಿ ಶಶಿಕಲಾ (32) ಜೂನ್ 24ರ ಮುಂಜಾನೆ ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಅವರಿಗೆ ತೀವ್ರ ರಕ್ತಸ್ರಾವ ಶುರುವಾಗಿದ್ದು, ಪ್ರಜ್ಞೆ ಕಳೆದುಕೊಂಡು ಕೋಮಾ ಸ್ಥಿತಿಗೆ ತಲುಪಿದ್ದಾರೆ. ತಕ್ಷಣವೇ ಅವರನ್ನು ಪೆರುಂದುರೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ರಾಯಲ್ ಕೇರ್ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ಜೂನ್ 28) ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಶಶಿಕಲಾ ಪತಿ ಕುಳಂದೈಸಾಮಿ, ತಮಗೆ 2019ರಲ್ಲಿ ಮದುವೆಯಾಗಿದ್ದು, 2020ರಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಮೊದಲ ಹೆಣ್ಣು ಮಗು ಜನಿಸಿತ್ತು ಎಂದು ಹೇಳಿದ್ದಾರೆ. ಆ ಹೆರಿಗೆಯ ನಂತರ ಶಶಿಕಲಾ ಅವರಿಗೆ ತೀವ್ರ ಬೆನ್ನುನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಈ ಕಾರಣದಿಂದಾಗಿ ಎರಡನೇ ಬಾರಿ ಗರ್ಭಿಣಿಯಾದಾಗ ಆಕೆ ಆಸ್ಪತ್ರೆಗೆ ಹೋಗಲು ಸಂಪೂರ್ಣವಾಗಿ ನಿರಾಕರಿಸಿದ್ದರು. ಒಮ್ಮೆಯೂ ಪ್ರಸವಪೂರ್ವ ತಪಾಸಣೆಗೆ ಒಳಗಾಗಿರಲಿಲ್ಲ. ಪತಿ ಮತ್ತು ಸಂಬಂಧಿಕರು ಎಷ್ಟು ಬಾರಿ ಬಲವಂತ ಮಾಡಿದರೂ ಆಸ್ಪತ್ರೆಗೆ ಹೆಜ್ಜೆ ಇಡದ ಶಶಿಕಲಾ, ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮನೆಯಲ್ಲೇ ನೈಸರ್ಗಿಕವಾಗಿ ಹೆರಿಗೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

ಜೂನ್ 23ರ ರಾತ್ರಿ ಶಶಿಕಲಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಜೂನ್ 24ರ ಮುಂಜಾನೆ 5.42ಕ್ಕೆ ಮನೆಯಲ್ಲೇ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಹುಟ್ಟಿದ ತಕ್ಷಣ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ತೀವ್ರ ರಕ್ತಸ್ರಾವದಿಂದಾಗಿ ಅವರು ಕೋಮಾ ಸ್ಥಿತಿಗೆ ಜಾರಿದ್ದಾರೆ. ಈ ನಡುವೆ, ಕುನ್ನತ್ತೂರು ಪ್ರಾದೇಶಿಕ ವೈದ್ಯಕೀಯ ಅಧಿಕಾರಿ ನಿತ್ಯಾ ಅವರು, ಮಹಿಳೆಯೊಬ್ಬರು ಯೂಟ್ಯೂಬ್ ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದರಿಂದ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಉತ್ತಕುಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಚಿಕಿತ್ಸೆಯಲ್ಲಿದ್ದ ಮಹಿಳೆ ಭಾನುವಾರ ಮೃತಪಟ್ಟಿರುವುದರಿಂದ, ಈಗ ಪೊಲೀಸರು ಇದನ್ನು ಸಾವು ನಿಗೂಢ ಪ್ರಕರಣ ಎಂದು ಬದಲಾಯಿಸಿಕೊಂಡು ಮನೆಯಲ್ಲೇ ಹೆರಿಗೆ ಮಾಡಿಸಲು ಸಾಥ್ ನೀಡಿದ ಪ್ರತಿಯೊಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಸದ್ಯ ನವಜಾತ ಶಿಶು ಸುರಕ್ಷಿತವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಉದ್ಯಮಿ ವೈಶಾಖ್ ಸಾವು ಪ್ರಕರಣ: ಆತ್ಮಹತ್ಯೆಗೂ ಮುನ್ನ ನಟಿ ಕೃಷಿ ತಾಪಂಡಗೆ ಬಂದಿತ್ತು ಮೆಸೇಜ್

Leave a Reply

Your email address will not be published. Required fields are marked *